ತುಮಕೂರು: ಅಟ್ರಾಸಿಟಿ ಪ್ರಕರಣಕ್ಕೆ ಸಂಬಂಧಿಸಿದಂತೆ 27 ಆರೋಪಿಗಳಿಗೆ ನ್ಯಾಯಾಲಯ ಶಿಕ್ಷೆ ಪ್ರಕಟಿಸಿ ಮಹಾತೀರ್ಪು ನೀಡಿದ್ದು, ಶಿಕ್ಷೆ ಪ್ರಮಾಣ ಗುರುವಾರ(ಇಂದು) ಬರುವ ಸಾಧ್ಯತೆಯಿದೆ.
ಅಟ್ರಾಸಿಟಿ ಪ್ರಕರಣಕ್ಕೆ ಸಂಬಂಧಿಸಿದಂತೆ 27 ಆರೋಪಿಗಳಿಗೆ ಜಿಲ್ಲಾ ಮೂರನೇ ಅಧಿಕ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ನಾಗಿರೆಡ್ಡಿ ಅವರು ಮಹತ್ವದ ತೀರ್ಪು ನೀಡಿದ್ದಾರೆ.
ಏನಿದು ಪ್ರಕರಣ: ಕಳೆದ 2010ರಲ್ಲಿ ನಡೆದ ಪ್ರಕರಣ ಇದಾಗಿದ್ದು, ಈ ಪ್ರಕರಣದಲ್ಲಿ ಆರೋಪಿಗಳಾಗಿರುವ 27 ಆರೋಪಿಗಳಿಗೂ ಶಿಕ್ಷೆಯಾಗಿದೆ.
ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಗೋಪಾಲಪುರದಲ್ಲಿ ಹೊನ್ನಮ್ಮ ಎಂಬ ಮಹಿಳೆ ಡಾಬಾ ನಡೆಸುತ್ತಿದ್ದರು. ಈ ಭಾಗದಲ್ಲಿ ಡಾಬಾ ಹೊನ್ನಮ್ಮ ಎಂದೇ ಗುರುತಿಸಿಕೊಂಡಿದ್ದರು. ಹೊನ್ನಮ್ಮ ತಮ್ಮ ಜಾಗದಲ್ಲಿ ಮರದ ತುಂಡುಗಳನ್ನು ಶೇಖರಣೆ ಮಾಡಿದ್ದರು. ಈ ಮರದ ತುಂಡುಗಳನ್ನು ಆರೋಪಿಗಳು ಕದ್ದಿದ್ದರು. ಈ ಸಂಬಂಧ ಚಿಕ್ಕನಾಯಕನಹಳ್ಳಿ ಮತ್ತು ಹುಳಿಯಾರು ಪೊಲೀಸ್ ಠಾಣೆಯಲ್ಲಿ ಆಗಿದ್ದಾಂಗೆ ದೂರು ದಾಖಲಿಸಿದ್ದರು. ದೂರು ದಾಖಲಾದ ಬಳಿಕ ಇದರಿಂದ ಕುಪಿತವಾದ ಆರೋಪಿಗಳು 2010 ರ ಜೂನ್ 28 ರಂದು ಸಂಜೆ 7.30ರ ವೇಳೆಯಲ್ಲಿ ಹೊನ್ನಮ್ಮನನ್ನು ಕೊಲೆ ಮಾಡಿದ್ದರು. ಹೊನ್ನಮ್ಮ ಗೋಪಾಲಪುರದ ಕಾಯಿನ್ ಬೂತ್ ನಲ್ಲಿ ಕರೆ ಮಾಡಲು ಹೋಗುತ್ತಿದ್ದ ವೇಳೆಯಲ್ಲಿ ದಾಳಿ ನಡೆಸಿ ಕೈಗಳಿಂದ ಹೊಡೆದು ಮಾದಗಿತ್ತಿ ಎಂದು ಜಾತಿನಿಂದನೆ ಮಾಡಿ ಅಶ್ಲೀಲವಾಗಿ ಬೈದು, ಕೈ ಕಾಲುಗಳಿಂದ ಒದ್ದು ಸೈಜುಗಲ್ಲು ಎತ್ತಿಹಾಕಿದ್ದರು. ನಂತರ ಬಾಕ್ಸ್ ಚರಂಡಿಯಲ್ಲಿ ಹಾಕಿ ಅಲ್ಲಿಂದ ಮತ್ತೆ ಮೇಲೆತ್ತಿ ಮತ್ತೆ ಕಲ್ಲುಗಳನ್ನು ಎತ್ತಿಹಾಕಿ ಕೊಲೆ ಮಾಡಿದ್ದರು.
ಈ ಪ್ರಕರಣದಲ್ಲಿ ಹಂದನಕೆರೆ ಪೊಲೀಸ್ ಠಾಣೆಯಲ್ಲಿ 27 ಜನರ ಮೇಲೆ ಜಾತಿನಿಂದನೆ ಮತ್ತು ಕೊಲೆ ಪ್ರಕರಣ ದಾಖಲಾಗಿತ್ತು. ನಂತರ ನ್ಯಾಯಾಲಯದಲ್ಲಿ ವಾದ-ವಿವಾದ ನಡೆಯುತ್ತಿತ್ತು. ಈ ನಡುವೆ ಪ್ರಕರಣ 6 ಆರೋಪಿಗಳು ಮೃತಪಟ್ಟಿದ್ದು, ಉಳಿದ 21 ಆರೋಪಿಗಳಿಗೆ ಶಿಕ್ಷೆ ಪ್ರಕಟವಾಗಿದೆ. ಐಪಿಸಿ ಮತ್ತು ಎಸ್ಸಿ ಎಸ್ಟಿ ಆಕ್ಟ್ ಅಡಿ ತೀರ್ಪು ಪ್ರಕಟವಾಗಿದ್ದು, ತೀರ್ಪಿನ ಶಿಕ್ಷೆ ಪ್ರಮಾಣ ಗುರುವಾರ(ಇಂದು) ಬರುವ ಸಾಧ್ಯತೆಯಿದೆ. 21 ಜನರಲ್ಲಿ ಮೂರು ಆರೋಪಿಗಳು ಪರಿಶಿಷ್ಟ ಜಾತಿಗೆ ಸೇರಿದವರಾಗಿರುವ ಹಿನ್ನೆಲೆಯಲ್ಲಿ ಆರೋಪಿಗಳ ಮೇಲೆ ಜಾತಿನಿಂದನೆ ಪ್ರಕರಣ ಹೊರತುಪಿಡಿಸಿ ಶಿಕ್ಷೆ ಪ್ರಕಟವಾಗಿದೆ. ಉಳಿದ 18 ಆರೋಪಿಗಳಿಗೆ ಅಟ್ರಾಸಿಟಿ ಮತ್ತು ಕೊಲೆ ಆರೋಪ ಸಾಬೀತಾಗಿ ತೀರ್ಪು ಪ್ರಕಟವಾಗಿದೆ. ಸರ್ಕಾರಿ ಅಭಿಯೋಜಕಿಯಾಗಿ ಬಿ.ಎಸ್. ಜ್ಯೋತಿ ವಾದ ಮಂಡಿಸಿದ್ದರು.