ಒಂದೇ ಕ್ಷೇತ್ರದಲ್ಲಿ ತಾಯಿ, ಮಗ ಇಬ್ಬರನ್ನೂ ಸೋಲಿಸಿದ ‘ಸೈನಿಕ’!

ಒಂದೇ ಕ್ಷೇತ್ರದಲ್ಲಿ ತಾಯಿ, ಮಗ ಇಬ್ಬರನ್ನೂ ಸೋಲಿಸಿದ 'ಸೈನಿಕ'!ಒಂದೇ ಕ್ಷೇತ್ರದಲ್ಲಿ ತಾಯಿ, ಮಗ ಇಬ್ಬರನ್ನೂ ಸೋಲಿಸಿದ 'ಸೈನಿಕ'!

ರಾಮನಗರ: ಚನ್ನಪಟ್ಟಣದ ಚುನಾವಣೆ ಎಂದರೆ ಮಾಜಿ ಸಚಿವ ಸಿ. ಪಿ. ಯೋಗೇಶ್ವರ ಮತ್ತು ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ನಡುವಿನ ಹೋರಾಟ. 2024 ರ ಉಪ ಚುನಾವಣೆಯಲ್ಲಿಯೂ ಇದು ಮತ್ತೊಮ್ಮೆ ಸಾಬೀತಾಗಿದೆ. ಚನ್ನಪಟ್ಟಣದ ‘ಸೈನಿಕ’ ಖ್ಯಾತಿಯ ಸಿ. ಪಿ. ಯೋಗೇಶ್ವರ ಕಾಂಗ್ರೆಸ್ ಅಭ್ರ್ಥಿಯಾಗಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ರ್ಥಿ ನಿಖಿಲ್ ಕುಮಾರಸ್ವಾಮಿ ಸೋಲಿಸಿದ್ದಾರೆ.

ಚನ್ನಪಟ್ಟಣ ಉಪ ಚುನಾವಣೆ 2024ರ ಫಲಿತಾಂಶ ಶನಿವಾರ ಘೋಷಣೆಯಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಸಿ. ಪಿ. ಯೋಗೇಶ್ವರ 1,12,642 ಮತಗಳನ್ನು ಪಡೆದು 25,413 ಮತಗಳ ಅಂತರದಿಂದ ಜೆಡಿಎಸ್-ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ (87,229 ಮತ) ಸೋಲಿಸಿದ್ದಾರೆ.

ಈ ಮೂಲಕ ಸಿ. ಪಿ. ಯೋಗೇಶ್ವರ ಚನ್ನಪಟ್ಟಣದಲ್ಲಿ ಎಚ್. ಡಿ. ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ ಸೋಲಿಸಿದ್ದಾರೆ. 2023ರ ಚುನಾವಣೆಯಲ್ಲಿ ಚನ್ನಪಟ್ಟಣದಲ್ಲಿ ಎಚ್. ಡಿ. ಕುಮಾರಸ್ವಾಮಿ ವಿರುದ್ಧ ಸೋತಿದ್ದ ಸೇಡನ್ನು 2024ರ ಉಪ ಚುನಾವಣೆಯಲ್ಲಿ ಕುಮಾರಸ್ವಾಮಿ ಪುತ್ರನನ್ನು ಸೋಲಿಸುವ ಮೂಲಕ ತೀರಿಸಿಕೊಂಡಿದ್ದಾರೆ ಯೋಗೇಶ್ವರ.

ತಾಯಿ, ಮಗ ಇಬ್ಬರ ಸೋಲು: ಸಿನಿಮಾ ಹೆಸರಿನಲ್ಲಿ ‘ಸೈನಿಕ’ ಎಂದೇ ಕರೆಸಿಕೊಳ್ಳುವ ಸಿ. ಪಿ. ಯೋಗೇಶ್ವರ ಚನ್ನಪಟ್ಟಣದಲ್ಲಿ ಅನಿತಾ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಸೋಲಿಸಿದ್ದಾರೆ. ಅದರಲ್ಲೂ 2024ರ ಉಪ ಚುನಾವಣೆಯನ್ನು ಎಚ್. ಡಿ. ಕುಮಾರಸ್ವಾಮಿ ಪ್ರತಿಷ್ಠೆಯಾಗಿ ತೆಗೆದುಕೊಂಡು ಪುತ್ರನನ್ನು ಗೆಲ್ಲಿಸಬೇಕು ಎಂದು ಪಣ ತೊಟ್ಟಿದ್ದರು. ಆದರೆ ಡಿ. ಕೆ. ಶಿವಕುಮಾರ್ ತಂತ್ರದಿಂದ ಎಲ್ಲಾ ಲೆಕ್ಕಚಾರ ಉಲ್ಟಾ ಆಗಿದೆ.

ಚನ್ನಪಟ್ಟಣದಲ್ಲಿ ಸಿ. ಪಿ. ಯೋಗೇಶ್ವರ 2013ರ ಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಸೋಲಿಸಿದ್ದರು. ಜೆಡಿಎಸ್ ಅಭ್ಯರ್ಥಿಯಾಗಿದ್ದ ಅನಿತಾ ಕುಮಾರಸ್ವಾಮಿ 73,635 ಮತಗಳನ್ನು ಪಡೆದು ಸೋಲು ಅನುಭವಿಸಿದ್ದರು. ಸಮಾಜವಾದಿ ಪಕ್ಷದಿಂದ ಕಣಕ್ಕಿಳಿದಿದ್ದ ಸಿ. ಪಿ. ಯೋಗೇಶ್ವರ 80,099 ಮತಗಳನ್ನು ಪಡೆದು ಜಯಗಳಿಸಿದ್ದರು.

2024ರ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ. ಪಿ. ಯೋಗೇಶ್ವರ 1,12,642 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ನಿಖಿಲ್ ಕುಮಾರಸ್ವಾಮಿ 87,229 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ. ಈ ಮೂಲಕ ಮತ್ತೆ ಸಿ. ಪಿ. ಯೋಗೇಶ್ವರ ಕೈ ಮೇಲಾಗಿದೆ. 2018ರ ಚುನಾವಣೆಯಲ್ಲಿ ಜೆಡಿಎಸ್ನ ಎಚ್. ಡಿ. ಕುಮಾರಸ್ವಾಮಿ 87,995 ಮತಗಳನ್ನು ಪಡೆದಿದ್ದರು. ಬಿಜೆಪಿಯ ಸಿ. ಪಿ. ಯೋಗೇಶ್ವರ 66,465 ಮತಗಳನ್ನು ಪಡೆದು ಕುಮಾರಸ್ವಾಮಿ ವಿರುದ್ಧ ಸೋಲು ಕಂಡಿದ್ದರು. 2023ರಲ್ಲಿ ಸಿ. ಪಿ. ಯೋಗೇಶ್ವರ ಬಿಜೆಪಿಯಿಂದ ಕಣಕ್ಕಿಳಿದು 80,677 ಮತಗಳನ್ನು ಪಡೆದು ಎಚ್. ಡಿ. ಕುಮಾರಸ್ವಾಮಿ ವಿರುದ್ಧ ಸೋಲು ಕಂಡಿದ್ದರು. ಜೆಡಿಎಸ್ ಅಭ್ಯರ್ಥಿ ಕುಮಾರಸ್ವಾಮಿ 96,592 ಮತಗಳನ್ನು ಪಡೆದು ಜಯಗಳಿಸಿದ್ದರು. ಬಿಜೆಪಿಯಲ್ಲಿದ್ದ ಸಿ. ಪಿ. ಯೋಗೇಶ್ವರ ಉಪ ಚುನಾವಣೆ ಟಿಕೆಟ್ ಸಿಗುವುದು ಅನುಮಾನವಾದ ಹಿನ್ನಲೆಯಲ್ಲಿ ಕಾಂಗ್ರೆಸ್ ಸೇರಿದರು. ಡಿ. ಕೆ. ಶಿವಕುಮಾರ್, ಡಿ. ಕೆ. ಸುರೇಶ್ ಪ್ರಭಾವ, ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷದ ಯೋಜನೆಗಳು, ಸಿ. ಪಿ. ಯೋಗೇಶ್ವರ ವೈಯಕ್ತಿಕ ಮತಗಳ ಕಾರಣ ಕಾಂಗ್ರೆಸ್ಗೆ ಚನ್ನಪಟ್ಟಣ ಸಿಕ್ಕಿದೆ. ನಿಖಿಲ್ ಕುಮಾರಸ್ವಾಮಿಗೆ ಮತ್ತೆ ಸೋಲಾಗಿದೆ.

Leave a Reply

Your email address will not be published. Required fields are marked *