ಬೆಂಗಳೂರು: ಬೆಂಗಳೂರು ನಗರ ಸಿವಿಲ್ ನ್ಯಾಯಾಲಯಕ್ಕೆ ಇ-ಮೇಲ್ ಮುಖಾಂತರ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಆವರಣದಲ್ಲಿ ಬಾಂಬ್ ಇಟ್ಟಿರುವುದಾಗಿ, ನಗರ ಸಿವಿಲ್ ನ್ಯಾಯಾಲಯದ ಇ-ಮೇಲ್ ಐಡಿಗೆ ಬೆದರಿಕೆ ಸಂದೇಶ ಬಂದಿದೆ. ಹಲಸೂರು ಗೇಟ್ ಠಾಣೆ ಪೊಲೀಸರು, ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿತು. ಕೋರ್ಟ್ ಆವರಣದಲ್ಲಿ ಸದ್ಯಕ್ಕೆ ಯಾವುದೇ ಸ್ಫೋಟಕ ವಸ್ತು ಕಂಡುಬಂದಿಲ್ಲ. ಯಾವುದೇ ಬಾಂಬ್ ಪತ್ತೆಯಾಗದ ಹಿನ್ನೆಲೆಯಲ್ಲಿ ಹುಸಿ ಬಾಂಬ್ ಬೆದರಿಕೆ ಸಂದೇಶ ಎಂದು ಗೊತ್ತಾಗಿದೆ. ಈ ಹಿಂದೆ ಬೇರೆ ಕಡೆಗಳಿಗೆ ಬಂದಿದ್ದ ಬೆದರಿಕೆ ಸಂದೇಶದಂತೆ ನ್ಯಾಯಾಲಯಕ್ಕೆ ಬೆದರಿಕೆ ಸಂದೇಶ ಬಂದಿದೆ.
ಕಳೆದ ತಿಂಗಳು ಜುಲೈ 27 ರಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಕಚೇರಿ ಹಾಗೂ ದೇವನಹಳ್ಳಿಯಲ್ಲಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಫೋಟಿಸುವುದಾಗಿ ಇ-ಮೇಲ್ ಸಂದೇಶ ಬಂದಿತ್ತು. ಮಾಹಿತಿ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ತೆರಳಿದ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಹಾಗೂ ಬಾಂಬ್ ಪತ್ತೆ ದಳ ಸಿಬ್ಬಂದಿ ಪರಿಶೀಲನೆ ನಡೆಸಿದ್ದರು.ಯಾವುದೇ ಬಾಂಬ್ ಪತ್ತೆಯಾಗದ ಹಿನ್ನೆಲೆಯಲ್ಲಿ ಹುಸಿ ಬಾಂಬ್ ಬೆದರಿಕೆ ಸಂದೇಶ ಎಂದು ಗೊತ್ತಾಗಿತ್ತು. ಬಾಂಬ್ ಬೆದರಿಕೆ ಸಂದೇಶದಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಬೆಂಗಳೂರು ನಗರದ ಆರ್.ಆರ್ ನಗರ, ಕೆಂಗೇರಿ ಸೇರಿದಂತೆ 40 ಖಾಸಗಿ ಶಾಲೆಗಳಿಗೆ ಇತ್ತೀಚಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು. roadkill333@atomicmail.io ಎಂಬ ಇ-ಮೇಲ್ನಿಂದ ಸಂದೇಶ ಬಂದಿತ್ತು. ಮಾಹಿತಿ ತಿಳಿದು ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯದಳ ಸಿಬ್ಬಂದಿ ಮಕ್ಕಳನ್ನು ಹೊರಗೆ ಕಳುಹಿಸಿ ತಪಾಸಣೆ ಮಾಡಿದ್ದರು.
ಬೆಂಗಳೂರಿನ ಸೋಲದೇವನಹಳ್ಳಿಯಲ್ಲಿರುವ ಪ್ರತಿಷ್ಠಿತ ಆಚಾರ್ಯ ಕಾಲೇಜಿಗೂ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು. ಜತೆಗೆ, ಪ್ರಾಂಶುಪಾಲರಿಗೆ ಕೊಲೆ ಬೆದರಿಕೆಯನ್ನೂ ಹಾಕಲಾಗಿತ್ತು. ಅದಕ್ಕೂ 2 ದಿನಗಳ ಮೊದಲು, ಅಂದರೆ ಏಪ್ರಿಲ್ 27 ರಂದು ಬೆಂಗಳೂರು ವಾರಾಣಸಿ ಇಂಡಿಗೋ ವಿಮಾನದಲ್ಲಿ ಬಾಂಬ್ ಇದೆ ಎಂಬ ಹುಸಿ ಬೆದರಿಕೆ ಸಂದೇಶ ಬಂದಿತ್ತು.
For More Updates Join our WhatsApp Group :
