ಮಧುಗಿರಿ : ಶೌಚಕ್ಕೆ ತೆರಳಿದ್ದ ವ್ಯಕ್ತಿಯೊಬ್ಬರ ಮೇಲೆ ಕರಡಿಯೊಂದು ಎರಗಿ ಗಾಯಗೊಳಿಸಿರುವ ಘಟನೆ ಬುಧವಾರ ಬೆಳಗ್ಗೆ ನಡೆದಿದೆ. ತಾಲೂಕಿನ ಐ.ಡಿ.ಹಳ್ಳಿ ಹೋಬಳಿ ಮುದ್ದನೇರಳೆಕೆರೆ ಗ್ರಾಮದ ಅಶ್ವತ್ಥಪ್ಪ(55) ಎನ್ನುವವರು ಗ್ರಾಮದ ಹೊರ ವಲಯದ ಜಮೀನನ ಬಳಿ ಬೆಳಗ್ಗೆ ೬ ಘಂಟೆ ಸಮಯದಲ್ಲಿ ಶೌಚಕ್ಕೆ ತೆರಳಿದ್ದಾಗ ಘಟನೆ ನಡೆದಿದೆ.
ಅಶ್ವತ್ಥಪ್ಪನ ಸೊಂಟ ಹಾಗೂ ಕಾಲಿಗೆ ಕರಡಿ ಕಡಿದಿದೆ. ಅವರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅರಣ್ಯಾಧಿಕಾರಿಗಳಾದ ಹೆಚ್. ಎಂ. ಸುರೇಶ್ ಮತ್ತು ಮುತ್ತುರಾಜು ಆಸ್ಪತ್ರೆಗೆ ಭೇಟಿ ನೀಡಿದ್ದರು. ಅರಣ್ಯ ಇಲಾಖೆಯಿಂದ ದೊರೆಯಬಹುದಾದ ಸವಲತ್ತುಗಳನ್ನು ಸಂತ್ರಸ್ತ ಅಶ್ವತ್ಥಪ್ಪನವರಿಗೆ ವಿತರಿಸುವುದಾಗಿ ಅವರು ಭರವಸೆ ನೀಡಿದ್ದಾರೆ.