ಚಾಮರಾಜನಗರ: ಚಾಮರಾಜನಗರದಲ್ಲಿ ಆಗಾಗ ಪ್ರಾಣಿಗಳು ಹಾವಳಿ ಮಾಡುತ್ತಲೇ ಇರುತ್ತವೆ. ಹಾಗೆಯೇ ಇದೀಗ ಹಾಡಹಗಲೇ ಜಮೀನುಗಳಲ್ಲಿ ಒಂಟಿ ಸಲಗ ಓಡಾಟ ನಡೆಸಿ ಫಸಲು ನಾಶ ಪಡಿಸಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಮಂಚಹಳ್ಳಿ, ಹಸಗೂಲಿ ಗ್ರಾಮಗಳಲ್ಲಿ ನಡೆದಿದ್ದು, ಜಮೀನಿಗೆ ತೆರಳಲು ರೈತರು ಭಯಬೀತರಾಗಿದ್ದಾರೆ.
ರಾತ್ರಿ ವೇಳೆ ಆಹಾರ ಅರಸಿ ನಾಡಿಗೆ ಲಗ್ಗೆ ಕಾಡಾನೆಗಳ ಭೀತಿ ಒಂದೆಡೆಯಾದರೆ, ಹಗಲಿನಲ್ಲೇ ಈ ಸಲಗ ಜಮೀನುಗಳಲ್ಲಿ ಓಡಾಡುತ್ತಿರುವುದು ರೈತರು ಜಮೀನಿಗೆ ತೆರಳಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ.
ಕಳೆದ ಒಂದು ವಾರದಿಂದ ಸಲಗ ಓಡಾಡುತ್ತಿದ್ದು, ಗುರುವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಮಂಚಹಳ್ಳಿಯ ಶ್ರೀ ನಡುಬೆಟ್ಟ ಮಹಾದೇಶ್ವರ ದೇವಸ್ಥಾನದ ಹತ್ತಿರ ರಸ್ತೆ ಮಾರ್ಗವಾಗದಲ್ಲೇ ಆನೆ ಓಡಾಡುತ್ತಿದೆ. ಈ ಆನೆ ಸಿಕ್ಕ ಸಿಕ್ಕ ಜಮೀನುಗಳಲ್ಲಿ ಫಸಲನ್ನು ತುಳಿದು ತಿಂದು ನಾಶ ಮಾಡುತ್ತಾ ಹೋಗುತ್ತಿದ್ದು, ರೈತರು ಹಗಲಲ್ಲೇ ಜಮೀನಿನ ಕೆಲಸಕ್ಕೆ ತೆರಳಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ನೇನೆಕಟ್ಟೆ, ಶೆಟ್ಟಹಳ್ಳಿ, ಮಂಚಹಳ್ಳಿ, ಹಸಗೂಲಿ ಗ್ರಾಮದ ಆಸುಪಾಸಿನಲ್ಲೇ ಆನೆ ಓಡಾಟವಿದ್ದು, ಅರಣ್ಯ ಇಲಾಖೆಯು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಬಂಡೀಪುರದಲ್ಲಿ ಹೆಣ್ಣಾನೆ ಆಂಥ್ರಾಕ್ಸ್ಗೆ ಬಲಿ ಶಂಕೆ: ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದುಕೆರೆ ವಲಯ ವ್ಯಾಪ್ತಿಯ ಬಾಚಹಳ್ಳಿ ಗ್ರಾಮದ ಸರ್ವೇ ನಂ-516ರ ಪ್ರದೇಶದಲ್ಲಿ ಹೆಣ್ಣಾನೆಯೊಂದರ ಮೃತದೇಹ ಪತ್ತೆಯಾಗಿದ್ದು, ಆನೆಯು ಆಂಥ್ರಾಕ್ಸ್ ನೆರಡಿ ಕಾಯಿಲೆಯಿಂದ ಮೃತಪಟ್ಟಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕಿಸಿದ್ದಾರೆ.
ಮೃತ ಹೆಣ್ಣಾನೆಗೆ ಅಂದಾಜು 30 ವರ್ಷ ವಯಸ್ಸಾಗಿದ್ದು, ಅರಣ್ಯ ಇಲಾಖೆ ಗಸ್ತು ತಿರುಗುತಿದ್ದಾಗ ಬೆಳಕಿಗೆ ಬಂದಿದೆ. ಮಾಹಿತಿ ಅರಿತ ಕೂಡಲೇ ಸ್ಥಳಕ್ಕೆ ಆಗಮಿಸಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್ ಹಾಗೂ ವಲಯ ಅರಣ್ಯಾಧಿಕಾರಿ ಮಲ್ಲೇಶ್ ಪರಿಶೀಲನೆ ನಡೆಸಿದ್ದಾರೆ. ಮೃತ ಕಾಡಾನೆಯ ಬಾಯಿ, ಗುದದ್ವಾರ, ಕಿವಿ, ಬಾಲದಲ್ಲಿ ರಕ್ತ ಸೋರಿಕೆ ಆಗಿರುವುದು ಕಂಡು ಬಂದಿದ್ದು, ಮೃತ ಕಾಡಾನೆ ಪರಿಶೀಲನೆ ಸಮಯದಲ್ಲಿ ಪಶು ವೈದ್ಯ ಡಾ.ಮಿರ್ಜಾ ವಾಸೀಂ ಅಂಥ್ರಾಕ್ಸ್ ರೋಗದ ಗುಣ ಲಕ್ಷಣಗಳು ಮೇಲ್ನೋಟಕ್ಕೆ ಕಂಡಿದೆ ಎಂದಿದ್ದಾರೆ. ಮೃತ ಆನೆಯ ಅಂಗಾಂಗಗಳ ಮಾದರಿಗಳನ್ನು ಸಂಗ್ರಹಿಸಿ, ವಿಜ್ಞಾನ ಪ್ರಯೋಗ ಶಾಲೆ ಬೆಂಗಳೂರು ಇಲ್ಲಿಗೆ ಕಳುಹಿಸಲಾಗಿದೆ. ಹೆಣ್ಣಾನೆ ಮೃತ ದೇಹವನ್ನು ಸುಡುವ ಮೂಲಕ ಅಂತ್ಯಕ್ರಿಯೆ ನೆರವೇರಿಸಲಾಯಿತು. ನೆರಡಿ ರೋಗ ಎಂದು ಕರೆಯುವ ಈ ಖಾಯಿಲೆ ಭಯಾನಕವಾಗಿದ್ದು, ಸಾಂಕ್ರಾಮಿಕ ಖಾಯಿಲೆಯಾಗಿದೆ. ಜಾನುವಾರುಗಳಿಗೆ ಅಷ್ಟೇ ಅಲ್ಲದೆ, ಹಲವು ಕಾಡು ಪ್ರಾಣಿಗಳಿಗೂ ಈ ರೋಗ ಬರಲಿದೆ.