ಶಿವಮೊಗ್ಗ: ಮಳೆಗಾಲದ ಸಂದರ್ಭದಲ್ಲಿ ಜೋಗ ಜಲಪಾತದ ಸೌಂದರ್ಯ ನೋಡಲು ಎರಡು ಕಣ್ಣು ಸಾಲದು. ಅದರಲ್ಲೂ ಲಿಂಗನಮಕ್ಕಿ ಅಣೆಕಟ್ಟೆಯಿಂದ ನೀರು ಬಿಡುಗಡೆ ಮಾಡಿದರೆ ಜಲಪಾತ ಇನ್ನಷ್ಟು ಸುಂದರ. ಸದ್ಯ ಪ್ರವಾಸಿಗರು ಈ ಅದ್ಭುತ ದೃಶ್ಯವನ್ನು ಕಣ್ತುಂಬಿಕೊಳ್ಳಲು ಹರಿದುಬರುತ್ತಿದ್ದಾರೆ. ರೌದ್ರರಮಣೀಯವಾಗಿ ಧುಮ್ಮಿಕ್ಕುತ್ತಿರುವ ಜೋಗ ಜಲಪಾತ
ವಿಶ್ವ ಪ್ರಸಿದ್ಧ ಜೋಗ ಜಲಪಾತ ನೋಡುವುದಕ್ಕೆ ಪ್ರವಾಸಿಗರು ಕಾತುರದಿಂದ ಕಾಯುತ್ತಿದ್ದರು. ಮಲೆನಾಡಿನಲ್ಲಿ ಸುರಿದ ಧಾರಕಾರ ಮಳೆಯಿಂದ ಜೋಗ ಜಲಪಾತ ಕಳೆಕಟ್ಟಿದೆ. ಪ್ರವಾಸಿಗರನ್ನ ತನ್ನತ್ತ ಸೆಳೆಯುತ್ತಿದೆ. ಮಳೆಗಾಲದಲ್ಲಿ ಸ್ವರ್ಗದಂತಿರುವ ಪ್ರಕೃತಿ ಮಡಲಿನಲ್ಲಿರುವ ಜೋಗ ಫಾಲ್ಸ್ ಸೌಂದರ್ಯ ಮಳೆಗಾಲದಲ್ಲಿ ನೂರಪಟ್ಟು ಜಾಸ್ತಿಯಾಗಿದೆ.
ಮುಂಗಾರು ಮಳೆಯ ಅಬ್ಬರದಿಂದ ಮಲೆನಾಡಿನ ಪ್ರಮುಖ ನದಿಗಳು ತುಂಬಿಹರಿಯುತ್ತಿದೆ. ಲಿಂಗನಮಕ್ಕಿ ಜಲಾಶಯ ಕೂಡ ಭರ್ತಿಯಾಗಿದೆ. ಅಣೆಕಟ್ಟೆಯ ಐದು ಗೇಟ್ ಓಪನ್ ಮಾಡಿ ನಿನ್ನೆ ಶರಾವತಿ ನದಿಗೆ 3500 ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲಾಗಿದೆ. ಅಣೆಕಟ್ಟೆಯಿಂದ ಹಾಲ್ನೊರೆಯಂತೆ ಭೋರ್ಗರೆದು ಹರಿಯುವ ನೀರು ಕಂಡು ನೆರೆದಿದ್ದ ಪ್ರವಾಸಿಗರು ಪುಳಕಿತರಾದ್ದರು.
ಲಿಂಗನಮಕ್ಕಿ ಡ್ಯಾಂನಿಂದ ನೀರು ಬಿಟ್ಟರೆ ಅದು ಜೋಗ್ ಫಾಲ್ಸ್ ಮೂಲಕ ಹರಿದು ಮುಂದೆ ವಿದ್ಯುತ್ ಉತ್ಪಾದನೆಗೆ ಬಳಕೆ ಆಗುತ್ತದೆ. ಜೋಗಫಾಲ್ಸ್ ಮೈದುಂಬಿ ಹರಿಯುತ್ತಿದ್ದು, ರಾಜ, ರಾಣಿ, ರೋರರ್, ರಾಕೆಟ್ ಗಾಂಭೀರ್ಯದಿಂದ ಧುಮ್ಮಿಕ್ಕುತ್ತಿವೆ.
ಜೋಗದ ಸಿರಿಯ ಸೌಂದರ್ಯ ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡೇ ಹರಿದುಬರುತ್ತಿದೆ. 960ಅಡಿ ಎತ್ತರದಿಂದ ನಾಲ್ಕು ಕಡೆ ನೀರು ಮೇಲಿಂದ ಕೆಳಗೆ ಅಪ್ಪಳಿಸುವುದನ್ನು ನೋಡಿ ಪ್ರವಾಸಿಗರು ರೋಮಾಂಚಗೊಂಡರು.
ಸದ್ಯ ಮಳೆ ನೀರಿನಿಂದಲೇ ಜೋಗ ಈ ಪರಿ ಮೈದುಂಬಿಕೊಂಡಿದೆ. ಲಿಂಗನಮಕ್ಕಿ ಡ್ಯಾಂನಿಂದ ಹೆಚ್ಚು ನೀರು ಬಿಟ್ಟರೇ ಜಲಪಾತ ಸಂಪೂರ್ಣ ಮೈದುಂಬಿಹರಿಯಲಿದೆ.
For More Updates Join our WhatsApp Group :
