ಮೈಸೂರು: ಮೈಸೂರು ದಸರಾ ಆರಂಭಗೊಂಡಿದೆ. ವೃಶ್ಚಿಕ ಲಗ್ನದ ಶುಭ ಮುಹೂರ್ತದಲ್ಲಿ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ಗಣ್ಯರು ಪೂಜೆ ಸಲ್ಲಿಸಿದರು. ಹಿರಿಯ ಸಾಹಿತಿ ನಾಡೋಜ ಹಂಪ ನಾಗರಾಜಯ್ಯ ಅವರು ಕಾರ್ಯಕ್ರಮ ಉದ್ಘಾಟಿಸಿ, ಚಾಮುಂಡಿ ತಾಯಿಗೆ ಪುಪ್ಪಾರ್ಚನೆ ಮಾಡಿ ದಸರಾಗೆ ಚಾಲನೆ ನೀಡಿದರು.
ದಸರಾವನ್ನು ಈ ಬಾರಿ ಸಂಪ್ರದಾಯದ ಪ್ರಕಾರ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಚಾಮುಂಡಿ ಬೆಟ್ಟದಲ್ಲಿ ನಿರ್ಮಾಣ ಮಾಡಿರುವ ಸಾಂಪ್ರದಾಯಿಕ ವೇದಿಕೆಯಲ್ಲಿ ನಾಡ ಅಧಿದೇವತೆ ಚಾಮುಂಡಿ ತಾಯಿಯ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಹಾಗೂ ಪುಷ್ಪಾರ್ಚನೆ ನಡೆಯಿತು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿರಿಯ ಸಾಹಿತಿ ನಾಡೋಜ ಹಂಪ ನಾಗರಾಜಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇತರ ಸಚಿವರು ಭಾಗವಹಿಸಿದ್ದರು. ಇಂದಿನಿಂದ ಅಕ್ಟೋಬರ್ 12ರ ವರೆಗೆ ಮೈಸೂರು ದಸರಾ ನಡೆಯಲಿದೆ. ಪ್ರತಿದಿನವೂ ವಿಶೇಷ ಪೂಜಾ ಕೈಂಕರ್ಯಗಳು ಜರುಗಲಿವೆ. ಅ.12 ರಂದು ಜಗತ್ಪ್ರಸಿದ್ಧ ದಸರಾ ಜಂಬೂ ಸವಾರಿ ಮೆರವಣಿಗೆ ನಡೆಯಲಿದೆ.