ಪರಪ್ಪನ ಅಗ್ರಹಾರದಿಂದ ಸಾಕ್ಷಿದಾರರಿಗೆ ಆರೋಪಿ ಬೆದರಿಕೆ

ಪರಪ್ಪನ ಅಗ್ರಹಾರದಿಂದ ಸಾಕ್ಷಿದಾರರಿಗೆ ಆರೋಪಿ ಬೆದರಿಕೆ

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ಮೊಬೈಲ್ ಬಳಕೆ ಬಗ್ಗೆ ನಿರಂತರ ದೂರುಗಳು ಬರುತ್ತಿರುವ ಬೆನ್ನಲ್ಲೇ ಇತ್ತೀಚೆಗೆ ರೌಡಿಶೀಟರ್ ಸೋಮಶೇಖರ್, ಜೋಸೆಫ್ ಕೊಲೆ ಪ್ರಕರಣದಲ್ಲಿ ಸಾಕ್ಷಿದಾರರಿಗೆ ಬೆದರಿಕೆ ಸಂದೇಶ ಕಳುಹಿಸಿರುವ ಕುರಿತು ಜೈಲಿನ ಅಧೀಕ್ಷಕರ ವಿರುದ್ಧವೇ ತನಿಖೆ ನಡೆಸುವಂತೆ ಕಾರಾಗೃಹ ಐಜಿಪಿಗೆ ಕೋರ್ಟ್ ಆದೇಶ ಹೊರಡಿಸಿದೆ.

2021ರಲ್ಲಿ ಕೋರಮಂಗಲದಲ್ಲಿ ನಡೆದಿದ್ದ ರೌಡಿಶೀಟರ್ ಜೋಸೆಫ್ ಬಾಬು ಅಲಿಯಾಸ್ ಬಬ್ಲು ಕೊಲೆಯಲ್ಲಿ ಬಂಧನಕ್ಕೊಳಗಾಗಿರುವ ರೌಡಿ ಸೋಮಶೇಖರ್ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದಾನೆ. ಆಟೋ ಚಾಲಕನಾಗಿರುವ ಆರ್ಮುಗಂ ಇನ್ಸ್ಟಾಗ್ರಾಂ ಖಾತೆಯ ಮೆಸೆಂಜರ್ಗೆ ಸೆಪ್ಟೆಂಬರ್ 22ರಂದು ಸಲಗ ಸೋಮ ಹೆಸರಿನ ಐಡಿಯಿಂದ ಮೂರು ವಾಯ್ಸ್ ಮೆಸೇಜ್ ಕಳುಹಿಸಿದ್ದ. ಬಬ್ಲು ಕೊಲೆ ಪ್ರಕರಣದಲ್ಲಿ ಯಾರೊಬ್ಬರೂ ಕೋರ್ಟ್ನಲ್ಲಿ ಸಾಕ್ಷ್ಯ ಹೇಳಬಾರದು. ಸಾಕ್ಷ್ಯ ನುಡಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ. ಈ ಸಂಬಂಧ ಸಿಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದೇ ವೇಳೆ, ಜೋಸೆಫ್ ಕೊಲೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿಸಿಎಚ್ 67ನೇ ಕೋರ್ಟ್ಗೆ ಆರೋಪಿಯಿಂದ ಸಾಕ್ಷಿಗಳಿಗೆ ಬೆದರಿಕೆ ಹಾಕಿದ ವಿಚಾರವನ್ನು ಪೊಲೀಸರು ತಿಳಿಸಿದ್ದರು.

ಪ್ರಕರಣದ ಮಾಹಿತಿ ಪಡೆದಿರುವ ನ್ಯಾಯಾಲಯ, ”ಜೈಲಿನಲ್ಲಿರುವ ಆರೋಪಿ ಮೊಬೈಲ್ ಪಡೆದಿರುವುದರ ಹಿಂದೆ ಜೈಲು ಅಧೀಕ್ಷಕರ ವೈಫಲ್ಯ ಕಾರಣ. ಈ ನಿಟ್ಟಿನಲ್ಲಿ ಆರೋಪಿ ಸೋಮಶೇಖರ್ಗೆ ಮೊಬೈಲ್ ಸಿಕ್ಕಿದ್ದು ಹೇಗೆ? ಎಂಬ ವಿಚಾರವೂ ಸೇರಿ ಜೈಲು ಅಧೀಕ್ಷಕರ ವಿರುದ್ಧ ಐಜಿಪಿ ಸಮಗ್ರ ತನಿಖೆ ನಡೆಸಬೇಕು. ಅಲ್ಲದೇ, ಪ್ರಕರಣದ ವಿಚಾರಣೆ ಅಂತ್ಯವಾಗುವವರೆಗೂ ಸಾಕ್ಷಿದಾರರಿಗೆ ಪ್ರಕರಣದ ತನಿಖಾಧಿಕಾರಿ ಹಾಗೂ ಕೋರಮಂಗಲ ಪೊಲೀಸರು ರಕ್ಷಣೆ ನೀಡಬೇಕು” ಎಂದು ಸೂಚಿಸಿದೆ.

Leave a Reply

Your email address will not be published. Required fields are marked *