ಬೆಂಗಳೂರು: ಧಾರವಾಡ ಜಿಲ್ಲೆಯ ಕುಂದಗೋಳ ಠಾಣೆಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ನೀತಿ ಸಂಹಿತೆ ಉಲ್ಲಂಘಿಸಿ ಭಾಷಣ ಮಾಡಿದ ಆರೋಪದ ಸಂಬoಧ ಬಿಜೆಪಿ ಮುಖಂಡ ಬಸನಗೌಡ ಪಾಟೀಲ ಯತ್ನಾಳ್ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ. ಪ್ರಕರಣ ರದ್ದು ಕೋರಿ ಯತ್ನಾಳ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಅಲ್ಲದೆ, ಯತ್ನಾಳ್ ವಿರುದ್ಧದ ಪ್ರಕರಣ ವಿಚಾರಣೆಗಾಗಿಯೇ ಒಂದು ದಿನ ಇಡಬೇಕಾಗುತ್ತದೆ ಎಂದು ನ್ಯಾಯಪೀಠ ಮೌಖಿಕವಾಗಿ ತಿಳಿಸಿತು. ಜೊತೆಗೆ, ಕಳೆದ ಲೋಕಸಭಾ ಚುನಾವಣೆಯ ವೇಳೆ ದ್ವೇಷ ಭಾಷಣ ಮಾಡಿದ ಆರೋಪದ ಸಂಬOಧ ಕಲಬುರಗಿ ನಗರದ ರೋಜಾ ಠಾಣೆಯಲ್ಲಿ ಐಪಿಸಿ ಸೆಕ್ಷನ್ 505(2) ಅಡಿ ದಾಖಲಾಗಿರುವ ಪ್ರಕರಣ ಮತ್ತು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕುರಿತು ಕೋಮು ದ್ವೇಷ ಮತ್ತು ಪ್ರಚೋದನಕಾರಿ ಭಾಷಣ ಮಾಡಿದ ಆರೋಪ ಸಂಬOಧ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಗಳ ವಿಚಾರಣೆಯನ್ನು ಹೈಕೋರ್ಟ್ ನವೆಂಬರ್ ೨೮ಕ್ಕೆ ಮುಂದೂಡಿತು.
ಪ್ರಕರಣದ ಹಿನ್ನೆಲೆ: ಟಿಪ್ಪು ಸುಲ್ತಾನ್ ಲಕ್ಷಾಂತರ ಹಿಂದೂಗಳನ್ನು ಕೊಲೆ ಮಾಡಿದ್ದಾನೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಗ್ರಾಮ ಪಂಚಾಯಿತಿಗಳಲ್ಲಿ ಹಾಕಿರುವ ಟಿಪ್ಪು ಸುಲ್ತಾನ್ ಫೋಟೋಗಳನ್ನು ಕಿತ್ತುಹಾಕಲು ಆದೇಶಿಸಲಾಗುವುದು ಎಂದು 2023 ಮೇ 1 ರಂದು ಪ್ರಚಾರದ ವೇಳೆ ಬಸನಗೌಡ ಪಾಟೀಲ ಯತ್ನಾಳ್ ಭಾಷಣ ಮಾಡಿದ್ದರು. ಇದರ ವಿರುದ್ಧ ಕುಂದಗೋಳ ಠಾಣೆಯಲ್ಲಿ ಪ್ರಜಾಪ್ರತಿನಿಧಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.