ಲಕ್ಕುಂಡಿ ಉತ್ಖನನ ಪ್ರದೇಶಕ್ಕೆ ಲಾಕ್!

ಲಕ್ಕುಂಡಿ ಉತ್ಖನನ ಪ್ರದೇಶಕ್ಕೆ ಲಾಕ್!

ಚಿತ್ರೀಕರಣಕ್ಕೆ ಸಂಪೂರ್ಣ ನಿಷೇಧ: ಡಿಸಿ ಆದೇಶ.

ಗದಗ: ಲಕ್ಕುಂಡಿಯಲ್ಲಿ ಒಂದು ಕುಟುಂಬಕ್ಕೆ ಇತ್ತೀಚಿಗಷ್ಟೆ ಕೋಟ್ಯಂತರ ರೂ. ಬೆಲೆ ಬಾಳುವ ಚಿನ್ನ ಸಿಕ್ಕಿತ್ತು. ಈ ಹಿನ್ನೆಲೆ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿರುವ ಕೋಟೆ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಎದುರಿನ ಉತ್ಖನನ ಸ್ಥಳವನ್ನು ನಿರ್ಬಂಧಿತ ಪ್ರದೇಶ ಎಂದು ಘೋಷಿಸಲಾಗಿದೆ. ಈ ಸಂಬಂಧ ಗದಗ ಜಿಲ್ಲಾಧಿಕಾರಿ ಹಾಗೂ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸಿ.ಎನ್. ಶ್ರೀಧರ್ ಆದೇಶ ಹೊರಡಿಸಿದ್ದಾರೆ.

ಈಗಾಗಲೇ ಆರಂಭವಾಗಿರುವ ಉತ್ಖನನ

ಲಕ್ಕುಂಡಿಯಲ್ಲಿ ಸಿಕ್ಕ ನಿಧಿಯನ್ನು ಸರ್ಕಾರಕ್ಕೊಪ್ಪಿಸಿದ್ದ ಕುಟುಂಬ, ಮನಸ್ಸು ಬದಲಿಸಿ ಚಿನ್ನ ತಮಗೇ ಸೇರಬೇಕೆಂಬ ಬೇಡಿಕೆಯಿಟ್ಟಿತ್ತು. ಇದೀಗ ಸಿಕ್ಕ ನಿಧಿಯ 5ನೇ ಒಂದು ಭಾಗವನ್ನು ಕುಟುಂಬಕ್ಕೆ ನೀಡುವುದಾಗಿ ಸರ್ಕಾರ ಒಪ್ಪಿಕೊಂಡಿದೆ. ಅದಲ್ಲದೆ ನಿಧಿ ಸಿಕ್ಕ ಜಾಗದಲ್ಲಿ ಉತ್ಖನನ ಮಾಡಲು ಮುಂದಾಗಿದೆ. ಈ ಸಂಬಂಧ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಕಮಲಾಪುರ–ಹಂಪಿ ಹಾಗೂ ಉತ್ಖನನದ ಸಹ ನಿರ್ದೇಶಕರಾದ ಶೇಜೇಶ್ವರ, ನಿನ್ನೆ (ಜನವರಿ 16) ನೀಡಿದ ಪತ್ರದ ಹಿನ್ನಲೆಯಲ್ಲಿ ಈ ಆದೇಶ ಜಾರಿಗೊಳಿಸಲಾಗಿದೆ.

ಅಧಿಕೃತವಾಗಿ ನೇಮಿಸಲ್ಪಟ್ಟವರಿಗೆ ಮಾತ್ರ ಚಿತ್ರೀಕರಣಕ್ಕೆ ಅವಕಾಶ

ಲಕ್ಕುಂಡಿಯ ವೀರಭದ್ರೇಶ್ವರ ದೇವಸ್ಥಾನದ ಎದುರಿನ ಜಾಗದಲ್ಲಿ ಜನವರಿ 16ರಿಂದ ಉತ್ಖನನ ಕಾರ್ಯ ಆರಂಭವಾಗಿದ್ದು, ಈ ಪ್ರದೇಶವು ಅತಿ ಸೂಕ್ಷ್ಮವಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಉತ್ಖನನ ಕಾರ್ಯ ಸಂಪೂರ್ಣವಾಗುವವರೆಗೆ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದಿಂದ ಅಧಿಕೃತವಾಗಿ ನೇಮಕಗೊಂಡವರನ್ನು ಹೊರತುಪಡಿಸಿ ಯಾವುದೇ ಸಾರ್ವಜನಿಕರು, ಪ್ರವಾಸಿಗರು ಅಥವಾ ಇತರ ವ್ಯಕ್ತಿಗಳು ಈ ಸ್ಥಳಕ್ಕೆ ಪ್ರವೇಶಿಸುವುದಕ್ಕೂ, ಫೋಟೋಗ್ರಫಿ ಹಾಗೂ ವೀಡಿಯೋಗ್ರಫಿ ನಡೆಸುವುದಕ್ಕೂ ಸಂಪೂರ್ಣ ನಿಷೇಧ ವಿಧಿಸಲಾಗಿದೆ.

ಐತಿಹಾಸಿಕ ಮತ್ತು ಪಾರಂಪರಿಕ ಮಹತ್ವ ಹೊಂದಿರುವ ಲಕ್ಕುಂಡಿಯ ಉತ್ಖನನ ಪ್ರದೇಶವನ್ನು ಸಂರಕ್ಷಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಆದೇಶ ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ಎಚ್ಚರಿಸಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *