ತುಮಕೂರು:- ‘ನನ್ನ ಸ್ಕೂಲ್ ಪ್ರೆಂಡ್ ಬಂದಿದ್ದಳು. ಪೋಟೊ ತೆಕ್ಕಳೊಕೆ ಅಂತಾ ಮೈದಾಳ ಕೆರೆಗೆ ಹೋಗಿದ್ವಿ. ಅದೇನೋ ಗೊತ್ತಿಲ್ಲ. ಪೋಟೊ ತೆಗೆದುಕೊಳ್ಳಬೇಕಾದರೆ ಪಟ್ಟಂತ ಸ್ಲಿಪ್ ಆಗಿ ಬಿದ್‌ಬಿಟ್ಟೆ. ನಂಗೆ ಸ್ಮಿಮ್ಮಿಂಗ್ ಏನೂ ಬರಲ್ಲ. ನನ್ ಅದೃಷ್ಟ ಏನೋ ಗೊತ್ತಿಲ್ಲ. ಅದು ಕೆಳಗಡೆ ಫಾಲ್ಸ್ ತುಂಬಾ ದೊಡ್ಡದಾಗಿದೆ. ನೀರಿನಲ್ಲಿ ಕೊಚ್ಚಿ ಹೋಗಬೇಕಾದರೆ ನನ್ನ ಜೀವ ಹೋಯ್ತು ಅನಕೊಂಡೆ. ಪುಣ್ಯಕ್ಕೆ ಬಂಡೆ ಮಧ್ಯೆ ಸಿಲುಕಿಹಾಕೊಂಡೆ. ಆ ಬಂಡೆ ಮಧ್ಯೆಯೇ ಅರ್ಜೆಸ್ಟ್ ಮಾಡಿಕೊಂಡು ನಾನು ಇಡೀ ರಾತ್ರಿ ಮಂಡಿ ಮೇಲೆ ಕೂತಿದ್ದೆ. ಒಂದು ಕಾನ್ಪಿಡೆನ್ಸ್ ಇತ್ತು. ಮುಳುಗಿದ್ದಾಗ ರೆಸ್ಕೂö್ಯ ಮಾಡ್ತಾರಲ್ಲ ಅದನ್ನೆಲ್ಲಾ ನೋಡಿದ್ದೆ. ಹಾಗಾಗಿ ಯಾರಾದರೂ ಬಂದು ಮಾಡ್ತಾರೆ ಅಂತಾ ನಂಬಿಕೆಯಿತ್ತು. ಕಾಲು ಬಿಟ್ಟಿದ್ರೆ ನಾನು ಪಾತಾಳಕ್ಕೆ ತಲುಪುತ್ತಿದ್ದೆ. ತುಂಬಾ ಚಳಿ ಆಗ್ತಿತ್ತು. ತುಂಬಾ ಕೂಗುತ್ತಿದೆ. ಭಯ ಅನ್ನಿಸಲಿಲ್ಲ. ಬದುಕುತ್ತೇನೆ ಎಂಬ ಕಾನ್ಫಿಡೆನ್ಸ್ ಇತ್ತು.’
ಇದು ಕಲ್ಲಿನ ಪೊಟರೆಯಲ್ಲಿ ಸಿಲುಕಿ ಹಾಕಿಕೊಂಡು ಇಡೀ ರಾತ್ರಿ ದೇವರು ಹಾಗೂ ನನ್ನ ತಂದೆ-ತಾಯಿಯನ್ನು ನೆನಪಿಸಿಕೊಂಡು ಧೈರ್ಯವಾಗಿದ್ದೆ ಎಂದು ಪವಾಡ ರೀತಿಯಲ್ಲಿ ಬದುಕುಳಿದ ವಿದ್ಯಾರ್ಥಿನಿ ಹಂಸ ಅವರ ಮಾತು. ನನಗೆ ಎಂದೂ ಹೀಗೆ ಆಗಿರಲಿಲ್ಲ. ಆದರೆ, ಇಂತಹ ಸಂದರ್ಭದಲ್ಲಿ ಯಾರೂ ಧೈರ್ಯ ಕಳೆದುಕೊಳ್ಳಬಾರದು. ಹಿಂದೆಯೂ ಸಹ ಮಂತ್ರಾಲಯದಲ್ಲಿ ನನ್ನ ಮೊಬೈಲ್ ಬಿದ್ದು ಹೋಗಿತ್ತು. ನಾನು ಬಿದ್ದಿರಲಿಲ್ಲ. ಈಗ ನಾನು ಬಿದ್ದಿದ್ದೇನೆ. ಇಡೀ ದಿನ ನಿದ್ದೆ ಇರಲಿಲ್ಲ. ಕಿರುಚುತ್ತಿದ್ದೆ ಎನ್ನುವುದು ಹಂಸ ಅವರ ಮಾತು.
ಘಟನೆ ಹಿನ್ನಲೆ:- ತುಮಕೂರು ತಾಲ್ಲೂಕಿನ ಮೈದಾಳ ಕೆರೆಕೋಡಿ ನೀರಿನಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಕೊಚ್ಚಿ ಹೋಗಿದ್ದ ವಿದ್ಯಾರ್ಥಿನಿ ಜೀವಂತವಾಗಿ ಪತ್ತೆಯಾಗುವ ಮೂಲಕ ಸಾವನ್ನೇ ಗೆದ್ದು ಬಂದಿದ್ದಾರೆ.
ನಗರದ ಎಸ್‌ಐಟಿ ಕಾಲೇಜಿನಲ್ಲಿ ಎಂಜಿನಿಯರಿOಗ್ ವ್ಯಾಸಂಗ ಮಾಡುತ್ತಿದ್ದ ಗುಬ್ಬಿ ತಾಲ್ಲೂಕಿನ ಶಿವರಾಂಪುರ ನಿವಾಸಿ ಹಂಸ ಎಂಬಾಕೆಯೇ ಸಾವನ್ನು ಗೆದ್ದು ಬಂದಿರುವ ವಿದ್ಯಾರ್ಥಿನಿ. ವಿದ್ಯಾರ್ಥಿನಿ ಹಂಸ ಗೆಳತಿಯರ ಜತೆ ಮಂದಾರಗಿರಿ ಬೆಟ್ಟದ ವೀಕ್ಷಣೆಗೆ ನಿನ್ನೆ ಮಧ್ಯಾಹ್ನ ತೆರಳಿದ್ದರು. ಅಲ್ಲೇ ಸಮೀಪದಲ್ಲಿದ್ದ ಮೈದಾಳ ಕೆರೆ ಕೋಡಿ ಬಳಿ ಹೋಗಿದ್ದಾರೆ. ಕೋಡಿ ನೀರು ಹರಿಯುವುದರಿಂದ ಖುಷಿಯಾದ ವಿದ್ಯಾರ್ಥಿನಿ ಕೋಡಿ ಬಳಿ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದು, ಆ ಸಂದರ್ಭದಲ್ಲಿ ಕಾಲು ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.
ನಿನ್ನೆ ಸಂಜೆ ಈ ಘಟನೆ ಸಂಭವಿಸಿದ್ದು, ಸುದ್ದಿ ತಿಳಿದ ಕೂಡಲೇ ಕ್ಯಾತ್ಸಂದ್ರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ನೀರಿನಲ್ಲಿ ಕೊಚ್ಚಿ ಹೋಗಿದ್ದ ವಿದ್ಯಾರ್ಥಿನಿಗಾಗಿ ತೀವ್ರ ಕಾರ್ಯಾಚರಣೆ ನಡೆಸಿದ್ದರು.
ಇಂದು ಬೆಳಿಗ್ಗೆ ಮತ್ತೆ ರಕ್ಷಣಾ ಕಾರ್ಯವನ್ನು ಅಗ್ನಿ ಶಾಮಕ ದಳದ ಸಿಬ್ಬಂದಿ ಕೈಗೊಂಡಾಗ ಕಲ್ಲಿನ ಪೊಟರೆಯಲ್ಲಿ ವಿದ್ಯಾರ್ಥಿನಿ ಸಿಲುಕಿಕೊಂಡಿರುವುದು ಪತ್ತೆಯಾಗಿದೆ. ಸದ್ಯ ವಿದ್ಯಾರ್ಥಿನಿ ಅಸ್ವಸ್ಥರಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸತತ 12 ಗಂಟೆಗಳ ಕಾಲ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸುವ ಮೂಲಕ ವಿದ್ಯಾರ್ಥಿನಿಯನ್ನು ಜೀವಂತವಾಗಿ ರಕ್ಷಿಸಿದ್ದಾರೆ. ಅಗ್ನಿಶಾಮಕ ದಳದ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರಿಂದ ಪ್ರಶಂಸೆಯ ಮಹಾಪೂರವೇ ಹರಿದು ಬಂದಿದೆ.
ನಿನ್ನೆ ಸಂಜೆ ಕೋಡಿ ನೀರಿನಲ್ಲಿ ಕೊಚ್ಚಿ ಹೋಗಿದ್ದ ವಿದ್ಯಾರ್ಥಿನಿ ಹಂಸ ಇಡೀ ರಾತ್ರಿ ಕಲ್ಲಿನ ಪೊಟರೆಯಲ್ಲಿ ಕಾಲ ಕಳೆದಿದ್ದು, ಪವಾಡ ಎಂಬOತೆ ಬದುಕುಳಿದು ಬಂದಿರುವುದು ಪೋಷಕರು ಹಾಗೂ ವಿದ್ಯಾರ್ಥಿಗಳ ಖುಷಿಗೆ ಪಾರೇ ಇಲ್ಲದಂತಾಗಿದೆ.
ವಿದ್ಯಾರ್ಥಿನಿ ಹಂಸ ಜೀವಂತವಾಗಿರುವ ವಿಷಯ ತಿಳಿದ ಕೂಡಲೇ ಎಸ್‌ಐಟಿ ಕಾಲೇಜಿನ ಆಡಳಿತ ಮಂಡಳಿ, ಉಪನ್ಯಾಸಕರ ವೃಂದ ಹಾಗೂ ವಿದ್ಯಾರ್ಥಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ವಿದ್ಯಾರ್ಥಿನಿ ಹಂಸರವರನ್ನು ಜಿಲ್ಲಾಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿದ ಸುದ್ದಿ ತಿಳಿಯುತ್ತಿದ್ದಂತೆ ಎಸ್‌ಐಟಿ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಸ್ನೇಹಿತೆಯನ್ನು ನೋಡಲು ಆಸ್ಪತ್ರೆ ಮುಂಭಾಗ ಜಮಾಯಿಸಿದ್ದ ದೃಶ್ಯ ಕಂಡು ಬಂತು.
ವಿದ್ಯಾರ್ಥಿನಿ ಹೇಳಿಕೆ
ಕಲ್ಲಿನ ಪೊಟರೆಯಲ್ಲಿ ಸಿಲುಕಿ ಹಾಕಿಕೊಂಡು ಇಡೀ ರಾತ್ರಿ ದೇವರು ಹಾಗೂ ನನ್ನ ತಂದೆ-ತಾಯಿಯನ್ನು ನೆನಪಿಸಿಕೊಂಡು ಧೈರ್ಯವಾಗಿದ್ದೆ ಎಂದು ಪವಾಡ ರೀತಿಯಲ್ಲಿ ಬದುಕುಳಿದ ವಿದ್ಯಾರ್ಥಿನಿ ಹಂಸ ಹೇಳಿದರು.
ಟಿವಿಗಳಲ್ಲಿ ಇಂತಹ ಕಾರ್ಯಾಚರಣೆ ಮಾಡುವುದನ್ನು ನೋಡಿದ್ದೆ. ಅದೇ ರೀತಿ ಇಲ್ಲೂ ಬರಬಹುದು ಎಂದುಕೊAಡಿದ್ದೆ. ಅದೇ ರೀತಿ ಇಲ್ಲೂ ಸಹ ಬೆಳಕು ಬಂತು, ಅವರು ಕೂಗಿದ್ದು ನನಗೆ ಕೇಳಿಸಿತು. ಅದಾದ ಬಳಿಕ ನಾನು ಸಹ ಕೂಗಿದೆ. ಬಳಿಕ ಕಾರ್ಯಾಚರಣೆ ನಡೆಸಿ ನನ್ನನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದರು ಎಂದು ಧನ್ಯತಾ ಭಾವದಿಂದ ಹೇಳಿದರು.
ಇನ್ನು ಮುಂದೆ ಯಾವುದೇ ಕಾರಣಕ್ಕೂ ಈ ರೀತಿಯ ಸೆಲ್ಫಿ ಗೀಳಿಗೆ ಯಾರೂ ಸಹ ಮುಂದಾಗಬಾರದು ಎಂದು ಮನವಿ ಮಾಡಿದರು.