ಶಿರಾ: ಅಭಿವೃದ್ಧಿ ಮಾಡುವ ನೆಪದಲ್ಲಿ ತಾಲೂಕಿನ ಬಹುತೇಕ ರೈತರ ಜಮೀನುಗಳನ್ನು ರಾಜ್ಯ ಸರ್ಕಾರ ವಶಪಡಿಸಿಕೊಳ್ಳುತ್ತಿದೆ. ಇದರಿಂದ ರೈತರು ಸಾಲದ ಸುಳಿಯಿಂದ ಹೊರಬರದಂತಾಗಿದೆ. ಕೂಡಲೇ ರೈತರ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ನಿಲ್ಲಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಧನಂಜಯರಾಧ್ಯ ಆಗ್ರಹಿಸಿದರು. ಅವರು ತಹಸೀಲ್ದಾರ್ ಕಚೇರಿ ಮುಂದೆ ರೈತ ಸಂಘದಿಂದ ನಡೆದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದರು.
ಮೈಕ್ರೋಫೈನಾನ್ಸ್ ಸಂಸ್ಥೆಗಳು ಸಾಲ ವಸೂಲಾತಿಯಲ್ಲಿ ಆರ್.ಬಿ.ಐ. ನಿಯಮ ಪಾಲಿಸದೆ ನಿರಂತರವಾಗಿ ಸಾಲಗಾರರಿಂದ ರೈತರಿಗೆ ಕಿರುಕುಳ ನೀಡುತ್ತಿದ್ದಾರೆ. ಸಾವಿರಾರು ಎಕರೆಯಲ್ಲಿ ರೈತರು ಬಗರ್ ಹುಕುಂ ಸಾಗುವಳಿ ಮಾಡಿದ್ದು ತ್ವರಿತಗತಿಯಲ್ಲಿ ಅರ್ಹ ರೈತರಿಗೆ ಸಾಗುವಳಿ ಚೀಟಿಗಳನ್ನು ಕಂದಾಯ ಇಲಾಖೆ ನೀಡುತ್ತಿಲ್ಲ ಎಂದು ಧನಂಜಯಾರಾಧ್ಯ ಆರೋಪಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಹೊರಟ ರೈತರ ಪ್ರತಿಭಟನಾ ಮೆರವಣಿಗೆಯು ತಹಸೀಲ್ದಾರ್ ಕಚೇರಿ ತಲುಪಿ ಅಲ್ಲಿ ಪ್ರತಿಭಟನೆ ನಡೆಸಿದರು. ತಾಲೂಕು ರೈತ ಸಂಘದ ಅಧ್ಯಕ್ಷ ಸಣ್ಣ ದ್ಯಾಮಣ್ಣ, ಉಪಾಧ್ಯಕ್ಷ ಲಕ್ಕಣ್ಣ, ಚಂದ್ರಶೇಖರ್, ಜುಂಜಣ್ಣ, ಉಮೇಶ್, ಜಯಪ್ರಕಾಶ್, ಸುರೇಶ್, ಮಹೇಶ್, ಕರಿಯಣ್ಣ ಸೇರಿದಂತೆ ಅನೇಕ ಪ್ರಮುಖರು ಇದ್ದರು.