ಕಾಂಗ್ರೆಸ್‌ಗೆ ಚುನಾವಣೆಗಳಲ್ಲಿ ಸೋಲುವ ಭಯ ಉಂಟಾಗಿದೆ
ಬೆಂಗಳೂರು: ದೇಶದ ಪ್ರಧಾನಿಯನ್ನು ಟೆರರಿಸ್ಟ್ ಎಂದು ಕರೆದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡಲೇ ಕ್ಷಮೆ ಯಾಚಿಸಬೇಕು. ಇವರು ಕಾಂಗ್ರೆಸ್‌ನ ಅಧ್ಯಕ್ಷ ಸ್ಥಾನದಲ್ಲಿರಲು ಸೂಕ್ತರಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿ ಅತಿ ಹೆಚ್ಚು ದಿನಗಳ ಕಾಲ ಪ್ರಧಾನಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರ ದೇಶಪ್ರೇಮದ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ ಎತ್ತಿ ಟೆರರಿಸ್ಟ್ ಎಂಬ ಪದಬಳಕೆ ಮಾಡಿದ್ದಾರೆ. ಹಿಂದೆ ಅವರನ್ನು ಚಾಯ್‌ವಾಲಾ ಎಂದು ಟೀಕೆ ಮಾಡಿದ್ದಾಗ ಅದನ್ನೇ ಅಭಿಯಾನ ಮಾಡಲಾಯಿತು. ಇವರ ಟೀಕೆಗಳೇ ಬಿಜೆಪಿಗೆ ವರವಾಗಿದೆ. ಜೀವನದಲ್ಲಿ ಇನ್ನೆಂದೂ ಅಧಿಕಾರ ಸಿಗಲ್ಲ ಎಂಬ ಆತಂಕದಿಂದ ಕಾಂಗ್ರೆಸ್ ನಾಯಕರು ಈ ರೀತಿ ಮಾತಾಡುತ್ತಿದ್ದಾರೆ. ಎದ್ದು ಓಡಾಡಲು ಸಾಧ್ಯವಾಗದ ನಿವೃತ್ತ ಸ್ಥಿತಿಯಲ್ಲಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದರು.
ಯಾರು ದೇಶದ್ರೋಹಿ ಎಂಬುದು ಇಡೀ ದೇಶಕ್ಕೆ ಗೊತ್ತಿದೆ. ರಾಜ್ಯದಲ್ಲಿ ಕುಕ್ಕರ್ ಬಾಂಬ್ ಸ್ಫೋಟವಾದಾಗ ಅವರನ್ನು ಬ್ರದರ್ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದರು. ಖರ್ಗೆಯವರ ಬಲಗೈ ಮುಖಂಡನ ಬೆಂಬಲಿಗರು ವಿಧಾನಸೌಧದಲ್ಲಿ ಪಾಕಿಸ್ತಾನಕ್ಕೆ ಜೈಕಾರ ಕೂಗಿದ್ದರು. ಅವರ ಬಗ್ಗೆಯಾಗಲೀ, ಕುಕ್ಕರ್ ಬಾಂಬ್ ಬಗ್ಗೆಯಾಗಲೀ, ಪಾಕಿಸ್ತಾನದ ಬಗ್ಗೆಯಾಗಲೀ ಖರ್ಗೆ ಪ್ರತಿಕ್ರಿಯೆ ನೀಡಿಲ್ಲ. ಸರ್ಜಿಕಲ್ ಸ್ಟ್ರೈಕ್ ಆದಾಗ ಇವರೆಲ್ಲರೂ ಯೋಧರ ಬಗ್ಗೆ ಟೀಕೆ ಮಾಡಿದ್ದರು. ಕೂಡಲೇ ಖರ್ಗೆಯವರು ದೇಶದ ಜನರ ಕ್ಷಮೆ ಯಾಚಿಸಬೇಕು. ಈ ಹೇಳಿಕೆ ವಿರುದ್ಧ ಗುರುವಾರ ವಿಧಾನಸೌಧದ ಮುಂಭಾಗ ಬೆಂಗಳೂರಿನ ಶಾಸಕರೊಂದಿಗೆ ಪ್ರತಿಭಟನೆ ಮಾಡಲಿದ್ದೇವೆ ಎಂದರು.
ಪಹಲ್ಗಾಮ್‌ನಲ್ಲಾದ ಭಯೋತ್ಪಾದಕ ದಾಳಿಯನ್ನು ಮರೆಯಲು ಸಾಧ್ಯವಿಲ್ಲ. ಭಾರತೀಯ ಯೋಧರು ಆಪರೇಶನ್ ಸಿಂದೂರ ಮೂಲಕ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಿದ್ದಾರೆ. ಪ್ರಪಂಚದ ಭೂಪಟದಿಂದ ಪಾಕಿಸ್ತಾನವನ್ನು ತೆಗೆದುಹಾಕುವಂತೆ ಮಾಡಬೇಕಿದೆ. ಆಗ ಮಾತ್ರ ಶಾಂತಿ ನೆಲೆಸಲು ಸಾಧ್ಯ ಎಂದರು.
For More Updates Join our WhatsApp Group :




