ಬೆಳಗಾವಿ: ಕೈದಿ ಪಾಕಿಸ್ತಾನ ಪರ ಘೋಷಣೆ ಕೂಗಿರುವುದು ನಿಜ – ಡಿಸಿಪಿ

ಬೆಳಗಾವಿ: ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಎಡಿಜಿಪಿ ಅಲೋಕ್ ಕುಮಾರ್ ಅವರಿಗೆ ಜೀವ ಬೆದರಿಕೆ ಹಾಕಿದ ಪ್ರಕರಣದ ಆರೋಪಿ, ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿ ಶಾಕೀರ್ ಮೊಹಮ್ಮದ್ ಅಲಿಯಾಸ್ ಜಯೇಶ್ ಪೂಜಾರಿ ಪಾಕಿಸ್ತಾನ ಪರ ಘೋಷಣೆ ಕೂಗಿರುವುದು ನಿಜ ಎಂದು ಬೆಳಗಾವಿ ನಗರ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ರೋಹನ್ ಜಗದೀಶ್ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ”ಬೆಳಗಾವಿಯ 4ನೇ ಜೆಎಂಎಫ್​ಸಿ ಕೋರ್ಟ್​ಗೆ ಇಂದು ಬೆಳಗ್ಗೆ 11 ಗಂಟೆಗೆ ಹಾಜರುಪಡಿಸಿದ ಸಂದರ್ಭದಲ್ಲಿ ಈ ಘೋಷಣೆ ಕೂಗಿದ್ದಾನೆ. ಈತ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಗುಂಡ್ಯ ಎಂಬ ಗ್ರಾಮದ ನಿವಾಸಿ. ಮೂಲ ಹೆಸರು ಜಯೇಶ್​ಕಾಂತ್​ ಪೂಜಾರಿ. 14ನೇ ವಯಸ್ಸಿನಲ್ಲಿ ಮನೆ ಬಿಟ್ಟು ಹೋಗಿದ್ದ. ಕೇರಳದ ಮಲ್ಲಾಪುರಂಗೆ ಹೋಗಿ ಅಲ್ಲಿ ಮತಾಂತರಗೊಂಡಿದ್ದಾನೆ. ಬಳಿಕ ತನ್ನ ಹೆಸರನ್ನು ಶಾಕೀರ್ ಮೊಹಮ್ಮದ್ ಎಂದು ಬದಲಾವಣೆ ಮಾಡಿಕೊಂಡಿದ್ದಾನೆ” ಎಂದು ತಿಳಿಸಿದರು.

”ಈಗ ಹಿಂಡಲಗಾ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ. 2018ರಲ್ಲಿ ಐಪಿಎಸ್​ ಅಧಿಕಾರಿ, ಎಡಿಜಿಪಿ ಅಲೋಕ್ ಕುಮಾರ್ ಅವರಿಗೆ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧ ಇಂದು ಕೋರ್ಟ್​ಗೆ ಹಾಜರುಪಡಿಸಲಾಗಿತ್ತು. ಈ ವೇಳೆ, ‘ಪಾಕಿಸ್ತಾನ ಜಿಂದಾಬಾದ್​’ ಎಂದು ಘೋಷಣೆ ಕೂಗಿದ್ದಾನೆ. ಈಗ ಪೊಲೀಸರು ಠಾಣೆಗೆ ಆತನನ್ನು ಕರೆದುಕೊಂಡು ಬಂದಿದ್ದಾರೆ. ಸದ್ಯ ವಿಚಾರಣೆ ನಡೆಸಲಾಗುತ್ತಿದೆ. ಅಲ್ಲದೇ, ಘೋಷಣೆ ಸಂಬಂಧ ಕೂಡ ಕೇಸ್ ದಾಖಲಿಸಲಾಗುವುದು” ಎಂದು ಹೇಳಿದರು

Leave a Reply

Your email address will not be published. Required fields are marked *