ಸುಂಟಿಕೊಪ್ಪದ ಆಯುಧ ಪೂಜೆಗೆ 54ರ ಸಂಭ್ರಮ

ಸುಂಟಿಕೊಪ್ಪದ ಆಯುಧ ಪೂಜೆಗೆ 54ರ ಸಂಭ್ರಮ

ಸುಂಟಿಕೊಪ್ಪ: ಕರ್ನಾಟಕದಲ್ಲಿಯೇ ಪ್ರಸಿದ್ಧಿ ಪಡೆದಿರುವ ಸುಂಟಿಕೊಪ್ಪದ ಆಯುಧಪೂಜೆಗೆ ಈ ವರ್ಷ 54ರ ಸಂಭ್ರಮ. ಇಲ್ಲಿನ ವಾಹನ ಚಾಲಕರ ಸಂಘದ ವತಿಯಿಂದ ಕಳೆದ 53 ವರ್ಷಗಳಿಂದ ಒಂದಲ್ಲ ಒಂದು ರೀತಿಯ ವೈಭವತೆಯನ್ನು ಸಾರುತ್ತಿದ್ದ ಆಯುಧ ಪೂಜಾ ಮಹೋತ್ಸವವು ಕಳೆಗಟ್ಟುತ್ತಿದೆ.

ಈ ಬಾರಿ 54ನೇ ವರ್ಷದ ಆಯುಧ ಪೂಜೆಯನ್ನು ವಿಜೃಂಭಣೆಯಿಂದ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸ್ಥಳೀಯ ನೃತ್ಯ ಕಲಾವಿದರಿಗೆ, ಸಂಗೀತ ಕಲಾವಿದರಿಗೆ ಅವಕಾಶ ನೀಡಲು ಸಂಘ ಮುಂದಾಗಿದೆ.

1970ರಿಂದ ಸರಳವಾಗಿ ಆರಂಭಗೊಂಡಿದ್ದ ಈ ಆಯುಧ ಪೂಜೆ ನಂತರದ ದಿನಗಳಲ್ಲಿ ಮಡಿಕೇರಿ ದಸರಾವನ್ನು ಹೋಲುವಂತೆ ಮಾಡಿತು. 2018 ಮತ್ತು 2019 ರಲ್ಲಿ ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಮಾತ್ರ ಸ್ಥಳೀಯ ಕಲಾವಿದರಿಗೆ ಅವಕಾಶವನ್ನು ಕಲ್ಪಿಸಿದರೆ ಕೋವಿಡ್ ವೇಳೆಯಲ್ಲಿ ಕಚೇರಿ ಪೂಜೆ ಮತ್ತು ಸಾಮೂಹಿಕ ವಾಹನ ಪೂಜೆಗಳಿಗೆ ಮಾತ್ರ ಸೀಮಿತಗೊಳಿಸಿತ್ತು.

ಇದಕ್ಕೂ ಮೊದಲು ಹಲವಾರು ಸಿನಿಮಾ ನಟ- ನಟಿಯರನ್ನು, ಹಿನ್ನೆಲೆ ಗಾಯಕರನ್ನು ಕೊಡಗಿಗೆ ಕರೆತಂದ ಕೀರ್ತಿ ಕೂಡ ಸುಂಟಿಕೊಪ್ಪ ವಾಹನ ಚಾಲಕರ ಸಂಘಕ್ಕೆ ಸಲ್ಲುತ್ತದೆ. ಪ್ರಸಿದ್ಧ ನಟರಾದ ಅಂಬರೀಶ್, ವಿನೋದ್ ರಾಜ್, ಲೀಲಾವತಿ, ದೊಡ್ಡಣ್ಣ, ಮುಖ್ಯಮಂತ್ರಿ ಚಂದ್ರು, ವಿಷ್ಣುವರ್ಧನ್, ಗಾಯಕರು, ಜೂನಿಯರ್ ಪುನಿತ್ ರಾಜ್ ಕುಮಾರ್ ಸೇರಿದಂತೆ ಹಲವಾರು ಖ್ಯಾತ ಕಲಾವಿದರು ಈ ವೇದಿಕೆಯಲ್ಲಿ ತಮ್ಮ ಕಲಾಪ್ರತಿಭೆಯನ್ನು ಅನಾವರಣಗೊಳಿಸಿ ಜನರನ್ನು ಸಂತೋಷಪಡಿಸಿದ್ದು ಇದೆ.

ವಾಹನ, ಮಕ್ಕಳ, ಕಚೇರಿಗಳ, ಅಂಗಡಿಗಳ, ವರ್ಕ್ ಶಾಪ್ಗಳ, ಮಂಟಪಗಳ ಅಲಂಕಾರ ಸ್ಪರ್ಧೆಗಳು ನಡೆಯುತ್ತಿದ್ದು, ಆಕರ್ಷಕವಾದ ನಗದು ಮತ್ತು ಬಹುಮಾನಕ್ಕಾಗಿ ಕೊಡಗಿನ ಮೂಲೆಮೂಲೆಗಳಿಂದ ಆಗಮಿಸಿದ್ದ ವಾಹನಗಳು ತಮ್ಮ ಆಕರ್ಷಕ ಮಂಟಪಗಳ ಸ್ಪರ್ಧೆಗೆ ಪೈಪೋಟಿ ನಡೆಸಿದ್ದು ಕೂಡ ಒಂದು ಇತಿಹಾಸ.

ಈ ಹಿಂದಿನ ಸಂಘದ ಹಿರಿಯರು ಹಾಕಿಕೊಟ್ಟ ಅಡಿಪಾಯವನ್ನು ಮುಂದುವರೆಸಿಕೊಂಡು ಬಂದ ಸಂಘದ ಸದಸ್ಯರು ಇನ್ನಷ್ಟು ವೈವಿಧ್ಯಮಯ ಕಾರ್ಯಕ್ರಮಗಳಿಗೆ ಒತ್ತು ನೀಡಲು ಪ್ರಯತ್ನಿಸಿದರು. ಮಡಿಕೇರಿ ದಸರಾವನ್ನು ಹೋಲುವ ರೀತಿಯಲ್ಲಿ ಆಕರ್ಷಕವಾದ ಚಲನವಲನಗಳ ಒಳಗೊಂಡ ಸ್ತಬ್ಧಚಿತ್ರಗಳು ನಂತರದ ದಿನಗಳಲ್ಲಿ ಜನಾಕರ್ಷಣೆಗೊಂಡವು.

ಸುಂಟಿಕೊಪ್ಪ ಮಾರುಕಟ್ಟೆ ರಸ್ತೆಯ ಗೆಳೆಯರ ಬಳಗ ಮತ್ತು ಕೆದಕಲ್ನ ಫ್ರೆಂಡ್ಸ್ ಕ್ಲಬ್ನ ಸದಸ್ಯರು ಸಾರ್ವಜನಿಕರಿಂದ ಮತ್ತು ದಾನಿಗಳ ಸಹಕಾರದಿಂದ ಲಕ್ಷಗಟ್ಟಲೇ ಹಣ ಖರ್ಚು ಮಾಡಿ ಸ್ಪರ್ಧೆಗೆ ಇಳಿಸುವ ಮೂಲಕ ಸುಂಟಿಕೊಪ್ಪದ ಆಯುಧ ಪೂಜಾ ಮಹೋತ್ಸವಕ್ಕೆ ಮತ್ತಷ್ಟು ಬಲ ತುಂಬಿತ್ತು. ಈ ಸ್ತಬ್ಧಚಿತ್ರಗಳನ್ನು ವೀಕ್ಷಿಸಲು ಕೊಡಗು ಸೇರಿದಂತೆ ಹೊರ ಜಿಲ್ಲೆಗಳ ಪ್ರವಾಸಿಗರ ದಂಡು ಆಗಮಿಸಿ ಈ ಮನರಂಜನೆಯನ್ನು ಆಸ್ವಾದಿಸಲು ಪ್ರಾರಂಭಿಸಿದರು. ಆದರೆ, ನಂತರ ಪ್ರಕೃತಿ ವಿಕೋಪದಿಂದ ಈ ಸ್ಪರ್ಧೆಯು ಕೂಡ ಅವಕಾಶ ಇಲ್ಲದಂತಾಯಿತು.

ಕಳೆದ ಹಲವು ವರ್ಷಗಳಿಂದ ಈ ಕಾರ್ಯಕ್ರಮಕ್ಕೆ ಆಗಮಿಸುವ ಜನಪ್ರತಿನಿಧಿಗಳು ಭಾಷಣದಲ್ಲಿ ಮಾತ್ರ ಸುಂಟಿಕೊಪ್ಪದ ಆಯುಧಾ ಪೂಜಾ ಕಾರ್ಯಕ್ರಮಕ್ಕೆ ಸರ್ಕಾರದ ಅನುದಾನ ಬಿಡುಗಡೆಗೊಳಿಸುವ ಭರವಸೆ ನೀಡಿ ಹೊರಟು ಹೋದ ನಂತರ ಆ ಭರವಸೆ ಇದುವರೆಗೂ ಭರವಸೆಯಾಗಿಯೇ ಉಳಿದಿದೆ.

ಆದರೂ ತಮ್ಮ ಹಿರಿಯರು ಹಾಕಿಕೊಟ್ಟ ಈ ಆಯುಧ ಪೂಜೆಗೆ ಧಕ್ಕೆಯಾಗಬಾರದು ಎಂಬ ದೃಷ್ಟಿಯಿಂದ ಸರ್ಕಾರದ ಅನುದಾನದ ಬಗ್ಗೆ ಯೋಚಿಸದೇ ತಮ್ಮಷ್ಟಕ್ಕೆ ತಾವೇ ದಾನಿಗಳಿಂದ ಸಂಗ್ರಹಿಸಿದ ಹಣದಲ್ಲಿ ಆಯುಧ ಪೂಜಾ ಮಹೋತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದಾರೆ.

54ನೇ ವರ್ಷದ ಆಯುಧ ಪೂಜೆಗೆ ಮಳೆಯ ಅಡ್ಡಿಯಾಗಬಹುದೆ ಎಂಬ ಆತಂಕ ಕೂಡ ಸಮಿತಿಯವರಲ್ಲಿದೆ. ಆದರೂ, ಸಂಭ್ರಮಕ್ಕೆ ಧಕ್ಕೆಯಾಗದಂತೆ ಸ್ಥಳೀಯ ಮಕ್ಕಳಿಗೆ ನೃತ್ಯ ಸ್ಪರ್ಧೆಗೆ, ಗೀತಗಾಯನಕ್ಕೆ ಅವಕಾಶ ನೀಡಲಾಗಿದೆ ಎಂದು ಸಂಘದ ಅಧ್ಯಕ್ಷ ಕಿಟ್ಟಣ್ಣ ರೈ ‘ಪ್ರಜಾವಾಣಿ’ಗೆ ಹೇಳಿದರು.

ಈ ಬಾರಿಯಾದರೂ ಸಂಭ್ರಮದ ಆಚರಣೆಗೆ ಸರ್ಕಾರದಿಂದ ಸಣ್ಣ ಪ್ರಮಾಣದ ಅನುದಾನ ನಿರೀಕ್ಷೆಯಲ್ಲಿದ್ದೆವು. ಆದು ಕೇವಲ ಭರವಸೆಯಾಗಿದೆ. ಆದರೂ ದಾನಿಗಳ, ವಾಹನ ಚಾಲಕರ ಸಹಕಾರದೊಂದಿಗೆ ಜನಾಕರ್ಷಣೆಯ ಹಬ್ಬವಾಗಿ ಆಚರಿಸಲಾಗುವುದು ಎಂದು ಸಂಘದ ಉಪಾಧ್ಯಕ್ಷ ಬಿ.ಎ.ಕೃಷ್ಣಪ್ಪ ತಿಳಿಸಿದರು.

ಸುಂಟಿಕೊಪ್ಪದ ಅಂಗಡಿ ಮಾಲೀಕರು ವಿದ್ಯುತ್ ಅಲಂಕಾರ ಮಾಡಿದರೆ ಆಯುಧ ಪೂಜೆಗೆ ಕಳೆ ಬಂದಂತಾಗುತ್ತದೆ ಎಲ್ಲರೂ ಸಹಕರಿಸಿ ಎಂದು ಸಂಘದ ಕಾರ್ಯದರ್ಶಿ ರಕ್ಷಿತ್ ಮನವಿ ಮಾಡಿಕೊಂಡರು.

ಸುಂಟಿಕೊಪ್ಪದ ನಾಟಿಕಿಡ್ಸ್ ಹಾಗೂ ಸ್ಟೆಪ್ ಕಾಂ ನೃತ್ಯ ಶಾಲೆ ಮತ್ತು ಸ್ಥಳೀಯ ಶಾಲಾ ಮಕ್ಕಳಿಂದ ಡ್ಯಾನ್ಸ್ ಮೇಳ. ಮೈಸೂರಿನ ಖ್ಯಾತ ಜಾದುಗಾರ ಜಗ್ಗು ಜಾದೂಗಾರರಿಂದ ಜಾದೂ ಪ್ರದರ್ಶನ, ಸ್ಥಳೀಯ ಕಲಾವಿದರಿಂದ ಗೀತಗಾಯನ ಮೊದಲಾದ ಕಾರ್ಯಕ್ರಮಗಳು ನಡೆಯಲಿವೆ.

ಕಳೆದ 53 ವರ್ಷಗಳಿಂದ ನಡೆಯುತ್ತಿದೆ ಆಯುಧಪೂಜೆ ಪ್ರಸಿದ್ಧ ಚಿತ್ರ ನಟ, ನಟಿಯರು ಭಾಗಿಯಾಗಿದ್ದ ಇತಿಹಾಸ ಸರ್ಕಾರ ಅನುದಾನ ನೀಡಲಿ ಎಂಬ ಬೇಡಿಕೆ

Leave a Reply

Your email address will not be published. Required fields are marked *