ಸೂರಜ್ ತಾಯಿ–ಸಹೋದರರಿಂದ ನಿರೀಕ್ಷಣಾ ಜಾಮೀನು ಅರ್ಜಿ.
ಬೆಂಗಳೂರು: ನವವಿವಾಹಿತೆ ಗಾನವಿ ಆತ್ಮಹತ್ಯೆ ಪ್ರಕರಣ ಸಂಬಂಧ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ಗಾನವಿ ಪತಿ ಸೂರಜ್ ಸಹೋದರ ಮತ್ತು ತಾಯಿ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡುವಂತೆ ಕೋರ್ಟ್ ಮೊರೆ ಹೋಗಿದ್ದಾರೆ. ಅರ್ಜಿದಾರರಾದ ಸಂಜಯ್ ಮತ್ತು ಜಯಂತಿ ಪರ ವಕೀಲೆ ಡಾ.ವಂದನಾ ಪಿ.ಎಲ್ ಮನವಿ ಸಲ್ಲಿಸಿದ್ದಾರೆ.
ವರನ ಕಡೆಯಿಂದಲೇ 60 ಲಕ್ಷ ವೆಚ್ಚ ಮಾಡಿ ಮದುವೆ ಮಾಡಲಾಗಿತ್ತು. ಆರಂಭದ ಹೊಂದಾಣಿಕೆ ಕೊರತೆಯಿಂದಾಗಿ ದೈಹಿಕ ಸಂಬಂಧವಿರಲಿಲ್ಲ. ಡಿ.22ಕ್ಕೆ ತವರು ಮನೆಗೆ ತೆರಳಿದ್ದ ಗಾನವಿ ಡಿ.25ಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆಗೆ ಸೂರಜ್ ಮನೆಯವರಿಂದ ಯಾವುದೇ ಕಿರುಕುಳವಾಗಿಲ್ಲ. ಮಾನಸಿಕ ವೈದ್ಯರೊಂದಿಗೆ ಸೂರಜ್ ಸಮಾಲೋಚನೆ ನಡೆಸಲಾಗಿದೆ. ಯಾವುದೇ ಮಾನಸಿಕ, ವೈದ್ಯಕೀಯ ಕಾರಣಗಳಿಲ್ಲ. ಹೀಗಿದ್ದರೂ ಅವರ ಕುಟುಂಬದ ವಿರುದ್ಧ ಸುಳ್ಳು ಆರೋಪ ಹೊರಿಸಿದ್ದಾರೆ. ಅಪಮಾನ, ನಿಂದನೆ ತಡೆಯದೇ ಸೂರಜ್ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಾಯಿ ಜಯಂತಿ ಕೂಡ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿದ್ದಾರೆ. ಹೀಗಾಗಿ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡುವಂತೆ ಅರ್ಜಿದಾರರ ಪರ ವಕೀಲರು ಕೋರ್ಟ್ಗೆ ಆಗ್ರಹಿಸಿದ್ದಾರೆ.
ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ನಿನ್ನೆಯಷ್ಟೇ ಹೊಸ ಟ್ವಿಸ್ಟ್ ಸಿಕ್ಕಿತ್ತು. ಗಾನವಿ ಈ ಹಿಂದೆ ಹರ್ಷ ಎಂಬಾತನನ್ನ ಪ್ರೀತಿ ಮಾಡುತ್ತಿದ್ದಳು. ಆತನನ್ನೆ ಮದುವೆಯಾಗ್ಬೇಕು ಎಂದು ನಿರ್ಧರಿಸಿದ್ದಳು. ಆದರೆ ಮನೆಯವರ ಒತ್ತಾಯಕ್ಕೆ ಗಾನವಿ ಸೂರಜ್ನ ಮದುವೆಯಾಗಿದ್ದಳು. ಶ್ರೀಲಂಕಾಗೆ ಹನಿಮೂನ್ಗೆ ಹೋದಾಗ ಹರ್ಷ ಜೊತೆಗಿನ ಪ್ರೀತಿ ವಿಚಾರವನ್ನು ಆಕೆಯೇ ಸೂರಜ್ಗೆ ತಿಳಿಸಿದ್ದಳು. ಹೀಗಾಗಿಯೇ ಹನಿಮೂನ್ಗೆ ತೆರಳಿದ್ದ ಅವರು ಅರ್ಧಕ್ಕೇ ಬೆಂಗಳೂರಿಗೆ ಹಿಂದಿರುಗಿದ್ದರು. ನಂತರ ತವರಿಗೆ ತೆರಳಿದ್ದ ಆಕೆ ಅಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆದರೆ ಆರೋಪವನ್ನು ನಮ್ಮ ಕುಟುಂಬದ ವಿರುದ್ಧ ಹೊರಿಸಲಾಗಿದೆ ಎಂದು ಸೂರಜ್ ಭಾವ ರಾಜ್ಕುಮಾರ್ ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
For More Updates Join our WhatsApp Group :



