ಬೆಂಗಳೂರು: ದೆಹಲಿಯ ಕೆಂಪುಕೋಟೆ ಬಳಿ ಕಾರು ಸ್ಫೋಟ ಹಿನ್ನೆಲೆ ಬೆಂಗಳೂರಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೈಅಲರ್ಟ್ ಘೋಷಿಸಲಾಗಿದ್ದು, ಏರ್ಪೋರ್ಟ್ಗೆ ಬರುವ & ಹೋಗುವ ವಾಹನಗಳ ಮೇಲೆ ಹದ್ದಿನಕಣ್ಣಿಡಲಾಗಿದೆ. ಏರ್ಪೋಟ್ ಭದ್ರತೆಗೆ ಹೆಚ್ಚುವರಿ ಶಸ್ತ್ರ ಸಜ್ಜಿತ ಸಿಐಎಸ್ಎಫ್ ನಿಯೋಜನೆ ಜೊತೆಗೆ ವಿಮಾನ ನಿಲ್ದಾಣದ ಒಳ & ಹೊರ ಆವರಣದಲ್ಲಿ ಪ್ಯಾಟ್ರೋಲಿಂಗ್ ಗಸ್ತು ಹೆಚ್ಚಳ ಮಾಡಲಾಗಿದೆ. ಏರ್ಪೋರ್ಟ್ಗೆ ಬರುವ ಪ್ರಯಾಣಿಕರು, ಸಿಬ್ಬಂದಿಯ ತಪಾಸಣೆ ಮಾಡಲಾಗುತ್ತಿದೆ. ಪಾರ್ಕಿಂಗ್ ಏರಿಯಾ ಸೇರಿ ಎಲ್ಲಡೆ ಭದ್ರತಾ ಪಡೆ ಅಲರ್ಟ್ ಆಗಿದೆ.
ಜನನಿಬಿಡ ಸ್ಥಳಗಳಾದ ಮೆಜೆಸ್ಟಿಕ್ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಮೆಟ್ರೋ ನಿಲ್ದಾಣ ಬಳಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರ ತಪಾಸಣೆ ಜೊತೆಗೆ ಶ್ವಾನದಳದಿಂದ ರೈಲು ನಿಲ್ದಾಣ ಸುತ್ತಮುತ್ತ ಪರಿಶೀಲನೆ ನಡೆಸಲಾಗಿದೆ. ಮೆಜೆಸ್ಟಿಕ್ ಸುತ್ತಮುತ್ತ ಕೆಎಸ್ಆರ್ಪಿ ತುಕಡಿ ನಿಯೋಜನೆ ಮಾಡಲಾಗಿದ್ದು, ಬಸ್ ನಿಲ್ದಾಣ, ರೈಲ್ವೆನಿಲ್ದಾಣದಲ್ಲಿ ಹೆಚ್ಚುವರಿ ಪೊಲೀಸರನ್ನ ನೇಮಿಸಲಾಗಿದೆ. ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದ್ದು, ನಗರ ಪೊಲೀಸ್ ಆಯುಕ್ತರ ಸೂಚನೆ ಮೇರೆಗೆ ಬೆಂಗಳೂರಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಕಾರು ಸ್ಪೋಟ ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿ ಸಿಎಂ ಸಿದ್ದರಾಮಯ್ಯ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಹಲವರು ಸಾವಿಗೀಡಾದ ಸುದ್ದಿ ನೋವಿನ ಜೊತೆಗೆ ದಿಗ್ಭ್ರಮೆ ಉಂಟುಮಾಡಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ. ಅಲ್ಲದೆ, ದೆಹಲಿಯ ಸ್ಪೋಟ ಪ್ರಕರಣವನ್ನು ರಾಜ್ಯ ಸರ್ಕಾರವು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ನೀಡಿದ್ದೇನೆ. ಜನನಿಬಿಡ ಸ್ಥಳಗಳಲ್ಲಿ ಭದ್ರತೆಯನ್ನು ಹೆಚ್ಚಿಸಿ, ಜನರ ಸುರಕ್ಷತೆಗೆ ಆದ್ಯತೆ ನೀಡುವಂತೆ ಗೃಹ ಇಲಾಖೆಗೆ ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ ಯಾವುದೇ ತರನಾದ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಸಾರ್ವಜನಿಕರು ಕೂಡ ಪೊಲೀಸ್ ಇಲಾಖೆಯ ಜೊತೆ ಸಹಕರಿಸಬೇಕು ಎಂದು ಸಿಎಂ ಮನವಿ ಮಾಡಿದ್ದಾರೆ.
For More Updates Join our WhatsApp Group :
