ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟಿ ರಚಿತಾ ರಾಮ್ ಅವರಿಂದು ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಅಭಿಮಾನಿಗಳಲ್ಲಿ ಕ್ಷಮೆ ಯಾಚಿಸಿದ್ದಾರೆ. ಅಕ್ಟೋಬರ್ 3ರಂದು ನಟಿ 32ನೇ ವಸಂತಕ್ಕೆ ಕಾಲಿಡಲಿದ್ದಾರೆ. ಆದರೆ ಈ ಬಾರಿ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಹಾಗಾಗಿ, ತಮ್ಮ ಫ್ಯಾನ್ಸ್ ಬಳಿ ಕ್ಷಮೆ ಕೋರಿದ್ದಾರೆ.
ಈ ಬಗ್ಗೆ ರಚಿತಾ ರಾಮ್ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ವೊಂದನ್ನು ಶೇರ್ ಮಾಡಿದ್ದಾರೆ. ಸೀರೆಯುಟ್ಟು, ಅದಕ್ಕೆ ತಕ್ಕ ಆಭರಣ ತೊಟ್ಟು, ಹಣೆಗೆ ಬಿಂದಿ ಇಟ್ಟು, ಮಲ್ಲಿಗೆ ಮುಡಿದು ಸಾಂಪ್ರದಾಯಿಕ ನೋಟದಲ್ಲಿ ಬಹಳ ಸೊಗಸಾಗಿ ಕಾಣಿಸಿಕೊಂಡಿರುವ ಫೋಟೋವನ್ನು ಈ ಪೋಸ್ಟ್ ಒಳಗೊಂಡಿದೆ.
ಜೊತೆಗೆ ಫೋಟೋ ಮೇಲೆ, ‘ಎಲ್ಲರಿಗೂ ನಮಸ್ಕಾರ. ಎಲ್ಲರೂ ಚೆನ್ನಾಗಿದ್ದೀರಿ ಎಂದು ಭಾವಿಸುತ್ತಾ, ಈ ಬಾರಿ ಚಿತ್ರೀಕರಣ ಇರುವುದರಿಂದ ನನ್ನ ಹುಟ್ಟುಹಬ್ಬ (ಅಕ್ಟೋಬರ್ 3) ಆಚರಣೆಯನ್ನು ನಾನು ಮಾಡಿಕೊಳ್ಳುತ್ತಿಲ್ಲ ಎಂದು ಹೇಳಲು ಇಚ್ಚಿಸುತ್ತೇನೆ. ಎಲ್ಲರಿಗೂ ಕ್ಷಮೆ ಯಾಚಿಸುತ್ತಾ, ಎಂದಿನಂತೆ ಪ್ರತೀ ಭಾನುವಾರ ಚಿತ್ರೀಕರಣ ಮುಗಿಸಿ ಬಂದ ನಂತರ ಸಿಗುತ್ತೇನೆ.’ – ನಿಮ್ಮ ಪ್ರೀತಿಯ ರಚ್ಚು ಎಂದು ಬರೆದುಕೊಂಡಿದ್ದಾರೆ. ಪೋಸ್ಟ್ಗೆ ಲವ್ ಯೂ ಆಲ್ ಎಂಬ ಕ್ಯಾಪ್ಷನ್ ಕೊಟ್ಟಿದ್ದಾರೆ.
ಕಳೆದ ವರ್ಷ ಕನ್ನಡಿಗರು ಕಾವೇರಿಗಾಗಿ ಹೋರಾಟ ಮಾಡುತ್ತಿದ್ದ ಹಿನ್ನೆಲೆ ರಚಿತಾ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ಈ ಬಗ್ಗೆ ಸೋಷಿಯಲ್ ಮೀಡಿಯಾ ಪೋಸ್ಟ್ ಶೇರ್ ಮಾಡಿದ್ದ ನಟಿ, ‘ಕರ್ನಾಟಕದಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಂದ ಈ ವರ್ಷ ನನ್ನ ಹುಟ್ಟುಹಬ್ಬ ಆಚರಿಸುವುದು ಸೂಕ್ತವಲ್ಲ ಎಂದನಿಸುತ್ತಿದೆ. ನಾನು ಮನೆಯಲ್ಲಿ ಇರುವುದಿಲ್ಲವಾದ್ದರಿಂದ ನನ್ನ ಅಭಿಮಾನಿಗಳು ನನ್ನ ಮನೆಯ ಹತ್ತಿರ ಬರಬೇಡಿ ಎಂದು ದಯೆಯಿಂದ ವಿನಂತಿಸುತ್ತೇನೆ. ನಿಮ್ಮ ಪ್ರೀತಿ ಮತ್ತು ಅಭಿಮಾನ ನನ್ನೊಂದಿಗೆ ಸದಾ ಇರಲಿ’ ಎಂದು ತಿಳಿಸಿದ್ದರು.