ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಸ್ಟ್ 15 ರಂದು ಜಿಎಸ್ಟಿ ಕಡಿಮೆ ಮಾಡುವ ಬಗ್ಗೆ ಘೋಷಣೆ ಮಾಡಿದ್ದರು. ಸೆಪ್ಟೆಂಬರ್ 22 ರಿಂದ ನೂತನ ಜಿಎಸ್ಟಿ ದರ ಜಾರಿಯಾಯಿತು. 350 ಸಿಸಿ ವರೆಗಿನ ದ್ವಿಚಕ್ರ ವಾಹನದ ಮೇಲಿನ ಜಿಎಸ್ಟಿಯನ್ನು ಶೇ 28 ರಿಂದ 18 ಕ್ಕೆ ಇಳಿಕೆ ಮಾಡಲಾಯಿತು. ಪೆಟ್ರೋಲ್ 1200 ಸಿಸಿ ವರೆಗೆ ಮತ್ತು ಡಿಸೇಲ್ 1,500 ಸಿಸಿ ವರೆಗೆ, 4 ಮೀಟರ್ ಉದ್ದದ ಕಾರುಗಳ ಮೇಲೂ ಜಿಎಸ್ಟಿ ಕಡಿಮೆ ಮಾಡಲಾಯಿತು. ಇದರಿಂದ ಹೊಸ ವಾಹನಗಳನ್ನು ಖರೀದಿ ಮಾಡವವರ ಸಂಖ್ಯೆ ದುಪ್ಪಟ್ಟಾಗಿದ್ದು, ಕರ್ನಾಟಕದಲ್ಲಿ ಹಿಂದೆಂದೂ ಇಲ್ಲದಷ್ಟು ಹೊಸ ವಾಹನಗಳ ಖರೀದಿ ಅಕ್ಟೋಬರ್ ತಿಂಗಳಿನಲ್ಲಾಗಿದೆ.
ಜಿಎಸ್ಟಿ ಪರಿಷ್ಕರಣೆ ಬೆನ್ನಲ್ಲೇ ಕರ್ನಾಟಕದಲ್ಲಿ ದುಪ್ಪಟ್ಟಾಯ್ತು ವಾಹನ ನೋಂದಣಿ
ಜಿಎಸ್ಟಿ ಕಡಿಮೆ ಮಾಡುವ ಮುನ್ನ ಕರ್ನಾಟಕದಲ್ಲಿ, ಅಂದರೆ ಆಗಸ್ಟ್ ತಿಂಗಳಿನಲ್ಲಿ 1,61,214 ಹೊಸ ವಾಹನಗಳು ರಸ್ತೆಗಿಳಿದಿದ್ದವು. ಒಂದು ದಿನಕ್ಕೆ 6,717 ವಾಹನಗಳು ರೋಡಿಗಿಳಿದಂತಾಗಿತ್ತು. ಪರಿಷ್ಕೃತ ಜಿಎಸ್ಟಿ ಜಾರಿಯಾದ ಮೇಲೆ, ಅಕ್ಟೋಬರ್ ತಿಂಗಳಿನಲ್ಲಿ 2,52,420 ವಾಹನಗಳು ನೋಂದಣಿ ಆಗಿವೆ. ಇದೀಗ ಪ್ರತಿದಿನ 10,517 ವಾಹನಗಳು ನೋಂದಣಿ ಆಗುತ್ತಿವೆ. ಅಂದರೆ 91,206 ವಾಹನಗಳು ಹೆಚ್ಚುವರಿಯಾಗಿ ರಿಜಿಸ್ಟ್ರೇಷನ್ ಆಗುತ್ತಿವೆ. ಇದರಲ್ಲಿ ಕಾರು, ಬೈಕು ಸೇರಿದಂತೆ ಎಲ್ಲಾ ರೀತಿಯ ವಾಹನಗಳು ಸೇರಿವೆ. ಹೊಸ ಜಿಎಸ್ಟಿ ದರ ಜಾರಿಯಾದ ಮೇಲೆ ರಿಜಿಸ್ಟ್ರೇಷನ್ ದುಪ್ಪಟ್ಟು ಆಗಿದೆ ಎಂದು ಅಪರ ಸಾರಿಗೆ ಆಯುಕ್ತ ಸಿ. ಮಲ್ಲಿಕಾರ್ಜುನ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಎಷ್ಟು ಹೆಚ್ಚಾಗಿದೆ ವಾಹನ ಖರೀದಿ?
ಬೆಂಗಳೂರಿನಲ್ಲಿ ಆಗಸ್ಟ್ ತಿಂಗಳಿನಲ್ಲಿ 68,446 ಹೊಸ ವಾಹನಗಳು ರಿಜಿಸ್ಟ್ರೇಷನ್ ಆಗಿದ್ದರೆ, ಪ್ರತಿದಿನ 2,685 ವಾಹನಗಳು ರೋಡಿಗಿಳಿಯುತ್ತಿದ್ದವು. ನೂತನ ಜಿಎಎಸ್ಟಿ ಜಾರಿಯಾದ ಮೇಲೆ ಅಕ್ಟೋಬರ್ ತಿಂಗಳಲ್ಲಿ 89,014 ವಾಹನಗಳು ರಿಜಿಸ್ಟ್ರೇಷನ್ ಆಗಿವೆ. ಇದೀಗ ನಗರದಲ್ಲಿ ಪ್ರತಿದಿನ ಸುಮಾರು 3,748 ಹೊಸ ವಾಹನಗಳು ರೋಡಿಗಿಳಿಯುತ್ತಿವೆ. ಅಂದರೆ ಹೆಚ್ಚುವರಿಯಾಗಿ ಪ್ರತಿದಿನ 1063 ವಾಹನಗಳು ರೋಡಿಗಿಳಿಯುತ್ತಿವೆ. ಒಂದು ತಿಂಗಳಿಗೆ ನಗರದಲ್ಲಿ 89,952 ಹೊಸ ವಾಹನಗಳು ರಸ್ತೆಗಿಳಿಯುತ್ತಿವೆ.
For More Updates Join our WhatsApp Group :




