ಅಪಘಾತ : ಎದೆಯೊಳಗಿಂದ ಹೊರಬಂದ ರಾಡ್ : ಯುವಕನ ಜೀವ ಉಳಿಸಿದ ಕಿಮ್ಸ್ ಆಸ್ಪತ್ರೆಯ ವೈದ್ಯರಿಗೆ ಸಂತೋಷ್ ಲಾಡ್ ಸೆಲ್ಯೂಟ್

ಅಪಘಾತ : ಎದೆಯೊಳಗಿಂದ ಹೊರಬಂದ ರಾಡ್ : ಯುವಕನ ಜೀವ ಉಳಿಸಿದ ಕಿಮ್ಸ್ ಆಸ್ಪತ್ರೆಯ ವೈದ್ಯರಿಗೆ ಸಂತೋಷ್ ಲಾಡ್ ಸೆಲ್ಯೂಟ್

ಶಿರಸಿ : ಅಪಘಾತದಲ್ಲಿ ಕಬ್ಬಿಣದ ರಾಡ್ ಎದೆ ಭಾಗಕ್ಕೆ ಚುಚ್ಚಿ ಬೆನ್ನಿನಿಂದ ಹೊರಬಂದು, ಜೀವನ್ಮರಣ ಹೋರಾಟ ನಡೆಸಿದ ಯುವಕನ ಜೀವ ಉಳಿಸುವಲ್ಲಿ ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್) ವೈದ್ಯರು ಸಫಲರಾಗಿದ್ದಾರೆ.

ಶಿರಸಿ ತಾಲೂಕಿನ ಜವಳಮಕ್ಕಿಯ 27 ವರ್ಷದ ದಯಾನಂದ ಎಂಬುವರು ಅಕ್ಟೋಬರ್ 2 ರಂದು ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಲಾರಿಯ ಚಾಲಕನ ಪಕ್ಕದ ಸೀಟಿನಲ್ಲಿ ಪ್ರಯಾಣ ಮಾಡುತ್ತಿದ್ದ ವೇಳೆ ಲಾರಿ ಮಗುಚಿಬಿದ್ದು ಸರ್ವಿಸ್ ರಸ್ತೆಯಲ್ಲಿ ಅಳವಡಿಸಿದ್ದ ಚೂಪಾದ ದೊಡ್ಡ ಕಬ್ಬಿಣದ ರಾಡ್ ಎದೆ ಭಾಗಕ್ಕೆ ಚುಚ್ಚಿ ಬೆನ್ನಿನಿಂದ ಹೊರಬಂದಿತ್ತು.

ರೋಗಿಯನ್ನು ಮೊದಲಿಗೆ ದಾವಣಗೆರೆಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ನಂತರ ಕಿಮ್ಸ್ಗೆ ತರಲಾಗಿತ್ತು. ಜೀವನ್ ಮರಣ ಸ್ಥಿತಿಯಲ್ಲಿದ್ದ ರೋಗಿಗೆ ಕಠಿಣ ಶಸ್ತ್ರಚಿಕಿತ್ಸೆ ನಡೆಸಿ ವೈದ್ಯರು ಜೀವ ಉಳಿಸಿದ್ದಾರೆ. ಯುವಕನ ಜೀವ ಉಳಿಸಿದ ವೈದ್ಯರ ತಂಡಕ್ಕೆ ಸಚಿವ ಸಂತೋಷ್ ಲಾಡ್ ಅವರು ಹುಬ್ಬಳ್ಳಿಯಲ್ಲಿ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಂಡಿದ್ದರು.

ಸಮಾರಂಭದಲ್ಲಿ ಮಾತನಾಡಿದ ಸಂತೋಷ್ ಲಾಡ್, ಅಪಾಯಕಾರಿಯಾದ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿ ಯುವಕನ ಜೀವ ಉಳಿಸಿದ ಎಲ್ಲ ವೈದ್ಯಕೀಯ ತಂಡವನ್ನು ಅಭಿನಂದಿಸುವೆ. ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಇಂತಹ ಅಪರೂಪದ ಶಸ್ತ್ರಚಿಕಿತ್ಸೆಯನ್ನು ಸವಾಲಾಗಿ ಸ್ವೀಕರಿಸಿದ್ದ ಎಲ್ಲ ವೈದ್ಯರಿಗೆ ಶುಭಾಶಯಗಳನ್ನು ತಿಳಿಸಿದರು.

ಇದೇ ವೇಳೆ ಆಸ್ಪತ್ರೆಯ ವಿವಿಧ ವಾರ್ಡ್ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳ ಆರೋಗ್ಯ ವಿಚಾರಿಸಿ ಸಮರ್ಪಕವಾದ ವೈದ್ಯಕೀಯ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳುವಂತೆ ವೈದ್ಯಕೀಯ ಸಿಬ್ಬಂದಿಗೆ ಸೂಚನೆ ನೀಡಿದರು.

Leave a Reply

Your email address will not be published. Required fields are marked *