ಕೋಟ್ಯಂತರ ರೂಪಾಯಿ ಚಿನ್ನ ವಂಚನೆ ಕೇಸ್‌ನಲ್ಲಿ ಸಿಲುಕಿಕೊಂಡಿರುವ ಆರೋಪಿ ಐಶ್ವರ್ಯ ಗೌಡ ಅವರ ಬಗ್ಗೆ ಸ್ಫೋಟಕ ಮಾಹಿತಿಗಳು ಬೆಳಕಿಗೆ ಬಂದಿವೆ. ಮೊದಲಿಗೆ ಐಶ್ವರ್ಯ ಗೌಡ ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ತಂಗಿ ಎಂದು ಹೇಳಿಕೊಂಡು ವಂಚನೆ ಮಾಡಿರುವ ಆರೋಪ ಕೇಳಿಬಂದಿತ್ತು. ಇದೀಗ ಇದೇ ಕೇಸ್‌ನಲ್ಲಿ ಪಟ್ಣಣಗೆರೆ ಶೆಡ್‌ನ ಹೆಸರು ಕೂಡ ಕೇಳಿಬಂದಿದೆ.
ಹೌದು, ಸುಮಾರು 14 ಕೆ.ಜಿ ಚಿನ್ನದ ಕೇಸ್‌ನಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಹೊರಬಂದಿರುವ ಐಶ್ವರ್ಯಾ ಗೌಡ ಅವರಿಗೆ ಪಟ್ಟಣಗೆರೆಯ ಶೆಡ್‌ನ ನಂಟಿದೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪಟ್ಟಣಗೆರೆ ಶೆಡ್ ಕುಖ್ಯಾತಿ ಪಡೆದಿತ್ತು. ಇದೇ ಶೆಡ್‌ನಲ್ಲಿ ಐಶ್ವರ್ಯ ಗೌಡ ಸ್ಟಾರ್ ನಟರೊಬ್ಬರನ್ನು ಮೀಟ್ ಮಾಡಿರುವ ವಿಚಾರ ಬಹಿರಂಗವಾಗಿದೆ.
ರಾಜಕಾರಣಿಗಳು ಮಾತ್ರವಲ್ಲದೆ ಸಿನಿಮಾ ರಂಗದವರಿಗೂ ಐಶ್ವರ್ಯ ಗೌಡ ಚಳ್ಳೆಹಣ್ಣು ತಿನ್ನಿಸಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದೇ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ಎನ್ನಲಾದ ನಟ ಧರ್ಮ ಕೂಡ ಸ್ಟಾರ್ ನಟರೊಬ್ಬರನ್ನು ಇದೇ ಶೆಡ್‌ನಲ್ಲಿ ಐಶ್ವರ್ಯಾಗೆ ಪರಿಚಯ ಮಾಡಿಸಿದ್ದರು ಎನ್ನಲಾಗಿದೆ.
ಅಲ್ಲದೆ ನಟ ಸಿನಿಮಾ ಶೂಟಿಂಗ್‌ಗೆ ಹಲವು ದುಬಾರಿ ಕಾರುಗಳನ್ನು ಕೂಡ ಐಶ್ವರ್ಯಾ ಕೊಟ್ಟಿದ್ದರು. ಇದರ ನಂತರ ಇವರಿಬ್ಬರ ನಡುವೆ ಉತ್ತಮ ಸ್ನೇಹ ಕೂಡ ಇತ್ತು. ಕಿರುತೆರೆ ನಟಿಯರು ಹಾಗೂ ಸ್ಟಾರ್ ನಟನೊಂದಿಗೆ ಐಶ್ವರ್ಯ ನಂಟು ಹೊಂದಿದ್ದು, ಅವರಿಗೆ ದುಬಾರಿ ಗಿಫ್ಟ್‌ಗಳನ್ನು ನೀಡಿರುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಸ್ಟಾರ್ ನಟ ಹಾಗೂ ನಟಿಯರಿಗೆ ನೋಟಿಸ್ ನೀಡಲು ಪೊಲೀಸರು ಮುಂದಾಗಿದ್ದಾರಂತೆ.
ಅಲ್ಲದೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಎಸ್ಎಲ್ವಿವಿ ಪ್ರೊಡಕ್ಷನ್ ಎಂದು ಐಶ್ವರ್ಯ ದಂಪತಿ 2021ರಲ್ಲಿ ನೋಂದಣಿ ಮಾಡಿಸಿದ್ದರು. ವಂಚನೆ ಮಾಡುವ ಉದ್ದೇಶದಿಂದಲೇ ಇವರು ತಮ್ಮ ನೋಂದಣಿ ಮಾಡಿಸಿದ್ದರು ಎನ್ನುವ ಸಂಶಯವೂ ವ್ಯಕ್ತವಾಗಿದೆ
ಏನಿದು ಪ್ರಕರಣ?: ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಸಹೋದರಿ ಎಂದು ನಂಬಿಸಿ, ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಚಿನ್ನ ಪಡೆದು ವಂಚಿಸಿದ ಪ್ರಕರಣದಲ್ಲಿ ಐಶ್ವರ್ಯಾ ಗೌಡ ಹಾಗೂ ಆಕೆಯ ಪತಿ ಕೆ.ಎನ್.ಹರೀಶ್ ಅವರ ಹೆಸರು ಕೇಳಿಬಂದಿತ್ತು. ಈ ಹಿನ್ನೆಲೆ ಇವರನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ, ಕೋರ್ಟ್ ಆದೇಶಿಸಿತ್ತು.
ಇದೇ ಕೇಸ್‌ನಲ್ಲಿ ಕನ್ನಡ ನಟ ಧರ್ಮೇಂದ್ರ ಅವರ ಹೆಸರು ಕೂಡ ಕೇಳಿಬಂದಿದೆ. ದೂರುದಾರರಾದ ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಚಿನ್ನದಂಗಡಿಯ ಮಾಲಕಿ ವನಿತಾ ಐತಾಳ್ ಅವರಿಗೆ ಕರೆ ಮಾಡಿದ್ದ ಧರ್ಮೇಂದ್ರ, ಡಿ.ಕೆ.ಸುರೇಶ್ ಅವರ ಧ್ವನಿಯಲ್ಲಿ ಮಾತನಾಡಿದ್ದರು ಎನ್ನಲಾಗಿದೆ. ಇದೀಗ ಪಟ್ಟಣಗೆರೆ ಶೆಡ್‌ನಲ್ಲಿ ಐಶ್ವರ್ಯ ಅವರು ಭೇಟಿಯಾಗಿದ್ದ ಸ್ಟಾರ್ ನಟ ಯಾರು ಎಂಬುದನ್ನು ಪೊಲೀಸರು ಪತ್ತೆ ಹಚ್ಚಲು ಮುಂದಾಗಿದ್ದಾರೆ.