ಬೆಂಗಳೂರು: ಬೆಂಗಳೂರಿನಲ್ಲಿ ಕನ್ನಡ ಹಾಗೂ ಇತರ ಭಾಷೆಗಳಿಗೆ ಸಂಬಂಧಿಸಿದಂತೆ ದಿನಕ್ಕೊಂದು ಜಗಳ, ವಿವಾದಗಳು ಇರುತ್ತದೆ. ಕೆಲವೊಂದು ಕಡೆ ಕನ್ನಡ ಮಾತನಾಡುವ ಪ್ರಯತ್ನ, ಕನ್ನಡ ಕಲಿಯುವ ಆಸಕ್ತಿಯನ್ನುಕೆಲವರು ತೋರುತ್ತಾರೆ. ಅದರಲ್ಲೂಇಂತಹ ವಿಷಯಗಳಲ್ಲಿ ಆಸಕ್ತಿ ತೋರುವವರಲ್ಲಿ ವಿದೇಶಿಗರು ಹೆಚ್ಚು. ಆದರೆ ಇಲ್ಲೊಂದು ಕನ್ನಡ ಭಾಷೆಯ ಪ್ರೇಮ ಹಾಗೂ ಕಲಿಕೆಯ ಬಗ್ಗೆ ಗುಜರಾತಿನ ತಾಯಿಯೊಬ್ಬರು ಮಕ್ಕಳಿಗೆ ಸಾರ್ವಜನಿಕವಾಗಿ ಹೇಳಿಕೊಟ್ಟಿದ್ದಾರೆ. ಇದೀಗ ಘಟನೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ರೆಡ್ಡಿಟ್ ಪೋಸ್ಟ್ವೊಂದನ್ನು ಹಂಚಿಕೊಳ್ಳಲಾಗಿದೆ. ಬೆಂಗಳೂರಿನ ಬಸವನಗುಡಿಯಲ್ಲಿ ಈ ಘಟನೆ ನಡೆದಿದೆ. ಈ ಹೃದಯಸ್ಪರ್ಶಿ ಘಟನೆಗೆ ಅನೇಕ ಬಳಕೆದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ ಸಾಂಸ್ಕೃತಿಕ ಸಮೀಕರಣ ಮತ್ತು ಭಾಷಾ ಕಲಿಕೆಯ ಕುರಿತು ಚರ್ಚೆಗೆ ಗ್ರಾಸವಾಗಿದೆ. ದಕ್ಷಿಣ ಬೆಂಗಳೂರಿನಲ್ಲಿ ವಾಸವಾಗಿರುವ ಗುಜರಾತಿ ದಂಪತಿಗಳು ಕನ್ನಡ ಸಂಸ್ಕೃತಿಯನ್ನು ಹೇಗೆ ಅಳವಡಿಸಿಕೊಂಡಿದ್ದಾರೆ ಎಂಬುದನ್ನು ಈ ಮೂಲಕ ತಿಳಿಸಿದ್ದಾರೆ.
ಗಾಂಧಿ ಬಜಾರ್ ವೃತ್ತದ ಬಳಿಯ ಸ್ಥಳೀಯ ಕಾಫಿ ಪುಡಿ ಅಂಗಡಿಯಲ್ಲಿ ಶಾಪಿಂಗ್ ಮಾಡುವಾಗ ಗುಜರಾತಿ ತಾಯಿಯೊಬ್ಬರು ತನ್ನ ಚಿಕ್ಕ ಮಗಳನ್ನು ಕನ್ನಡದಲ್ಲಿ ಮಾತನಾಡುವಂತೆ ಹೇಳುತ್ತಾರೆ. ಈ ಗುಜರಾತಿನ ದಂಪತಿಗಳು ಕಾಫಿ ಖರೀದಿ ಮಾಡಲು ಬಂದಾಗ ತಾಯಿ ತನ್ನ ಮಗಳನ್ನು ಮುಂದಕ್ಕೆ ಹೋಗುವಂತೆ ಹೇಳಿ ಕನ್ನಡದಲ್ಲಿ ಮಾತನಾಡುವಂತೆ ಹೇಳುತ್ತಾರೆ. ಆದರೆ ಇದು ಕಾಫಿ ಖರೀದಿ ಮಾಡಲು ಮಾತ್ರವಲ್ಲ ಆಕೆಗೆ ಕನ್ನಡದ ಗೌರವ ಹಾಗೂ ಪ್ರಾಮುಖ್ಯತೆಯನ್ನು ತಿಳಿಸುವಂತೆ ಇತ್ತು. ಈ ತಾಯಿ ತನ್ನ ಮಗಳಿಗೆ ಕನ್ನಡದಲ್ಲಿ ಮಾತ್ರ ಮಾತನಾಡಿ. ಇಂಗ್ಲಿಷ್ ಅಥವಾ ಗುಜರಾತಿ ಬೇಡ, ಮಗು ಆರಂಭದಲ್ಲಿ ಸ್ವಲ್ಪ ತಡವಡಿಸಿದರೂ ತಾಯಿಯ ಮೇಲೆ ನಂಬಿಕೆ ಇಟ್ಟುಕೊಂಡು ಕನ್ನಡದಲ್ಲಿ ಮಾತನಾಡಿದೆ. ಆ ಮಗುವಿನ ಪ್ರಯತ್ನ ನೋಡಿ, ಅಲ್ಲಿದ್ದ ಜನ ತುಂಬಾ ಸಂತೋಷ ವ್ಯಕ್ತಪಡಿಸಿದ್ದಾರೆ.
ಇನ್ನು ಈ ಪೋಸ್ಟ್ನ್ನು ನೋಡಿ ಹಲವು ಬಳಕೆದಾರರು ರೆಡ್ಡಿಟ್ನಲ್ಲಿ ಕಾಮೆಂಟ್ ಮಾಡಿದ್ದಾರೆ. ಕೆಲವರು ವ್ಯವಹಾರಕ್ಕಾಗಿ ಕಲಿಯುತ್ತಾರೆ. ಇಂತಹ ಮಕ್ಕಳು ಸಾಂಸ್ಕೃತಿಕವಾಗಿ ಕಲಿಯುತ್ತಾರೆ ಎಂದು ಒಬ್ಬ ಬಳಕೆದಾರ ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ ಬೆಂಗಳೂರು ಬಲವಾದ, ಸಾಂಸ್ಕೃತಿಕವಾಗಿ ಬೇರೂರಿರುವ ಜನಸಮೂಹವನ್ನು ಹೊಂದಿದೆ, ಆದ್ದರಿಂದ ಹೊಸಬರು ಅದರ ಭಾಗವೆಂದು ಭಾವಿಸಲು ಭಾಷೆಯನ್ನು ಹೊಂದಿಕೊಳ್ಳುವುದು ಮತ್ತು ಕಲಿಯುವುದು ಸಹಜ ಎಂದು ಹೇಳಿದ್ದಾರೆ. ನಾನು ಗುಜರಾತಿ, ವ್ಯವಹಾರ ಎಂದಾದರೆ ನಾವು ಮ್ಯಾಂಡರಿನ್ ಕೂಡ ಮಾತನಾಡುತ್ತೇವೆ ಎಂದು ಮತ್ತೊಬ್ಬ ಬಳಕೆದಾರ ಹೇಳಿದ್ದಾರೆ. ಭಾಷೆ ಒಂದು ಅಡಚಣೆಯಾಗಬಾರದು ಎಂದು ಹಲವರು ಒಪ್ಪಿಕೊಂಡರು. “ಅವೆನ್ಯೂ ರಸ್ತೆಯಲ್ಲಿರುವ ಗುಜರಾತಿ ಅಥವಾ ಮಾರ್ವಾಡಿ ಅಂಗಡಿಗಳಿಗೆ ಹೋಗಿ, ಅವರು ಕನ್ನಡ, ತೆಲುಗು, ತಮಿಳು ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತಾರೆ. ‘ದಕ್ಷಿಣ ಭಾರತೀಯ ಭಾಷೆಗಳು ಕಠಿಣ’ ಎಂದು ಯಾರಾದರೂ ಹೇಳುತ್ತಿದ್ದರೆ ಇದು ಉತ್ತರವಾಗಲಿದೆ ಎಂದು ಇನ್ನೊಬ್ಬ ಬಳಕೆದಾರ ಹೇಳಿದ್ದಾರೆ.
For More Updates Join our WhatsApp Group :