ಯಲ್ಲಾಪುರ ತಾಲ್ಲೂಕಿನ ವಜ್ರಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನಗದ್ದೆ ಗ್ರಾಮದ ವೀರಭದ್ರದೇವ ದೇವಸ್ಥಾನದಲ್ಲಿ ಕಾರ್ತಿಕ ಶುದ್ಧ ಬಿದಿಗೆಯಂದು ಬಿದಿಗೆ ಹಬ್ಬ ನಡೆಯಿತು.
ವೀರಭದ್ರ ದೇವರ ಈ ಧಾರ್ಮಿಕ ಉತ್ಸವಕ್ಕೆ ಸುತ್ತಮುತ್ತಲಿನ ಹತ್ತಾರು ಗ್ರಾಮದ ಜನರು ಆಗಮಿಸಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ದೇವರಲ್ಲಿ ಪ್ರಾರ್ಥಿಸುತ್ತಾರೆ.
‘ಬಿದಿಗೆಯ ದಿನದಂದು ವೀರಭದ್ರ ದೇವರ ದರ್ಶನ ಈ ಭಾಗದ ಭಕ್ತರ ಪಾಲಿಗೆ ಸಾರ್ಥಕ ಕ್ಷಣವಾಗಿದೆ. ಅದರಲ್ಲೂ ವಿಶೇಷವಾಗಿ ನೂತನ ದಂಪತಿ ಮತ್ತು ನವಜಾತ ಶಿಶುಗಳಿಗೆ ದೇವರ ವಿಶೇಷ ದರ್ಶನ ಮಾಡಿಸುವ ಪರಂಪರೆ ಇಲ್ಲಿ ಹಿಂದಿನಿಂದಲೂ ನಡೆದು ಬಂದಿದೆ. ಎರಡು ಕೊಡಿ ಬಾಳೆಯ ಎಲೆಯಲ್ಲಿ ಅಕ್ಕಿ ಹಾಕಿ ಅದರ ಮೇಲೆ ನವಜಾತ ಶಿಶುವನ್ನು ಮಲಗಿಸಿ ದೇವರ ದರ್ಶನ ಮಾಡಿಸುವುದು ಇಲ್ಲಿನ ಪದ್ಧತಿ’ ಎನ್ನುತ್ತಾರೆ ದೇವಸ್ಥಾನ ಸಮಿತಿ ಅಧ್ಯಕ್ಷ ಜಯರಾಮ ಹೆಗಡೆ.
‘ಬಿದಿಗೆ ಹಬ್ಬದಂದೇ ಇಲ್ಲಿ ದೇವರ ಹರಕೆಯನ್ನು ತೀರಿಸಲಾಗುತ್ತದೆ. ಅನೇಕ ಭಕ್ತರು ಈ ಸಂದರ್ಭದಲ್ಲಿ ತುಲಾಭಾರದ ಹರಕೆಗಾಗಿ ವಸ್ತುವಿನ ರೂಪದಲ್ಲಿ ಸೇವೆ ಸಲ್ಲಿಸುತ್ತಾರೆ. ದೃಷ್ಟಿದೋಷ ನಿವಾರಣೆಗಾಗಿ ಬೆಳ್ಳಿ ಅಥವಾ ಚಿನ್ನದ ಕಣ್ಣು ಹಾಗೂ ಶ್ರವಣ ದೋಷ ನಿವಾರಣೆಗಾಗಿ ಕಿವಿಯ ಮಾದರಿಗಳನ್ನು ದೇವರಿಗೆ ಅರ್ಪಿಸುವುದು ರೂಢಿಯಲ್ಲಿ ನಡೆದು ಬಂದಿದೆ’ ಎನ್ನುತ್ತಾರೆ ಅವರು.
ಬಿದಿಗೆ ಹಬ್ಬಕ್ಕೆ ಗೋವಾ, ಮಹಾರಾಷ್ಟ್ರ ಮುಂತಾದೆಡೆಯಿಂದಲೂ ಭಕ್ತರು ಆಗಮಿಸುತ್ತಾರೆ. ಬಿದಿಗೆಯಂದು ದೇವಸ್ಥಾನದಲ್ಲಿ ಬೆಳಿಗ್ಗೆ ಅಭಿಷೇಕ ಮೊದಲಾದ ಧಾರ್ಮಿಕ ಕಾರ್ಯಕ್ರಮ ನಡೆಯುತ್ತದೆ. ಸುತ್ತಮುತ್ತಲ ಗ್ರಾಮದ ಜನರು ತಾವು ಬೆಳೆದ ಫಲಗಳನ್ನು ಅಂದು ದೇವರಿಗೆ ಅರ್ಪಿಸುತ್ತಾರೆ. ಭಕ್ತರು ತಂದ ಈ ಅಡಿಕೆ, ಹಣ್ಣು-ಹಂಪಲು, ವಿವಿಧ ತರಕಾರಿ ಹಾಗೂ ದೇವರ ಪ್ರಸಾದ ಕಡಿಯನ್ನು ಸವಾಲು ಕರೆಯಲಾಗುತ್ತದೆ.
ಸವಾಲಿನಲ್ಲಿ ದೇವರ ಪ್ರಸಾದ ಕಡಿಯನ್ನು (ದೇವರಿಗೆ ಒಡೆದ ಕಾಯಿ ) ಪಡೆಯುವುದು ಅನೇಕರ ಹೆಬ್ಬಯಕೆ ಮತ್ತು ಪ್ರತಿಷ್ಠೆಯಾಗಿದೆ. ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.
ಹೊನ್ನಗದ್ದೆಯ ವೀರಭದ್ರದೇವ ದೇವಸ್ಥಾನಕ್ಕೆ 1300 ವರ್ಷಗಳ ಐತಿಹ್ಯವಿದೆ. ಈಶ್ವರನ ಅನನ್ಯ ಭಕ್ತರಾದ ಹಾನಗಲ್ಲ ಕದಂಬರು ಇಲ್ಲಿ ಸಾಂಬಸದಾಶಿವ ಸಹಿತ ವೀರಭದ್ರದೇವ ದೇವಸ್ಥಾನ ಸ್ಥಾಪಿಸಿದರು ಎನ್ನುತ್ತಾರೆ ಇಲ್ಲಿನ ಹಿರಿಯರು. ಅಂದಿನಿಂದಲೂ ಇಲ್ಲಿ ದೇವರ ಮೂರ್ತಿ ಪೂಜೆಗೊಳ್ಳುವುದು ಶಕ್ತಿ ದೇವತೆಯಾಗಿ ಊರನ್ನು ಪೊರೆಯುತ್ತಾಳೆ ಎಂಬ ನಂಬಿಕೆ ಜನರದ್ದು.
‘ಹೊನ್ನಿನಂತಹ ಫಸಲು ಬೆಳೆಯುವ ಗದ್ದೆಗಳು ಇಲ್ಲಿದ್ದ ಕಾರಣ ಹೊನ್ನಗದ್ದೆ ಎಂಬ ಹೆಸರು ಬಂತು. ದೇವಸ್ಥಾನದ ಹಿಂಬಾಗ ಕೋಟೆಕಾನು ಬೆಟ್ಟವಿದೆ. ಅಲ್ಲಿ ಶಿವಲಿಂಗ, ದೇವಿ, ನಂದಿ, ಗಣೇಶ ಮೂರ್ತಿಗಳ ಭಗ್ನಾವಶೇಷಗಳು ಕಂಡುಬಂದಿವೆ. ಗುಡ್ಡದ ಸುತ್ತ ದೊಡ್ಡದಾದ ಕಾಲುವೆ ತೋಡಲಾಗಿದೆ. ಗುಡ್ಡದ ಮೇಲೆ ನಿಂತು ನೋಡಿದರೆ ಸುತ್ತ ಮುತ್ತಲ ಗ್ರಾಮಗಳು ಕಾಣುತ್ತವೆ. ದೇವಾಲಯದ ಪ್ರಾಂಗಣದ ಸುತ್ತಮುತ್ತ ರಾಜಾಳ್ವಿಕೆಯ ಕುರುಹುಗಳಿವೆ. ಕುದುರೆಗಳಿಗೆ ನೀರು ಕುಡಿಯುವ ಕೆರೆ ಇದೆ. ದೇವಾಲಯದ ಸತ್ತಮುತ್ತ ಅಗೆದಾಗ ಮಣ್ಣಿನ ನಡುವೆ ಹಳೆಯ ಕಾಲದ ಸುಟ್ಟ ಇಟ್ಟಿಗೆಯ ಚೂರುಗಳು ಕೋಟೆಯ ಕುರುಹನ್ನು ತಿಳಿಸುತ್ತವೆ’ ಎನ್ನುತ್ತಾರೆ ಸ್ಥಳೀಯರಾದ ಕೆ.ಎ.ಭಟ್ಟ ಅಡ್ಕೆಮನೆ ಅವರು.