ಜಂಬಗಿ ಗ್ರಾಮದಲ್ಲಿ ಮೂಲಸೌಕರ್ಯಗಳ ಕೊರತೆಗೆ ಜನರ ಆಕ್ರೋಶ.
ಬೀದರ್ : ತೆಲಂಗಾಣ ರಾಜ್ಯದ ಜೊತೆ ಗಡಿ ಹಂಚಿಕೊಂಡಿರುವ ಬೀದರ್ ಜಿಲ್ಲೆಯ ಔರಾದಾ ತಾಲೂಕಿನ ಜಂಬಗಿ ಗ್ರಾಮ ಪಂಚಾಯತ್ 2025ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾಗಿದೆ. ಹೀಗಿದ್ದರೂ ಈ ಪಂಚಾಯತ್ ವ್ಯಾಪ್ತಿಯಲ್ಲಿ ಮೂಲಸೌಕರ್ಯ ಎಂಬುದು ಮಾತ್ರ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ. ಕುಡಿಯುವ ನೀರಿಗೂ ಜನರು ಪರದಾಡಬೇಕಾದ ಸ್ಥಿತಿ ಇದ್ದು, ಸ್ವಚ್ಛತೆ ಎಂಬುದಂತೂ ಬಲು ದೂರದ ಮಾತು. ಜಂಬಗಿ ಸೇರಿದಂತೆ ಐದು ಗ್ರಾಮಗಳು ಈ ಪಂಚಾಯತ್ ವ್ಯಾಪ್ತಿಗೆ ಬರುತ್ತವೆ. 13 ತಾಂಡಾಗಳನ್ನು ಹೊಂದಿರುವ ಈ ಪಂಚಾಯತ್ಗೆ ಒಟ್ಟು 28 ಜನ ಸದಸ್ಯರಿದ್ದಾರೆ. ಆದರೂ ಜನರ ಪರದಾಟ ಕೇಳೋರು ಮಾತ್ರ ಯಾರೂ ಇಲ್ಲ ಎನ್ನುವ ಸ್ಥಿತಿ ಇಲ್ಲಿಯದ್ದು.
ಆಡಳಿತ ಮತ್ತು ಪಾರದರ್ಶಕತೆ, ಸ್ವಚ್ಛತೆ ಮತ್ತು ಹಸಿರು, ಮೂಲಸೌಕರ್ಯ ಮತ್ತು ಅಭಿವೃದ್ಧಿ, ಆರ್ಥಿಕ ಸ್ವಾವಲಂಬನೆ ಸೇರಿದಂತೆ ಹತ್ತು ಹಲವು ಮಾನದಂಡಗಳ ಆಧಾರದಲ್ಲಿ ಸರ್ಕಾರ ಗಾಂಧಿ ಗ್ರಾಮ ಪುರಸ್ಕಾರ ನೀಡುತ್ತದೆ. ಆದರೆ ಅದೇ ಪ್ರಶಸ್ತಿಗೆ ಭಾಜನವಾಗಿರುವ ಈ ಪಂಚಾಯತ್ನಲ್ಲಿ ಜನ, ಜಾನುವಾರುಗಳು ಹನಿ ನೀರಿಗೂ ಪರದಾಡಬೇಕಿದೆ. ಗ್ರಾಮದಲ್ಲಿ ಜಲ ಜೀವನ ಮಿಷನ್ ಯೋಜನೆಯಡಿ ಮನೆ ಮನೆಗೆ ನಲ್ಲಿಗಳನ್ನ ಅಳವಡಿಸಿದ್ದಾರೆಯಾದರೂ ಅವುಗಳಲ್ಲಿ ಈವರೆಗೆ ಒಂದು ಹನಿ ನೀರು ಬಂದದ್ದನ್ನೂ ಕಂಡವರಿಲ್ಲ. ಹೀಗಾಗಿ ನೀರು ಬೇಕೆಂದರೆ ಕಿಲೋಮೀಟರ್ಗಟ್ಟಲೆ ದೂರವನ್ನು ಗ್ರಾಮಸ್ಥರು ಸಾಗಲೇಬೇಕಿದೆ. ಈ ವಿಚಾರದ ಬಗ್ಗೆ ಹತ್ತಾರು ಸಲ ಗ್ರಾಮಸ್ಥರು ಮೆಲಾಧಿಕಾರಿಗೆ ಗಮನಕ್ಕೆ ತಂದರು ಕೂಡ ಯಾವುದೆ ಪ್ರಯೋಜನವಾಗಿಲ್ಲ. ಹೀಗಾಗಿ ಗ್ರಾಮಸ್ಥರು ಬೋರ್ವೆಲ್ ನೀರನ್ನೇ ಅವಲಂಬಿಸಿ ಬದುಕಬೇಕಿದೆ ಎಂಬುದು ಸ್ಥಳೀಯ ಮಹಿಳೆಯರ ಆಕ್ರೋಶ.
ಹೀಗೆ ಹತ್ತಾರು ಸಮಸ್ಯೆಗಳಿಂದ ಬಳಲುತ್ತಿರುವ ಜಂಬಗಿ ಗ್ರಾಮ ಪಂಚಾಯತ್ಗೆ ಅದ್ಯಾವ ಮಾನದಂಡ ಪರಿಗಣಿಸಿ ಸರ್ಕಾರ ಗಾಂಧಿ ಗ್ರಾಮ ಪುರಸ್ಕಾರ ನೀಡಿದೆಯೋ ಗೊತ್ತಿಲ್ಲ. ಗ್ರಾಮದಲ್ಲಿರುವ ಸಮಸ್ಯೆಗಳನ್ನು ಪಂಚಾಯತ್ ಶೀಘ್ರ ಪರಿಹರಿಸಿದರೆ ಅದುವೇ ನಮಗೆ ದೊಡ್ಡ ಸಹಾಯ ಎಂದು ಗ್ರಾಮಸ್ಥರು ಅಲವತ್ತುಕೊಂಡಿದ್ದಾರೆ.
For More Updates Join our WhatsApp Group :




