ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಸ್ವರ ಕೇಳಿಬರುತ್ತಿದೆ. ಕಳೆದ ಕೆಲವು ತಿಂಗಳಿನಿಂದ ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ 2000 ರೂಪಾಯಿ ಬರುತ್ತಿಲ್ಲ ಎಂಬ ದೂರು ಬಂದಿತ್ತು. ಇದರ ನಡುವೆಯೇ ಅನ್ನಭಾಗ್ಯ ಯೋಜನೆಯ ಬಗ್ಗೆಯೂ ಫಲಾನುಭವಿಗಳು ಅಸಮಾಧಾನ ಹೊರಹಾಕಿದ್ದಾರೆ.
ಅನ್ನಭಾಗ್ಯ ಯೋಜನೆಯಡಿ ಕೇವಲ ಐದು ಕೆ.ಜಿ.ಅಕ್ಕಿ ನೀಡಲಾಗುತ್ತಿದ್ದು, ಬಾಕಿ ಐದು ಕೆ.ಜಿ.ಅಕ್ಕಿಗೆ ಬದಲಾಗಿ ಹಣವನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡುವುದಾಗಿ ಸರ್ಕಾರ ಹೇಳಿತ್ತು. ಅದರಂತೆ ಹಣ ಕೂಡ ಕೆಲವು ತಿಂಗಳು ಜಮೆಯಾಗಿತ್ತು. ಆದರೆ, ಇತ್ತೀಚಿನ ಕೆಲವು ತಿಂಗಳಿನಿಂದ ಆ ಹಣ ಕೂಡ ಬರುತ್ತಿಲ್ಲ ಎಂದು ಫಲಾನುಭವಿಗಳು ದೂರುತ್ತಿದ್ದಾರೆ.
ಕಾಂಗ್ರೆಸ್ ಸರ್ಕಾರದ ಅನ್ನಭಾಗ್ಯ ಯೋಜನೆಯ ಹಣ ಮೂರು ತಿಂಗಳಿನಿಂದ ಬಂದೇ ಇಲ್ಲ. ಗೃಹಲಕ್ಷ್ಮಿ ಯೋಜನೆಯಂತೆ ಅನ್ನಭಾಗ್ಯಕ್ಕೂ ಸರ್ಕಾರ ಕತ್ತರಿ ಹಾಕುತ್ತಿದೆಯಾ? ಎಂದು ಫಲಾನುಭವಿಗಳು ಆತಂಕಗೊಂಡಿದ್ದಾರೆ. ಈ ಸಂಬಂಧ ನಿನ್ನೆ ಅನ್ನಭಾಗ್ಯ ಫಲಾನುಭವಿಗಳು ಬೆಂಗಳೂರಿನಲ್ಲಿ ಸೇರಿ ಸಭೆ ಕೂಡ ನಡೆಸಿದ್ದಾರೆ.
ಶೇಷಾದ್ರಿಪುರದಲ್ಲಿ ಸಭೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಮೂರು ತಿಂಗಳಿಂದ ಅನ್ನಭಾಗ್ಯದ ಬಾಕಿ ಹಣ ನೀಡದೆ, ಅಕ್ಕಿಯನ್ನೂ ಕೊಡದೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ಫಲಾನುಭವಿಗಳಿಗೆ ಮೋಸ ಮಾಡುತ್ತಿದೆ. ಮೊದಲಿಗೆ ಆರು ತಿಂಗಳು ಅನ್ನಭಾಗ್ಯದ ಬಾಕಿ ಹಣ ಖಾತೆಗೆ ಜಮೆ ಮಾಡಿ ನಂಬಿಸಿದ್ದರು. ಈಗ ಹಣ ಹಾಕುವುದನ್ನು ನಿಲ್ಲಿಸಿದ್ದಾರೆ ಎಂದು ಫಲಾನುಭವಿಗಳು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಅಲ್ಲದೆ ಒಂದು ವೇಳೆ ಅಕ್ಕಿ ಸಿಗದಿದ್ದರೆ, ಇನ್ನಿತರೆ ದಿನಸಿ ಸಾಮಗ್ರಿಗಳನ್ನಾದರೂ ಪಡಿತರದಲ್ಲಿ ನೀಡಿ ಎಂದು ಬೇಡಿಕೆ ಇಟ್ಟಿದ್ದಾರೆ. ನಮಗೆ ಬಾಕಿ ಹಣದ ಅಗತ್ಯವೇನಿಲ್ಲ. ಅದರ ಬದಲು ದಿನಸಿ ಪದಾರ್ಥಗಳನ್ನು ಕೊಟ್ಟರೂ ಸಾಕು ಎಂದಿದ್ದಾರೆ.
ಅನ್ನಭಾಗ್ಯದ ಬಾಕಿ ಹಣವಾಗಿ 170 ರೂಪಾಯಿ ಕೊಡುತ್ತಿದ್ದರು. ಆ ಹಣಕ್ಕೆ ಏನೂ ಬರಲ್ಲ. ಅದರ ಬದಲು ಫಲಾನುಭವಿಗಳಿಗೆ ಅಕ್ಕಿಯನ್ನೇ ಕೊಡಿ ಎಂದು ಕೇಳಿಕೊಳ್ಳುತ್ತಿದ್ದಾರೆ.
ಆಹಾರ ಸಚಿವರು ಹೇಳಿದ್ದೇನು?: ಇಲ್ಲಿವರೆಗೆ ಅನ್ನಭಾಗ್ಯ ಯೋಜನೆಯಡಿ ಕೇವಲ ಐದು ಕೆ.ಜಿ ಅಕ್ಕಿಯನ್ನು ರಾಜ್ಯ ಸರ್ಕಾರ ವಿತರಿಸುತ್ತಿತ್ತು. ಬಾಕಿ ಐದು ಕೆ.ಜಿ.ಬದಲಿಗೆ ಹಣವನ್ನು ಪಡಿತರದಾರರ ಖಾತೆಗೆ ಜಮೆ ಮಾಡುತ್ತಿತ್ತು. ಈಗ ಹಣದ ಬದಲಿಗೆ ಅಕ್ಕಿಯನ್ನೇ ನೀಡುವುದಾಗಿ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದರು.
ಇನ್ನು ಇತ್ತೀಚೆಗೆ ಹೆಚ್ಚುವರಿ ಅಕ್ಕಿಗಾಗಿ ರಾಜ್ಯದವರೇ ಆದ ಕೇಂದ್ರ ಆಹಾರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಸಚಿವ ಕೆ.ಎಚ್.ಮುನಿಯಪ್ಪ ಭೇಟಿಯಾಗಿದ್ದರು. ಈ ವೇಳೆ ರಾಜ್ಯಕ್ಕೆ ಅನ್ನಭಾಗ್ಯ ಯೋಜನೆಯಡಿ ಹೆಚ್ಚು ಅಕ್ಕಿ ನೀಡಲು ಪೂರೈಕೆ ಮಾಡುವಂತೆ ಮನವಿ ಮಾಡಿದ್ದರು. ಆಗ ಕೇಂದ್ರದಿಂದ ಅಕ್ಕಿ ಪೂರೈಸುವ ಭರವಸೆಯನ್ನು ನೀಡಿದ್ದಾರೆ ಎಂದು ಹೇಳಲಾಗಿತ್ತು.
ಈ ಬಗ್ಗೆಯೂ ಮಾತನಾಡಿದ್ದ ಸಚಿವ ಕೆ.ಎಚ್.ಮುನಿಯಪ್ಪ, ʼರಾಜ್ಯಕ್ಕೆ ಅಗತ್ಯವಿರುವ ಅಕ್ಕಿ ಪೂರೈಸುವ ಭರವಸೆಯನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೀಡಿದ್ದಾರೆ. ಈ ಸಂಬಂಧ ಮುಂದಿನ ಹಂತದಲ್ಲಿ ಕೇಂದ್ರಕ್ಕೆ ಪ್ರಸ್ತಾವನೆಯನ್ನೂ ಕಳುಹಿಸಲಾಗುವುದು. ಪ್ರತಿ ತಿಂಗಳಿಗೆ 20 ಸಾವಿರ ಮೆಟ್ರಿಕ್ ಟನ್ ಅಕ್ಕಿಯ ಅಗತ್ಯವಿದೆ. ರಾಜ್ಯದ ಜನರು ಹಣದ ಬದಲು ಬೇಳೆ ಹಾಗೂ ಅಕ್ಕಿಗೆ ಮನವಿ ಮಾಡಿದ್ದಾರೆ. ಇವುಗಳನ್ನು ಪರಿಶೀಲಿಸಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುವುದಾಗಿ ಹೇಳಿದ್ದರು.
ರಾಜ್ಯದೆಲ್ಲೆಡೆ ಪಡಿತರದಲ್ಲಿ ಅಕ್ಕಿ ಜೊತೆಗೆ ತೊಗರಿ ಬೇಳೆ ವಿತರಿಸಬೇಕು ಎಂದು ಬೇಡಿಕೆ ಕೇಳಿ ಬಂದಿದ್ದು, ಈ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂದೂ ಹೇಳಿದ್ದರು.