ಹೊಸದಿಲ್ಲಿ: ಭಾರತದಲ್ಲಿ ಸಾರ್ವಜನಿಕ ಸ್ಥಳಗಳನ್ನು ಸಂಪೂರ್ಣವಾಗಿ ಧೂಮಪಾನ ಮುಕ್ತಗೊಳಿಸಬೇಕು ಎಂದು ಸುಮಾರು ಶೇ. 93ರಷ್ಟು ಮಂದಿ ಅಭಿಪ್ರಾಯ ಪಟ್ಟಿದ್ದು, ರೈಲ್ವೆ ನಿಲ್ದಾಣಗಳಂತೆ ವಿಮಾನ ನಿಲ್ದಾಣಗಳನ್ನೂ ಸಂಪೂರ್ಣ ಧೂಮಪಾನ ರಹಿತ ಸ್ಥಳಗಳನ್ನಾಗಿ ಘೋಷಿಸಬೇಕು ಎಂದು ಶೇ. 97ರಷ್ಟು ಮಂದಿ ಅನಿಸಿಕೆ ವ್ಯಕ್ತಪಡಿಸಿದ್ದಾರೆ ಎಂದು ಸಮೀಕ್ಷೆಯಿಂದ ತಿಳಿದು ಬಂದಿದೆ.
ನಾಗರಿಕರ ನೇತೃತ್ವದ ‘ತಂಬಾಕು ಮುಕ್ತ ಭಾರತ’ ಉಪಕ್ರಮವು ಹಮ್ಮಿಕೊಂಡಿದ್ದ ಇತ್ತೀಚಿನ ಸಮೀಕ್ಷೆಯಲ್ಲಿ 65,000ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದು, ಅವರಲ್ಲಿ ಬಹುತೇಕರು ಪ್ಯಾಸಿವ್ ಧೂಮಪಾನದ ಹಾನಿಕಾರಕ ಪರಿಣಾಮಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಶೇ. 92.72ರಷ್ಟು ದೊಡ್ಡ ಸಂಖ್ಯೆಯ ಜನರು ಸಾರ್ವಜನಿಕ ಸ್ಥಳಗಳನ್ನು ಧೂಮಪಾನ ಮುಕ್ತ ಸ್ಥಳಗಳನ್ನಾಗಿ ಪರಿವರ್ತಿಸುವುದರ ಪರವಾಗಿದ್ದಾರೆ ಎಂಬ ಸಂಗತಿ ಸಮೀಕ್ಷೆಯಲ್ಲಿ ಬಯಲಾಗಿದೆ.
ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳೆರಲ್ಲೂ ನಡೆದಿರುವ ಈ ಸಮೀಕ್ಷೆಯು ಧೂಮಪಾನ ಮುಕ್ತ ಸಾರ್ವಜನಿಕ ಸ್ಥಳಗಳು ಹಾಗೂ ಪ್ಯಾಸಿವ್ ಧೂಮಪಾನ ಹೊಂದಿರುವ ಆರೋಗ್ಯ ಸಂಬಂಧಿ ಅಪಾಯಗಳ ಬಗ್ಗೆ ಆರು ಮುಖ್ಯ ಪ್ರಶ್ನೆಗಳನ್ನು ಹೊಂದಿತ್ತು. ರೆಸ್ಟೋರೆಂಟ್ ಗಳು, ಹೋಟೆಲ್ ಗಳು ಹಾಗೂ ವಿಮಾನ ನಿಲ್ದಾಣಗಳಂಥ ಸಾರ್ವಜನಿಕ ಸ್ಥಳಗಳಲ್ಲಿ ವಿಷಕಾರಿ ತಂಬಾಕು ಹೊಗೆಗೆ ಒಡ್ಡಿಕೊಳ್ಳುವುದರಿಂದ ಮಹಿಳೆಯರು, ಮಕ್ಕಳು ಹಾಗೂ ಇನ್ನಿತರ ದುರ್ಬಲ ವರ್ಗಗಳ ಜನರನ್ನು ರಕ್ಷಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದನ್ನು ಬಹುತೇಕರು ಬೆಂಬಲಿಸಿದ್ದಾರೆ.