ಚಿನ್ನ ಕಳ್ಳ ಸಾಗಾಣೆ ಪ್ರಕರಣದಲ್ಲಿ ಬಂಧಿತವಾಗಿರುನ ನಟಿ ರನ್ಯಾ ರಾವ್ ಕುರಿತಂತೆ ಅನೇಕ ಅಚ್ಚರಿಯ ಮಾಹಿತಿಗಳು ಬಹಿರಂಗವಾಗುತ್ತಿವೆ. ನಟಿ ಗುಟ್ಟಾಗಿ ಮದುವೆಯಾಗಿದ್ದಾರೆ ಎನ್ನುವ ವಿಚಾರ ಬಂಧನವಾದ ಬಳಿಕ ತಿಳಿದಿತ್ತು, ಆದರೆ ರನ್ಯಾ ರಾವ್ ಪತಿ ಜತಿನ್ ಹುಕ್ಕೇರಿ ಕೋರ್ಟ್ ಮುಂದೆ ಅಚ್ಚರಿಯ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಪತ್ನಿಯ ಚಿನ್ನದ ಕಳ್ಳ ಸಾಗಾಣೆ ಪ್ರಕರಣದಲ್ಲಿ ಬಂಧನದಿಂದ ವಿನಾಯಿತಿ ನೀಡಬೇಕು ಎಂದು ಪತಿ ಜತಿನ್ ಹುಕ್ಕೇರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಮುಂದಿನ ವಿಚಾರಣೆವರೆಗೂ ಜತಿನ್ ಹುಕ್ಕೇರಿ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಂತೆ ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ.
ರನ್ಯಾ ರಾವ್ ಮತ್ತು ಜತಿನ್ ಹುಕ್ಕೇರಿ ಮದುವೆ ವಿಚಾರಕ್ಕೆ ಸಂಬಂಧಪಟ್ಟಂತೆ ವಕೀಲರು ಮಹತ್ವದ ಮಾಹಿತಿಯನ್ನು ಬಹಿರಂಗಪಟಿಸಿದ್ದಾರೆ. ಜತಿನ್ ಹುಕ್ಕೇರಿ ಪರ ವಕೀಲರಾಗಿರುವ ಪ್ರಭುಲಿಂಗ ನವದಗಿ ಅವರು, ತನ್ನ ಕಕ್ಷಿದಾರ ನವೆಂಬರ್ನಲ್ಲಿ ರನ್ಯಾ ರಾವ್ ಅವರನ್ನು ವಿವಾಹವಾಗಿದ್ದು ಆದರೆ ಡಿಸೆಂಬರ್ ತಿಂಗಳಲ್ಲೇ ಕೆಲವು ಸಮಸ್ಯೆಗಳಿಂದ ಅನಧಿಕೃತವಾಗಿ ಬೇರೆಯಾಗಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದು, ಬಂಧನದಿಂದ ವಿನಾಯಿತಿ ಕೋರಿದ್ದರು.
ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ಐ) ವಕೀಲ ಮಧು ರಾವ್ ಅವರು ಮುಂದಿನ ಸೋಮವಾರ ತಮ್ಮ ಆಕ್ಷೇಪಣೆ ಸಲ್ಲಿಸುವುದಾಗಿ ಹೇಳಿದರು. ಜತಿನ್ ಹುಕ್ಕೇರಿಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಹೇಳಿದ್ದು ಹಿಂದಿನ ಆದೇಶಗಳು ಮಾರ್ಚ್ 24 ರ ಸೋಮವಾರದವರೆಗೆ ಜಾರಿಯಲ್ಲಿರುತ್ತವೆ ಎಂದು ಹೇಳಿದೆ. ಮುಂದಿನ ವಿಚಾರಣೆಯಂದು ಡಿಆರ್ಐ ತನ್ನ ಆಕ್ಷೇಪಣೆ ಸಲ್ಲಿಸಲಿದೆ.
ರನ್ಯಾ ರಾವ್ ಅವರ ಪತಿಯಾಗಿರುವ ಕಾರಣ ಚಿನ್ನ ಕಳ್ಳ ಸಾಗಾಣೆ ಪ್ರಕರಣದಲ್ಲಿ ತನ್ನನ್ನು ಡಿಆರ್ ಐ ವಶಕ್ಕೆ ಪಡೆಯಬಹುದು ಎನ್ನುವ ಭಯದಿಂದ ಜತಿನ್ ಹುಕ್ಕೇರಿ ಮಾರ್ಚ್ 11ರಂದು ಕರ್ನಾಟಕ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ತನ್ನ ಮಗಳು ಮದುವೆಯಾಗಿ ಬೇರೆ ವಾಸಿಸುತ್ತಿದ್ದಾರೆ ಎಂದು ಡಿಜಿಪಿ ರಾಮಚಂದ್ರ ರಾವ್ ಹೇಳಿದ ಬಳಿಕ ರನ್ಯಾ ರಾವ್ ಮದುವೆ ಸಂಗತಿ ಸಾರ್ವಜನಿಕವಾಗಿ ಬಹಿರಂಗವಾಗಿತ್ತು. ಮಾರ್ಚ್ 3 ರಂದು ದುಬೈನಿಂದ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದಾಗ ಸಿಕ್ಕಿಬಿದ್ದ ನಂತರ ಬಂಧನದಲ್ಲಿರುವ ರನ್ಯಾ ರಾವ್ರನ್ನು ತೀವ್ರವಾಗಿ ವಿಚಾರಣೆ ನಡೆಸಲಾಗುತ್ತಿದೆ. ರನ್ಯಾ ರಾವ್ ಜಾಮೀನುಗೆ ಅರ್ಜಿ ಸಲ್ಲಿಸಿದ್ದರೂ ಕೆಳ ನ್ಯಾಯಾಲಯ ಅವರ ಅರ್ಜಿಯನ್ನು ತಿರಸ್ಕರಿಸಿತ್ತು. ಶನಿವಾರ ರನ್ಯಾ ರಾವ್ ಸೆಷನ್ಸ್ ನ್ಯಾಯಾಲಯದಲ್ಲಿ ಹೊಸ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದಾರೆ.