ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಅವರನ್ನು ಇಂದು ಬೆಳಗ್ಗೆ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಗಿದೆ. ಇದುವರೆಗೆ ದರ್ಶನ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರು. ಇಂದು ಬಿಗಿ ಭದ್ರತೆಯಲ್ಲಿ ಬಳ್ಳಾರಿಯ ಜೈಲಿಗೆ ಪೊಲೀಸ್ ವಾಹನಗಳು ಎಂಟ್ರಿಕೊಟ್ಟಿವೆ.
ಆರಂಭದಲ್ಲಿ ಆಂತರಿಕ ಭದ್ರತಾ ವಿಭಾಗದಲ್ಲಿ ತಪಾಸಣೆ ಮಾಡಲಾಗುವುದು. ವೈದ್ಯರಿಂದ ದರ್ಶನ್ ಅವರ ಆರೋಗ್ಯ ತಪಾಸಣೆ ನಡೆಯಲಿದೆ. ಬಳಿಕ ಬಳ್ಳಾರಿ ಜೈಲಿನ ಹೈಸೆಕ್ಯೂರಿಟಿ ಸೆಲ್ಗೆ ಕರೆದೊಯ್ಯಲಾಗುವುದು. ಹೈ ಸೆಕ್ಯೂರಿಟಿ ಸೆಲ್ನಲ್ಲಿ ಬಂಧಿಸಿಡಲು ಎಲ್ಲಾ ಸಿದ್ಧತೆ ಕೈಗೊಳ್ಳಲಾಗಿದೆ. ಯಾರೊಬ್ಬರೂ ಎಂಟ್ರಿಯಾಗದಂತೆ ಹೈಸೆಕ್ಯೂರಿಟಿ ಸೆಲ್ ನಿರ್ಮಾಣ ಮಾಡಲಾಗಿದೆ ಎಂದು ಬಳ್ಳಾರಿ ಜೈಲಿನ ಮೂಲಗಳು ತಿಳಿಸಿವೆ.
ಹೈ ಸೆಕ್ಯೂರಿಟಿ ಸೆಲ್ಗಳನ್ನು ಮೂರು ದಶಕಗಳ ಹಿಂದೆ ನಿರ್ಮಾಣ ಮಾಡಲಾಗಿದೆ. ಎರಡು ಬದಿಯಲ್ಲಿ ಕನಿಷ್ಟ 30 ಸೆಲ್ಗಳಿವೆ. ಒಂದು ಕಡೆ 15 ಸೆಲ್ಗಳಿದ್ದು ಅಲ್ಲಿ ದರ್ಶನ್ ಅವರನ್ನು ಇರಿಸಲಾಗುತ್ತದೆ. ಪಂಜಾಬ್ ಸಿಎಂ ಹತ್ಯೆ ಮಾಡಿದ ಉಗ್ರಗಾಮಿಗಳನ್ನು ಬಂಧಿಸಿಡಲು ಸಿದ್ದಪಡಿಸಿದ್ದ ಸೆಲ್ನಲ್ಲಿ ದರ್ಶನ್ ಅವರನ್ನು ಬಂಧಿಸಿಡಲಾಗುತ್ತದೆ. ಈಗಾಗಲೇ ವಿವಿಧ ಆರೋಪ ಮತ್ತು ಅಪರಾಧಗಳ ಅಡಿ ಬಂಧಿತ 11 ಜನರನ್ನು ಈ ಸೆಲ್ಗಳಲ್ಲಿ ಇಡಲಾಗಿದೆ. ಮಂಗಳೂರು, ಶಿವಮೊಗ್ಗ, ಬೆಂಗಳೂರಿನ 11 ಜನರು ಈ ಸೆಲ್ಗಳಲ್ಲಿ ಇದ್ದಾರೆ.
ಬಳ್ಳಾರಿ ಕೇಂದ್ರ ಕಾರಾಗೃಹದ ಒಳಗಡೆ ಯೋಗ ಕೇಂದ್ರ ಇದೆ. ಆದರೆ ಹೈ-ಸೆಕ್ಯೂರಿಟಿ ಸೆಲ್ನಲ್ಲಿ ಇಲ್ಲ. ಕೇಂದ್ರ ಕಾರಾಗೃಹ ಹಾಗೂ ಈ ಹೈ- ಸೆಕ್ಯೂರಿಟಿ ಸೆಲ್ಗೆ ಸಂಪರ್ಕ ಇಲ್ಲ. ಜೈಲ್ ಸಿಬ್ಬಂದಿಗೂ ಸೆಲ್ನಲ್ಲಿ ಮೊಬೈಲ್ ಬಳಕೆ ನಿಷಿದ್ಧ. ಏನಿದ್ದರೂ ವೈಯರ್ ಲೆಸ್ ವ್ಯವಸ್ಥೆ ಮಾತ್ರ ಇದೆ. ಪರಪ್ಪನ ಅಗ್ರಹಾರ ಜೈಲಿನಲ್ಲಾದ ಘಟನೆ ಹಿನ್ನೆಲೆಯಲ್ಲಿ ಜೈಲ್ ಅಧಿಕಾರಿಗಳು ಹೈ ಅಲರ್ಟ್ ಆಗಿದ್ದಾರೆ. ಸಿಬ್ಬಂದಿ ಮೊಬೈಲ್ ಬಳಕೆ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ. ಈ ಬಗ್ಗೆ ಅಧಿಕಾರಿಗಳು ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ. ಕೆಲ ಸಿಬ್ಬಂದಿ ಮನೆಯಲ್ಲಿಯೇ ಮೊಬೈಲ್ ಬಿಟ್ಟುಹೋಗುವ ಸ್ಥಿತಿ ಎದುರಾಗಿದೆ.
ಆರೋಪಿ ನಟ, ದರ್ಶನ್ ಅವರನ್ನು ಬಳ್ಳಾರಿ ಸೆಂಟ್ರಲ್ ಜೈಲಿಗೆ ಕರೆತರುವ ಹಿನ್ನೆಲೆಯಲ್ಲಿ ಡಿಸಿ ಪ್ರಶಾಂತ್ ಕುಮಾರ್ ಮಿಶ್ರ ಮತ್ತು ಡಾ.ಶೋಭಾರಾಣಿ ಆಗಮಿಸಿದ್ದಾರೆ. ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕ್ಯಾತಸಂದ್ರ ಟೋಲ್ ದಾಟಿ, ಶಿರಾ ಮೂಲಕ ಬೆಂಗಳೂರು ಪೊಲೀಸರ ಬೆಂಗಾವಲಿನಲ್ಲಿ ನಟ ದರ್ಶನ್ ಅವರನ್ನು ಶಿಫ್ಟ್ ಮಾಡಲಾಗಿದೆ. ನಟ ದರ್ಶನ್ ಅವರನ್ನು ನೋಡಲು ಕ್ಯಾತಸಂದ್ರ ಮಾರ್ಗದಲ್ಲಿ ಅಭಿಮಾನಿಗಳು ನೆರೆದಿದ್ದರು. ಬೊಲೆರೋ ವಾಹನದಲ್ಲಿ ನಟ ದರ್ಶನ್ನನ್ನು ಕರೆತರಲಾಗಿದೆ.