ಯಶ್ ನಟನೆಯ ‘ಟಾಕ್ಸಿಕ್’ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಹರಡಿದೆ. ಅವರು ಈ ಚಿತ್ರಕ್ಕೆ ದೊಡ್ಡ ಮಟ್ಟದ ಸಂಭಾವನೆಯಾಗಿ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ಅವರ ಮೊದಲ ಕನ್ನಡ ಚಿತ್ರವಾಗಿದ್ದು, ಈ ಬೃಹತ್ ಸಂಭಾವನೆ ಚರ್ಚೆಗೆ ಕಾರಣವಾಗಿದೆ.

ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಬಗ್ಗೆ ಸದ್ಯ ಸಾಕಷ್ಟು ಚರ್ಚೆಗಳು ಹುಟ್ಟಿಕೊಂಡಿವೆ. ಈ ಸಿನಿಮಾಗೆ ಅನಿರುದ್ಧ್ ರವಿಚಂದರ್ ಅವರು ಮ್ಯೂಸಿಕ್ ಮಾಡುತ್ತಾರೆ ಎನ್ನುವ ಸುದ್ದಿ ಹರಿದಾಡಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿ ಹಾಗೂ ಅಚ್ಚರಿಗೊಂಡಿದ್ದಾರೆ. ಈ ಬೆನ್ನಲ್ಲೇ ಸಿನಿಮಾ ಸಂಭಾವನೆ ವಿಚಾರ ಕೂಡ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ಈ ಚಿತ್ರಕ್ಕಾಗಿ ಅನಿರುದ್ಧ್ ಅವರು ದೊಡ್ಡ ಮಟ್ಟದ ಸಂಭಾವನೆ ಪಡೆಯುತ್ತಿದ್ದಾರಂತೆ. ಇದನ್ನು ಕೇಳಿ ಫ್ಯಾನ್ಸ್ ಹುಬ್ಬೇರಿಸಿದ್ದಾರೆ.
ಯಶ್ ನಟನೆಯ ‘ಟಾಕ್ಸಿಕ್’ ಚಿತ್ರದ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾಗೆ ಅನಿರುದ್ಧ್ ಅವರು ಮ್ಯೂಸಿಕ್ ಡೈರೆಕ್ಟರ್ ಆಗಿ ಆಯ್ಕೆ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಇದನ್ನು ತಂಡದವರು ಖಚಿತಪಡಿಸಿಲ್ಲ. ಹೀಗಿರುವಾಗಲೇ ಇವರ ಸಂಭಾವನೆ ವಿಚಾರ ಜೋರಾಗಿದೆ.
ಅನಿರುದ್ಧ್ ಅವರು ಪ್ರತಿ ಚಿತ್ರಕ್ಕೆ ಮ್ಯೂಸಿಕ್ ಮಾಡಲು ಬರೋಬ್ಬರಿ 10 ಕೋಟಿ ರೂಪಾಯಿ ಪಡೆಯುತ್ತಾರೆ. ಅವರ ಹಿನ್ನೆಲೆ ಸಂಗೀತ ಹಾಗೂ ಅವರ ಹಾಡುಗಳಿಂದಲೇ ಸಿನಿಮಾಗಳು ಹಿಟ್ ಆದ ಉದಾಹರಣೆ ಇದೆ. ಈಗ ಯಶ್ ಅವರ ‘ಟಾಕ್ಸಿಕ್’ ಚಿತ್ರಕ್ಕೆ ಮ್ಯೂಸಿಕ್ ನೀಡಲು ಆಹ್ವಾನ ಕೊಡಲಾಗಿದೆ. ಅವರು ಇದನ್ನು ಒಪ್ಪಿದ್ದಾರೆ ಎನ್ನಲಾಗುತ್ತಿದೆ. ಅವರು ಹೆಚ್ಚುವರಿಯಾಗಿ ಎರಡು ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದು, ಕೆವಿಎನ್ ಸಂಸ್ಥೆ ಇದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಅಂದರೆ ಅವರು ಈ ಚಿತ್ರಕ್ಕೆ 12 ಕೋಟಿ ರೂಪಾಯಿ ಪಡೆಯಲಿದ್ದಾರೆ.



