ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಲ್ಲೇ ಮಹಿಳೆಯೊಬ್ಬರು ಅವಳಿ ಮಕ್ಕಳಿಗೆ ಜನ್ಮ ನೀಡಿದ ಘಟನೆ ಕನಕಪುರದಲ್ಲಿ ಸೋಮವಾರ ನಡೆದಿದೆ. ಆದರೆ ನಂತರ ಆಸ್ಪತ್ರೆಯಲ್ಲಿ ಒಂದು ಮಗು ಸಾವನ್ನಪ್ಪಿದೆ.
ಏಳು ತಿಂಗಳ ಗರ್ಭಿಣಿಯಾಗಿದ್ದ ಮಹಿಳೆ ರಜಿಯಾ ಬಾನು, ನಿಯಮಿತ ತಪಾಸಣೆಗಾಗಿ ಹುಣಸನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ (ಪಿಎಚ್‌ಸಿ) ಹೋಗಿದ್ದರು. ಅಲ್ಲಿನ ವೈದ್ಯರು ಕನಕಪುರ ಜಿಲ್ಲಾಸ್ಪತ್ರೆಗೆ ಹೋಗುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಬಳಿಕ ಬಾನು ಕನಕಪುರಕ್ಕೆ ಕೆಎಸ್ ಆರ್ ಟಿಸಿ ಬಸ್ ನಲ್ಲಿ ಹೋಗುತ್ತಿದ್ದಾಗ ಕಬ್ಬಾಳು ಸಮೀಪ ಹೆರಿಗೆ ನೋವು ಕಾಣಿಸಿಕೊಂಡಿದೆ.
ತಕ್ಷಣವೇ ಇತರ ಪ್ರಯಾಣಿಕರು ಬಾನುಗೆ ಸಹಾಯ ಮಾಡಿದ್ದು, ಆಕೆ ಒಂದು ಗಂಡು ಮತ್ತು ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ನಂತರ ಬಸ್ ನೇರವಾಗಿ ಕನಕಪುರ ಜಿಲ್ಲಾಸ್ಪತ್ರೆಗೆ ತೆರಳಿದ್ದು, ಬಾನು ಹಾಗೂ ಶಿಶುಗಳಿಗೆ ಪ್ರಾಥಮಿಕ ಚಿಕಿತ್ಸೆ ಒದಗಿಸಲಾಗಿದೆ. ಅವಧಿಗೂ ಮುನ್ನವೇ ಹೆರಿಗೆ ಆಗಿದ್ದರಿಂದ ಮಕ್ಕಳ ತೂಕ ಕಡಿಮೆ ಇದ್ದು, ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಕನಕಪುರ ಜಿಲ್ಲಾಸ್ಪತ್ರೆ ವೈದ್ಯರು ಸೂಚಿಸಿದ್ದಾರೆ. ನಂತರ ನವ ಶಿಶುಗಳನ್ನು ಆರೈಕೆ ಮಾಡಲು ವಾಣಿ ವಿಲಾಸ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಚಿಕಿತ್ಸೆ ನೀಡಿದರೂ ಒಂದು ಮಗು ಸಾವನ್ನಪ್ಪಿದೆ. ಇನ್ನೊಂದು ಮಗು ಆರೋಗ್ಯವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ