ಬೆಂಗಳೂರು: ಜೋಡಿ ಹಕ್ಕಿ ಧಾರಾವಾಹಿಯಲ್ಲಿ ರಾಮಣ್ಣ ಪಾತ್ರದಲ್ಲಿ ನಟಿಸುವ ಮೂಲಕ ಖ್ಯಾತಿ ಪಡೆದಿದ್ದ ತಾಂಡವ್ ರಾಮ್ ರನ್ನು ಪೊಲೀಸರು ಕೊಲೆಯತ್ನ ಆರೋಪದ ಮೇಲೆ ಬಂಧಿಸಿದ್ದಾರೆ. ಮುಗಿಲ್ಪೇಟೆ ಚಿತ್ರದ ನಿರ್ದೇಶಕ ಭರತ್ ನಿರ್ದೇಶಿಸುತ್ತಿದ್ದ ದೇವನಾಂಪ್ರಿಯ ಸಿನಿಮಾ ಅರ್ಧಕ್ಕೆ ನಿಲ್ಲಿಸಿದ ಕಾರಣ ಸಿಟ್ಟಾಗಿ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗಿದ್ದು, ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಮುಗಿಲ್ಪೇಟೆ ಸಿನಿಮಾವನ್ನು ನಿರ್ದೇಶಿಸಿದ್ದ ಭರತ್ ದೇವನಾಂಪ್ರಿಯ ಎಂಬ ಚಿತ್ರಕ್ಕೆ ಆಯಕ್ಷನ್ ಕಟ್ ಹೇಳುತ್ತಿದ್ದರು. ಈ ಚಿತ್ರದಲ್ಲಿ ತಾಂಡವ್ ರಾಮ್ ನಾಯಕನಾಗಿ ನಟಿಸುತ್ತಿದ್ದರು, ಈ ಸಿನಿಮಾವನ್ನು ಅರ್ಧಕ್ಕೆ ನಿಲ್ಲಿಸಿದ್ದ ಕಾರಣ ಕುಪಿತಗೊಂಡಿದ್ದ ತಾಂಡವ್ ತಮ್ಮ ಬಳಿ ಇದ್ದ ಬಂದೂಕನ್ನು ತೋರಿಸಿ ನಿರ್ದೇಶಕನಿಗೆ ಹೆದರಿಸಿದ್ದಾರೆ. ಆ ಬಳಿಕ ಗುಂಡು ಹಾರಿಸಿ ಕೊಲ್ಲುವ ಯತ್ನ ಮಾಡಿದ್ದಾರೆ. ಭರತ್ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದು, ನಿರ್ದೇಶಕ ನೀಡಿದ ದೂರನ್ನು ಆಧರಿಸಿ ಪೊಲೀಸರು ನಟನನ್ನು ಬಂಧಿಸಿದ್ದಾರೆ.
ಘಟನೆ ಕುರಿತು ಮಾತನಾಡಿರು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಘಟನೆ ಸೋಮವಾರ (ನವೆಂಬರ್ 18) ನಡೆದಿದ್ದು, ನಟನ ಬಳಿ ಇದ್ದ ಲೈಸೆನ್ಸ್ಡ್ ಗನ್ಅನ್ನು ವಶಕ್ಕೆ ಪಡೆಯಲಾಗಿದೆ. ಪ್ರಾಥಮಿಕ ತನಿಖೆ ವೇಳೆ ಉದ್ದೇಶ ಪೂರ್ವಕವಾಗಿ ಮಾಡಿರುವುದು ಗೊತ್ತಾಗಿದೆ. ಆರೋಪಿಯನ್ನ ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.
ಒಂದು ಕಥೆ ಹೇಳ್ಲಾ, ಜೋಡಿಹಕ್ಕಿ ಸೀರಿಯಲ್, ಭೂಮಿಗೆ ಬಂದ ಭಗವಂತ ಸೀರಿಯಲ್ನಲ್ಲಿ ತಾಂಡವ್ ರಾಮ್ ನಾಯಕನಾಗಿ ನಟಿಸಿ ಸೈ ಎನಿಸಿಕೊಂಡಿದ್ದರು. ಭರತ್ ಎಸ್. ನಾವುಂದ ಅವರು ಅಡಚಣೆಗಾಗಿ ಕ್ಷಮಿಸಿ ಚಿತ್ರದ ಮೂಲಕ ನಿರ್ದೇಶಕನಾಗಿ ಪ್ರೇಕ್ಷಕರಿಗೆ ಪರಿಚಯಗೊಂಡಿದ್ದರು. ಆ ನಂತರ ಅವರು ಮನ ಸೆಳೆಯುವ ಪ್ರೇಮಕಥೆ ಇರುವ, ಕೌಟುಂಬಿಕ ಮೌಲ್ಯಗಳನ್ನು ಒಳಗೊಂಡ ಮುಗಿಲ್ ಪೇಟೆ ಚಿತ್ರವನ್ನು ನಿರ್ದೇಶಿಸಿದರು.