ಮೈಸೂರು: ಬೆಚ್ಚಿ ಬೀಳಿಸುವಂಥ ಅಪರಾಧ ಕೃತ್ಯವೊಂದು ಮೈಸೂರಿನಲ್ಲಿ ನಡೆದಿದೆ. ಲಾಡ್ಜ್ ವೊಂದರಲ್ಲಿ ಪ್ರಿಯಕರನೊಬ್ಬ ವಿವಾಹಿತ ಮಹಿಳೆಯ ಬಾಯಿಗೆ ಜಿಲೆಟಿನ್ ಕಡ್ಡಿ ಇರಿಸಿ ಸ್ಫೋಟಿಸಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ನಂತರ ಇದು ಮೊಬೈಲ್ ಸ್ಫೋಟದಿಂದ ಆದದ್ದು ಎಂದು ಕಥೆ ಕಟ್ಟಲು ಯತ್ನಿಸಿ ಸಿಕ್ಕಿಬಿದ್ದಿದ್ದಾನೆ. ಈ ಘಟನೆ ಮೈಸೂರಿನ ಸಾಲಿಗ್ರಾಮ ತಾಲ್ಲೂಕಿನ ಭೇರ್ಯ ಗ್ರಾಮದಲ್ಲಿರುವ ಲಾಡ್ಜ್ನಲ್ಲಿ ನಡೆದಿದ್ದು, ಗೆರಸನಹಳ್ಳಿ ಗ್ರಾಮದ ರಕ್ಷಿತಾ (20) ಎಂಬಾಕೆಯನ್ನು ಪ್ರಿಯಕರ ಬಿಳಿಕೆರೆ ಗ್ರಾಮದ ಸಿದ್ಧರಾಜು ಎಂಬಾತ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಗೆರಸನಹಳ್ಳಿಯ ನಿವಾಸಿ 20 ವರ್ಷದ ರಕ್ಷಿತಾ ಕೇರಳದ ಸುಭಾಷ್ ಎಂಬಾತನೊಂದಿಗೆ ವಿವಾಹವಾಗಿದ್ದಳು. ಈ ದಂಪತಿಗೆ 2 ವರ್ಷದ ಮುದ್ದಾದ ಮಗು ಕೂಡ ಇದೆ. ಆದ್ರೆ ಈಕೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಸಿದ್ದರಾಜು ಜೊತೆಗಿನ ವಿವಾಹಪೂರ್ವ ಪ್ರೇಮಾಕುಂರ ಮದುವೆಯಾದ ಬಳಿಕವೂ ಮುಂದುವರೆದಿತ್ತು ಎನ್ನಲಾಗಿದೆ. ಹೌದು.., ಈ ಸಿದ್ದರಾಜು ಮೃತ ರಕ್ಷಿತಾಗೆ ಹತ್ತಿರದ ಸಂಬಂಧಿ. ಮದುವೆಗೂ ಮುನ್ನ ಈ ಸಿದ್ದರಾಜು ಮೃತ ರಕ್ಷಿತಾಳನ್ನ ಮದುವೆಯಾಗಬೇಕು ಎಂದುಕೊಂಡಿದ್ದ. ಆದರೆ ಮನೆಯವರು ಕೇರಳದ ಯುವಕನ ಜೊತೆ ಮದುವೆ ಮಾಡಿದ್ದಾರೆ. ಆದ್ರೂ ಈ ಜೋಡಿ ಮದುವೆಯಾದ ಬಳಿಕವೂ ಸಂಬಂಧ ಮುಂದುವೆರೆಸಿತ್ತು. ಕೇರಳದಿಂದ ತವರು ಮನೆಗೆ ಬಂದ ರಕ್ಷಿತಾ ಪ್ರಿಯಕರ ಸಿದ್ದರಾಜು ಜೊತೆ ಸುತ್ತಾಟ ನಡೆಸುತ್ತಿದ್ದಳು.
ಅದರಂತೆ ಕಳೆದ ಶುಕ್ರವಾರ ಮಗುವನ್ನ ಬಿಟ್ಟು ಕೇರಳದಲ್ಲಿ ಅತ್ತೆಗೆ ಉಷಾರಿಲ್ಲ ಎಂದು ಸುಳ್ಳು ಹೇಳಿ ಮನೆಯಿಂದ ಹೋಗಿದ್ದಾಳೆ. ಬಳಿಕ ಪ್ರಿಯಕರ ಸಿದ್ದರಾಜು ಜೊತೆ ಕೆ.ಆರ್. ನಗರದ ಕಪ್ಪಡಿ ಕ್ಷೇತ್ರದ ದೇವಸ್ಥಾನಕ್ಕೆ ಹೋಗಿದ್ದಾರೆ. ಬಳಿಕ ಸಾಲಿಗ್ರಾಮ ತಾಲೂಕಿನ ಭೇರ್ಯ ಗ್ರಾಮದಲ್ಲಿರುವ ಎಸ್ ಜಿ ಅರ್ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ರೂಮ್ ಪಡೆದು ಉಳಿದು ಕೊಂಡಿದ್ದಾರೆ. ಬಳಿಕ ನಡೆದಿದ್ದು ಮಾತ್ರ ಘೋರ ಕಗ್ಗೊಲೆ.
ಲಾಡ್ಜ್ ನಲ್ಲಿ ಇದ್ದ ಇಬ್ಬರ ನಡುವೆ ಗಲಾಟೆಯಾಗಿದೆ. ಸಿದ್ದರಾಜು ಮೊದಲೇ ಪ್ಲಾನ್ ಮಾಡಿದ್ದಂತೆ ಜಿಲೆಟಿನ್ ಕಡ್ಡಿಯನ್ನ ಬಾಯಿಗೆ ಇಟ್ಟು ಸ್ಫೋಟ ಮಾಡಿದ್ದಾನೆ. ಪರಿಣಾಮ ಸ್ಫೋಟದ ತೀವ್ರತೆಗೆ ರಕ್ಷಿತಾಳ ಮುಖ ಛಿದ್ರವಾಗಿದ್ದು, ಲಾಡ್ಜ್ ಸಿಬ್ಬಂದಿ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಬಳಿಕ ಮೊಬೈಲ್ ಬ್ಲಾಸ್ಟ್ ಎಂದು ಕಥೆ ಕಟ್ಟಿದ್ದಾನೆ. ಇನ್ನು ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಬಂದ ಪೊಲೀಸರು ವಿಚಾರಣೆ ಮಾಡಿದ ಮೇಲೆ ಕೊಲೆ ರಹಸ್ಯ ಬೆಳಕಿಗೆ ಬಂದಿದೆ.
ಇನ್ನು ಈ ರಕ್ಷಿತಾ, ಸಿದ್ದರಾಜು ಜೊತೆ ಸಂಬಂಧ ಮುಂದುವೆಸಿದ್ದ ವಿಚಾರ ಮನೆಯವರಿಗೂ ಗೊತ್ತಿಲ್ಲವಂತೆ. ಸದ್ಯ ಈ ಸಂಬಂಧ ಸಾಲಿಗ್ರಾಮ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಸಿದ್ದರಾಜುವನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆ ನಂತರವಷ್ಟೇ ರಕ್ಷಿತಾ ಕೊಲೆಗೆ ನಿಖರ ಕಾರಣ ತಿಳಿದು ಬರಲಿದೆ. ಇದೆಲ್ಲಾ ಏನೇ ಇರಲಿ ಮದುವೆಯಾಗಿ ಪತಿ ಮಕ್ಕಳ ಜೊತೆ ಆರಾಮಾಗಿ ಇರಬೇಕಾದ ರಕ್ಷಿತಾ ಮಾಜಿ ಪ್ರಿಯಕರನ ಜೊತೆ ಹೋಗಿ ಕೊಲೆಯಾಗಿದ್ದು ಮಾತ್ರ ದುರಂತ.