ಲೇಖನ : ಸಂತೋಷ್ ಹೆಚ್.ಡಿ
ಬೆಳಕಿನ ಹಬ್ಬವೆಂದೆ ಖ್ಯಾತಿಯನ್ನು ಪಡೆದಿರುವ ದೀಪಾವಳಿಯನ್ನು ವಾಡಿಕೆಯಂತೆ ಅದ್ದೂರಿಯಾಗಿ ನಾವೆಲ್ಲರೂ ಬಹು ಸಂಭ್ರಮ, ಸಡಗರ, ಸಂತೋಷದಿಂದ ಆಚರಿಸಿದ್ದೇವೆ. ಹಬ್ಬದ ಸಲುವಾಗಿ ಸಾಲು ಸಾಲು ರಜೆಗಳು, ಮನೆ ಮುಂದೆ ಹಚ್ಚಿದ ಹಣತೆ, ಉಲ್ಕಾ ಪಾತದಂತೆ ಭಾಸವಾಗುವ ರಾಕೇಟುಗಳು, ಹೊಗೆಯಿಂದ ಆವೃತವಾದ ಭಾನು. ಬೀದಿಯ ಇಕ್ಕೆಲಗಳಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಸುಟ್ಟ ಕಾಗದ ಚೂರುಗಳು ಇವೆಲ್ಲ ಒಂದೆಡೆಯಾದರೆ, ಪ್ರತಿ ವರ್ಷ ದೀಪಾವಳಿಯ ವೇಳೆ ಅತಾಚುರ್ಯದಿಂದಲೊ ಎಚ್ಚರ ತಪ್ಪಿಯೊ ಪಟಾಕಿ ಎಂಬ ಹೊಗೆ ಭೂತಕ್ಕೆ ಬಲಿಯಾಗುವವರು ಹಲವರು. ಈ ಬಾರಿಯು ಇದರಿಂದ ಹೊರತಾಗೇನಿಲ್ಲ. ಅದೇ ಸಂಪ್ರದಾಯ ಮರುಕಳಿಸಿದೆ ಅಷ್ಟೇ!!
ಹಬ್ಬದ ಹುಮ್ಮಸ್ಸಿನಲ್ಲಿ ಮೈಮರೆತು ತಮ್ಮ ಅತ್ಯಮೂಲ್ಯ ಬದುಕನ್ನು ಅಂಧಕಾರಕ್ಕೆ ತಳ್ಳಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಹಬ್ಬಗಳ ಆಚರಣೆಯ ಮಾಡುವುದು ನೆಮ್ಮದಿಗಾಗಿ, ಶಾಂತಿಗಾಗಿ, ಭಾತೃತ್ವಕ್ಕಾಗಿ, ಸಂಪ್ರದಾಯಗಳಿಗಾಗಿ ಹೀಗೆ 10 ಹಲವು ಕಾರಣಗಳಿಗಾಗಿ ಅಲ್ಲವೇ. ವಿಚಿತ್ರವೆಂದರೆ ದೇಶಕ್ಕೆ ಎದುರಾಗುವ ಬಾಹ್ಯ ಶಕ್ತಿಗಳ ಸವಾಲುಗಳು, ಯುದ್ಧ ಅಥವಾ ಇನ್ನಾವುದೇ ಬಿಕ್ಕಟ್ಟಿನ ವೇಳೆ ಜನರ ರಕ್ಷಣೆಗೆ ತಯಾರಿ ಮಾಡಿಕೊಳ್ಳುವಂತೆ ದೀಪಾವಳಿಯಲ್ಲಿ ಪಟಾಕಿಯಿಂದ ಸಮಸ್ಯೆಗೆ ಗುರಿಯಾದವರ ಚಿಕಿತ್ಸೆಗೆ ತಯಾರಿ ಮಾಡಿಕೊಳ್ಳುವ ಪರಿಸ್ಥಿತಿ ಇದೆ. ಇದು ಪ್ರಸ್ತುತ ಘಟ್ಟಕ್ಕೆ ಅನಿವಾರ್ಯವೂ ಹೌದು. ಆತಂಕವು ಹೌದು. ಅಂಕಿ ಅಂಶಗಳ ಪ್ರಕಾರ ಪ್ರಸ್ತುತ ಹಬ್ಬದ ಗುಂಗಿನಲ್ಲಿ 150ಕ್ಕೂ ಅಧಿಕ ಮಂದಿಗೆ ಪಟಾಕಿ ಸಿಡಿತದಿಂದ ಕಣ್ಣಿನ ಸಮಸ್ಯೆಯಾಗಿದೆ. ಆ ಪೈಕಿ 9 ಮಂದಿ ದೃಷ್ಟಿಯನ್ನು ಕಳೆದುಕೊಳ್ಳುವ ಸಂಭವವಿದೆ. 45 ಮಕ್ಕಳಿಗೆ ಕಣ್ಣಿನ ಸಮಸ್ಯೆ ಎದುರಾಗಿದೆ. ಇದು ಮಕ್ಕಳ ತಪ್ಪೋ, ಪೋಷಕರ ತಪ್ಪೋ!, ಅಥವಾ ಹಬ್ಬದ್ದೆ ತಪ್ಪೋ ಬಲ್ಲವರಾರು. ಇನ್ನು ಪಟಾಕಿ ಸಿಡಿಸುವ ವೇಳೆ ನೋಡುತ್ತಿರುವವರಿಗೆ ಪಟಾಕಿ ಸಿಡಿದು 11 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. (ಕನ್ನಡ ಪ್ರಭ ). ಹಬ್ಬಕ್ಕೆ ಮುನ್ನ ಬೆಂಗಳೂರಿನಲ್ಲಿ ಹಲವು ಕಣ್ಣಿನ ಚಿಕಿತ್ಸಾಲಯಗಳು 24 ಗಂಟೆಯೂ ಸೇವೆಯನ್ನು ಒದಗಿಸುವುದಾಗಿ ಹೇಳಿದ್ದವು. ಮಿಂಟೊ, ನಾರಾಯಣ ನೇತ್ರಾಲಯ, ನೇತ್ರಧಾಮ, ಶಂಕರ, ಡಾ. ಅಗರ್ವಾಲ್ ಹಾಗೂ ವಿಕ್ಟೋರಿಯಾ ಕಣ್ಣಿನ ಆಸ್ಪತ್ರೆಗಳು ಅವಶ್ಯಕ ಹಾಸಿಗೆಯ ವ್ಯವಸ್ಥೆ,ಅಗತ್ಯ ಔಷಧಿಗಳ ತಯಾರಿ ಮಾಡಿಕೊಂಡಿದ್ದವು. ಮಿಂಟೋ ಆಸ್ಪತ್ರೆ 35 ವಿಶೇಷ ಹಾಸಿಗೆಗಳನ್ನು ಪಟಾಕಿಯಿಂದ ಗಾಯಗೊಂಡವರಿಗೆಂದೇ ಮೀಸಲಿಟ್ಟಿತ್ತು.(ಪ್ರಜಾವಾಣಿ).
ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡುವಂತೆ ಸರ್ಕಾರವೇನೊ ಆದೇಶ ಹೊರಡಿಸಿತು. ಆ ಆದೇಶವನ್ನು ಪಾಲಿಸುವವರು ಯಾರು? ಆದೇಶವನ್ನು ಪಟಾಕಿಯೊಂದಿಗೆ ಸುತ್ತಿ ಸುಟ್ಟರು ಆಶ್ಚರ್ಯವೇನಿಲ್ಲ..ಇದೆ ಸತ್ಯ ಅಲ್ಲವೇ. ಬೆಂಗಳೂರಿನಲ್ಲಿ ಪಟಾಕಿ ಮಾಲೀಕರು 1700 ಅರ್ಜಿಗಳನ್ನು ಪಟಾಕಿ ಮಾರಾಟದ ಸ್ಥಳಕ್ಕಾಗಿ ಬಿಬಿಎಂಪಿ ಗೆ ಸಲ್ಲಿಸಿದ್ದರು.ಆ ಪೈಕಿ 700 ಅರ್ಜಿಗಳಿಗೆ ಮಾತ್ರ ಬಿಬಿಎಂಪಿ ಹಸ್ತು
ಎಂದಿದ್ದು. ಆದರೆ ಆಕ್ರಮ ಪಟಾಕಿ ಮಾರಾಟಕ್ಕೇನು ಕೊರತೆ ಇರಲಿಲ್ಲ. ಪೊಲೀಸರ ಕಾರ್ಯಾಚರಣೆಯಿಂದ ಬೆಂಗಳೂರಿನಲ್ಲಿದ್ದ ಒಟ್ಟು 56 ಪ್ರಕರಣಗಳು ದಾಖಲಾಗಿವೆ. ಸಮುದ್ರದಿಂದ ಒಂದು ಬಿಂದಿಗೆ ನೀರು ತೆಗೆದುಕೊಂಡಲ್ಲಿ ಸಮುದ್ರ ಖಾಲಿಯಾದಿತೆ ಎಂಬಂತೆ ಪೊಲೀಸರ ಕಾರ್ಯಾಚರಣೆ. ಅ.24 ರಿಂದ ಅ.31 ರ ಅವಧಿಯ ನಡುವೆ ನಗರದ ವಾಯು ಮಾಲಿನ್ಯದಲ್ಲಿ ಭಾರಿ ವ್ಯತ್ಯಾಸವಾಗಿದೆ. ಮಾಲಿನ್ಯದ ಅಂಕಿ ಅಂಶಗಳನ್ನು ಪರಿಗಣಿಸಿದರೆ ಅ.24ರಂದು ನಗರದ ಸರಾಸರಿ ಮಾಲಿನ್ಯ (ಏಕ್ಯೂಐ-78) ಇತ್ತು. ಅದೇ ಅ.31 ರಂದು (ಏಕ್ಯೂ ಐ-153) ಕ್ಕೆ ಏರಿಕೆಯಾಗಿದೆ. ನಗರದ ಹೆಬ್ಬಾಳದಲ್ಲಿ ಅ.24 ರಂದು (ಏಕ್ಯೂಐ-75) ಇದ್ದು. ಹಬ್ಬದ ದಿನ (ಏಕ್ಯೂಐ-263) ಕ್ಕೆ ತಲುಪಿದೆ. 200 ರಿಂದ 300ರ ವರೆಗಿನ ಏಕ್ಯೂಐ ವಾಯುವಿನ ಕಳಪೆ ಗುಣಮಟ್ಟವನ್ನು ಸೂಚಿಸುತ್ತದೆ. ( ಕನ್ನಡ ಪ್ರಭ).
ಮೇಲಿನ ಅಂಶಗಳನ್ನು ಗಮನಿಸಿದಾಗ ದೀಪಾವಳಿ ಇಂದು ಕೇವಲ ಹಬ್ಬವಾಗಿ ಉಳಿದಿಲ್ಲ. ಮಾಲಿನ್ಯವನ್ನು ಸೂಸುವ ಹೊಗೆ ಬುಗ್ಗೆಯಾಗಿ ರೂಪಾಂತರವಾಗಿದೆ. ಅಷ್ಟಕ್ಕೂ ಈ ಪಟಾಕಿಯ ಕಲ್ಪನೆಯನ್ನು ತಂದವರು
ಯಾರೋ! ಅವನ ಅಭಿಲಾಷೆ ಏನಿತ್ತೋ! ಏನೋ ?ಆದರೆ ಇಂದು ಅದೇ ಶಾಪವಾಗಿ ಮಾರ್ಪಟ್ಟಿದೆ. ಬದುಕೆಂಬ ಬೆಳಕಿಗೆ ಅಂಧಕಾರವನ್ನು ಚೆಲ್ಲುವ ಹಬ್ಬವೆಂಬ ಕುಖ್ಯಾತಿಗೆ ದೀಪಾವಳಿ ಭಾಜನವಾಗಬಲ್ಲುದೇ…