ನೀವು ಕೂಡ ಡ್ರ್ಯಾಗನ್ ಫ್ರೂಟ್ ಅನ್ನು ನೋಡಿರಬಹುದು ಕೆಲವರು ಇದರ ರುಚಿಯನ್ನು ಕೂಡ ಆಸ್ವಾದಿಸಿರಬಹುದು. ಇತ್ತೀಚಿನ ದಿನಗಳಲ್ಲಿ ಇದು ಎಲ್ಲೆಡೆ ಹೇರಳವಾಗಿ ಲಭ್ಯವಿದ್ದು ಇದರ ರುಚಿಯೂ ತುಂಬಾ ಚೆನ್ನಾಗಿದೆ. ಪ್ರತಿಯೊಬ್ಬರೂ ಕೂಡ ಒಮ್ಮೆಯಾದರೂ ಇದನ್ನು ತಿಂದು, ರುಚಿ ನೋಡಲೇಬೇಕು. ಈ ಹಣ್ಣು ಪೋಷಕಾಂಶಗಳಿಂದ ತುಂಬಿರುವ ಉಷ್ಣವಲಯದ ಹಣ್ಣು. ಅಮೇರಿಕಾ ಮೂಲದ್ದಾಗಿದ್ದು ಕಳ್ಳಿ ಜಾತಿಗೆ ಸೇರಿದ ಹಣ್ಣಾಗಿದೆ. ಇದನ್ನು ಪಿಟಾಯಾ ಅಥವಾ ಪಿಟಾಹಯಾ ಎಂದು ಕರೆಯಲಾಗುತ್ತದೆ. ಇದು ಹೈಲೋಸೀರಿಯಸ್ ಹಣ್ಣಿನ ಕುಲಕ್ಕೆ ಸೇರಿದೆ. ಇದರ ಸೇವನೆಯಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿದ್ದು. ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಕೂಡ ಡಯಟ್ ನಲ್ಲಿ ಸೇರಿಸಿಕೊಳ್ಳಬಹುದು. ಹಾಗಾದರೆ ಇದರ ಸೇವನೆಯಿಂದ ಸಿಗುವ ಪ್ರಯೋಜನಗಳೇನು, ಯಾವ ಸಮಸ್ಯೆಗೆ ಒಳ್ಳೆಯದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಡ್ರ್ಯಾಗನ್ ಫ್ರೂಟ್ ವಿಟಮಿನ್ ಸಿ ಮತ್ತು ಬಿ2 ಗಳಿಂದ ಸಮೃದ್ಧವಾಗಿದ್ದು ಇದರಲ್ಲಿ ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಕಬ್ಬಿಣದಂತಹ ಖನಿಜಗಳೂ ಇವೆ. ಇವು ಆರೋಗ್ಯ ಸಮಸ್ಯೆಗಳಿಂದ ನಮ್ಮನ್ನು ದೂರವಿಡಲು ಸಹಾಯ ಮಾಡುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಅದಕ್ಕಾಗಿಯೇ ನಾವು ಸೇವನೆ ಮಾಡುವ ಆಹಾರದಲ್ಲಿ ಡ್ರ್ಯಾಗನ್ ಫ್ರೂಟ್ ಸೇರಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಡ್ರ್ಯಾಗನ್ ಫ್ರೂಟ್ ನಲ್ಲಿ ವಿಟಮಿನ್ ಸಿ, ಫ್ಲೇವನಾಯ್ಡ್ಗಳು ಮತ್ತು ಫೀನಾಲಿಕ್ ಆಮ್ಲಗಳಂತಹ ಉತ್ಕರ್ಷಣ ನಿರೋಧಕಗಳು ಇರುತ್ತವೆ. ಅವು ಜೀವಕೋಶಗಳನ್ನು ಆಕ್ಸಿಡೇಟಿವ್ ಒತ್ತಡದ ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತವೆ. ಇದು ಆರೋಗ್ಯವನ್ನು ಕಾಪಾಡಿಕೊಳ್ಳಲು ತುಂಬಾ ಪ್ರಯೋಜನಕಾರಿ.
ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ:
ಡ್ರ್ಯಾಗನ್ ಫ್ರೂಟ್ ನಲ್ಲಿರುವ ಫೈಬರ್, ಪೊಟ್ಯಾಸಿಯಮ್ ಮತ್ತು ಉತ್ಕರ್ಷಣ ನಿರೋಧಕಗಳು ಉರಿಯೂತವನ್ನು ಕಡಿಮೆ ಮಾಡುವ ಮೂಲಕ ಮತ್ತು ರಕ್ತದ ಲಿಪಿಡ್ ಪ್ರೊಫೈಲ್ಗಳನ್ನು ಸುಧಾರಿಸುವ ಮೂಲಕ ಹೃದಯದ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ಕೆಲವು ಅಧ್ಯಯನಗಳು ಡ್ರ್ಯಾಗನ್ ಹಣ್ಣು ರಕ್ತದಲ್ಲಿನ ಸಕ್ಕರೆ ನಿಯಂತ್ರಣದ ಮೇಲೆ ಪ್ರಯೋಜನಕಾರಿ ಪರಿಣಾಮವನ್ನು ಬೀರುತ್ತದೆ ಎಂದು ಸೂಚಿಸುತ್ತವೆ.
ಮಲಬದ್ಧತೆಯ ಸಮಸ್ಯೆಗೆ ಮುಕ್ತಿ ನೀಡುತ್ತದೆ:
ಡ್ರ್ಯಾಗನ್ ಫ್ರೂಟ್ ನಲ್ಲಿ ನಾರಿನಾಂಶ ಉತ್ತಮವಾಗಿದೆ. ಇದು ಜೀರ್ಣಕ್ರಿಯೆಯ ಆರೋಗ್ಯವನ್ನು ಉತ್ತೇಜಿಸಲು ಮತ್ತು ಮಲಬದ್ಧತೆಯನ್ನು ತಡೆಯಲು ಸಹಾಯ ಮಾಡುತ್ತದೆ. ಮಾತ್ರವಲ್ಲ ಈ ಹಣ್ಣು ಉರಿಯೂತದ ಗುಣಲಕ್ಷಣಗಳನ್ನು ಹೊಂದಿರುವ ಸಂಯುಕ್ತವನ್ನು ಹೊಂದಿರುತ್ತದೆ. ಇವು ಊತವನ್ನು ಕಡಿಮೆ ಮಾಡಲು ಮತ್ತು ಸಂಧಿವಾತಕ್ಕೆ ಸಂಬಂಧಿಸಿದ ಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಚರ್ಮದ ಆರೋಗ್ಯಕ್ಕೆ ಪ್ರಯೋಜನಕಾರಿ:
ಡ್ರ್ಯಾಗನ್ ಫ್ರೂಟ್ ನಲ್ಲಿರುವ ವಿಟಮಿನ್ ಸಿ ಮತ್ತು ಇತರ ಉತ್ಕರ್ಷಣ ನಿರೋಧಕಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮಾತ್ರವಲ್ಲ ಇವು ಪದೇ ಪದೇ ಉಂಟಾಗುವ ನೆಗಡಿಯಂತಹ ಕಾಯಿಲೆಗಳ ಅಪಾಯವನ್ನು ಕೂಡ ಕಡಿಮೆ ಮಾಡುತ್ತದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಮತ್ತು ಜೀವಸತ್ವಗಳು ಚರ್ಮವನ್ನು ಹಾನಿಯಿಂದ ರಕ್ಷಿಸಲು, ವಯಸ್ಸಾಗುವುದನ್ನು ವಿಳಂಬಗೊಳಿಸಲು ಮತ್ತು ಆರೋಗ್ಯಕರ ಚರ್ಮವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.
For More Updates Join our WhatsApp Group :
