ಚಳಿಗಾಲದಲ್ಲಿ ಪರ್ಸಿಮನ್ ಹಣ್ಣಿನ ಮಹತ್ವ: ರೋಗನಿರೋಧಕ ಶಕ್ತಿ ಹೆಚ್ಚಿಸುವ ‘ಕೇಸರಿ ಹಣ್ಣು’!

ಚಳಿಗಾಲದಲ್ಲಿ ಪರ್ಸಿಮನ್ ಹಣ್ಣಿನ ಮಹತ್ವ: ರೋಗನಿರೋಧಕ ಶಕ್ತಿ ಹೆಚ್ಚಿಸುವ ‘ಕೇಸರಿ ಹಣ್ಣು’!

ಚಳಿಗಾಲ ಆರಂಭವಾಗುತ್ತಿದ್ದಂತೆ ಮಾರುಕಟ್ಟೆಗಳಲ್ಲಿ ಟೊಮೆಟೊ ಆಕಾರದ, ಕೇಸರಿ ಬಣ್ಣದಿಂದ ಕಂಗೊಳಿಸುವ ಹಣ್ಣೊಂದು ತುಂಬಿ ತುಳುಕುತ್ತಿರುತ್ತದೆ. ಇದರ ಹೆಸರು ಕೆಲವರಿಗೆ ತಿಳಿದಿಲ್ಲವಾದರೂ ಕೂಡ ಒಮ್ಮೆ ತಿಂದವರು ಇದರ ರುಚಿಯನ್ನು ಮರೆಯಲು ಸಾಧ್ಯವಿಲ್ಲ. ಇದರ ಹೆಸರು ಪರ್ಸಿಮನ್‌ ವೈಜ್ಞಾನಿಕವಾಗಿ ಡಯೋಸ್ಪೈರೋಸ್ ಕಾಕಿ ಎಂದು ಕರೆಯಲ್ಪಡುವ ಈ ಹಣ್ಣು, ಶೀತ ಋತುವಿಗೆ ಸೂಕ್ತವಾದ ಪೋಷಕಾಂಶಗಳಿಂದ ಕೂಡಿದೆ. ಪೂರ್ವ ಏಷ್ಯಾದಲ್ಲಿ ಕಂಡುಬಂದ ಈ ಹಣ್ಣು ಈಗ ಪ್ರಪಂಚದಾದ್ಯಂತ ವ್ಯಾಪಕವಾಗಿ ಕಂಡುಬರುತ್ತಿದೆ. ಪರ್ಸಿಮನ್‌ಗಳು ನೋಡುವುದಕ್ಕೆ ಎಷ್ಟು ಸುಂದರವಾಗಿದೆಯೋ ಅಷ್ಟೇ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ. ಹಾಗಾದರೆ ಈ ಹಣ್ಣು ಯಾರಿಗೆ ಒಳ್ಳೆಯದು, ಸೇವನೆ ಮಾಡುವುದರಿಂದ ಯಾವ ರೀತಿಯ ಪ್ರಯೋಜನಗಳು ಸಿಗುತ್ತದೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಚಳಿಗಾಲದಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಂಡುಬರುವುದರಿಂದ ಈ ರೀತಿಯ ಹಣ್ಣಿನ ಸೇವನೆ ಮಾಡುವುದು ಬಹಳ ಅವಶ್ಯಕವಾಗಿದೆ. ಏಕೆಂದರೆ ಪರ್ಸಿಮನ್‌ ಹಣ್ಣುಗಳು ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿವೆ, ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ, ಹೃದಯವನ್ನು ರಕ್ಷಿಸುತ್ತದೆ ಮತ್ತು ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ ಮಾತ್ರವಲ್ಲ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ. ಅದರಲ್ಲಿಯೂ ಈ ಋತುವಿನಲ್ಲಿ ಆಹಾರ ಕ್ರಮದಲ್ಲಿ ವೈವಿಧ್ಯತೆಯ ಕೊರತೆ ಇರುತ್ತದೆ, ಆದರೆ ಈ ಹಣ್ಣು ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ನೀಡುತ್ತದೆ.

ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುತ್ತದೆ:

ಪರ್ಸಿಮನ್‌ಗಳು ಪಾಲಿಫಿನಾಲ್‌ಗಳು ಮತ್ತು ಟ್ಯಾನಿನ್‌ಗಳಿಂದ ಸಮೃದ್ಧವಾಗಿದ್ದು, ಅದು ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಸಂಯುಕ್ತಗಳು ಸ್ವತಂತ್ರ ರಾಡಿಕಲ್‌ಗಳನ್ನು ತಟಸ್ಥಗೊಳಿಸುತ್ತವೆ, ನಿಮ್ಮ ದೇಹವನ್ನು ಸೆಲ್ಯುಲಾರ್ ಹಾನಿ ಮತ್ತು ಅಕಾಲಿಕ ವಯಸ್ಸಾಗುವುದರಿಂದ ರಕ್ಷಿಸುತ್ತವೆ. ಚರ್ಮದ ಆರೋಗ್ಯ ಕಾಪಾಡಿಕೊಳ್ಳುತ್ತದೆ.

ಫ್ಲೇವನಾಯ್ಡ್‌ಗಳು ಹೇರಳವಾಗಿದೆ:

ಪರ್ಸಿಮನ್ ಹಣ್ಣಿನ ಸಿಪ್ಪೆ ಮತ್ತು ತಿರುಳು ಕ್ವೆರ್ಸೆಟಿನ್ ಮತ್ತು ಕ್ಯಾಟೆಚಿನ್‌ನಂತಹ ಫ್ಲೇವನಾಯ್ಡ್‌ಗಳನ್ನು ಹೊಂದಿರುತ್ತವೆ, ಇದು ಉತ್ತಮ ರಕ್ತ ಪರಿಚಲನೆಯನ್ನು ಬೆಂಬಲಿಸುತ್ತದೆ ಮತ್ತು ಹೃದಯರಕ್ತನಾಳದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ನಾರಿನಂಶ ಹೆಚ್ಚಿದೆ:

ಈ ಹಣ್ಣಿನಲ್ಲಿ ಕರಗುವ ನಾರಿನ ಅಂಶವಿದ್ದು, ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕರಗದ ನಾರು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸರಾಗವಾಗಿ ನಡೆಸುತ್ತದೆ, ಚಳಿಗಾಲದಲ್ಲಿ ಜೀರ್ಣಕ್ರಿಯೆ ನಿಧಾನವಾಗುವುದರಿಂದ ಇಂತಹ ಹಣ್ಣುಗಳ ಸೇವನೆ ಮಾಡುವುದು ಪ್ರಯೋಜನಕಾರಿಯಾಗಿದೆ.

ನೈಸರ್ಗಿಕ ಸಕ್ಕರೆ ಅಂಶವನ್ನು ಹೊಂದಿದೆ:

ಸಿಹಿಯಾಗಿದ್ದರೂ, ಪರ್ಸಿಮನ್‌ಗಳು ಮಧ್ಯಮ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುತ್ತವೆ. ಇದರರ್ಥ ಅವು ಹಠಾತ್ ಸಕ್ಕರೆ ಏರಿಕೆಗಳಿಲ್ಲದೆ ಸ್ಥಿರವಾದ ಶಕ್ತಿಯನ್ನು ಒದಗಿಸುತ್ತವೆ, ಇದು ರಕ್ತದಲ್ಲಿನ ಗ್ಲೂಕೋಸ್ ಬಗ್ಗೆ ಗಮನ ಹರಿಸುವವರಿಗೂ ಸಹ ಸೂಕ್ತವಾಗಿದೆ.

ಜೀವಸತ್ವ, ಖನಿಜಗಳಿಂದ ಸಮೃದ್ಧವಾಗಿದೆ:

ಈ ಹಣ್ಣು ವಿಟಮಿನ್ ಎ, ಸಿ ಮತ್ತು ಇ ಯ ಅತ್ಯುತ್ತಮ ಮೂಲವಾಗಿದೆ, ಇವೆಲ್ಲವೂ ರೋಗನಿರೋಧಕ ಕಾರ್ಯ, ಚರ್ಮದ ಆರೋಗ್ಯ ಮತ್ತು ಅಂಗಾಂಶ ದುರಸ್ತಿಗೆ ನಿರ್ಣಾಯಕವಾಗಿವೆ. ಮಾತ್ರವಲ್ಲ ಪೊಟ್ಯಾಸಿಯಮ್, ಮ್ಯಾಂಗನೀಸ್ ಮತ್ತು ತಾಮ್ರದ ಅಂಶವನ್ನು ನೀಡುತ್ತದೆ. ಪೊಟ್ಯಾಸಿಯಮ್ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ; ಮ್ಯಾಂಗನೀಸ್ ಮೂಳೆಯ ಆರೋಗ್ಯಕ್ಕೆ ಸಹಾಯ ಮಾಡುತ್ತದೆ; ಮತ್ತು ತಾಮ್ರವು ಶಕ್ತಿ ಉತ್ಪಾದನೆ ಮತ್ತು ಮೆದುಳಿನ ಕಾರ್ಯವನ್ನು ಬೆಂಬಲಿಸುತ್ತದೆ. ಒಟ್ಟಾಗಿ, ಈ ಘಟಕಗಳು ರೋಗನಿರೋಧಕ ಶಕ್ತಿ, ಹೃದಯದ ಆರೋಗ್ಯ ಮತ್ತು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತವೆ, ಇವೆಲ್ಲವೂ ಶೀತ ತಿಂಗಳುಗಳಲ್ಲಿ ಶಕ್ತಿಯನ್ನು ಕಾಪಾಡಿಕೊಳ್ಳಲು ಬೇಕಾಗುವ ಪ್ರಮುಖ ಅಂಶಗಳಾಗಿವೆ.

ಮಾತ್ರವಲ್ಲ, ಈ ಹಣ್ಣುಗಳು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ದೃಷ್ಟಿ, ಚರ್ಮದ ಆರೋಗ್ಯ ಮತ್ತು ರೋಗನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ. ಅದರಲ್ಲಿಯೂ ಚಳಿಗಾಲದಲ್ಲಿ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು ಕಡಿಮೆಯಾಗುವುದರಿಂದ ಜನರ ರೋಗನಿರೋಧಕ ಶಕ್ತಿ ಕುಂಠಿತಗೊಳ್ಳುತ್ತದೆ. ಆದರೆ ಈ ಹಣ್ಣಿನ ಸೇವನೆ ಆರೋಗ್ಯ ಸಮಸ್ಯೆಗಳು ಬರದಂತೆ ತಡೆಯಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಒತ್ತಡ ಮತ್ತು ಮಾಲಿನ್ಯದಿಂದ ಕೋಶಗಳನ್ನು ರಕ್ಷಿಸುತ್ತದೆ. ಹಾಗಾಗಿ ಈ ಹಣ್ಣುಗಳನ್ನು ಪ್ರತಿಯೊಬ್ಬರೂ ಕೂಡ ಸೇವನೆ ಮಾಡುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *