ಚಾಮರಾಜನಗರ: ಆಹಾರ ಅರಸಿ ರಸ್ತೆಗಿಳಿದಿದ್ದ ಕಾಡಾನೆ ಜೊತೆ ಫೋಟೋ ಕ್ಲಿಕ್ಕಿಸಲು ಹೋಗಿ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚಿ ಅರಣ್ಯ ಇಲಾಖೆ ದಂಡ ವಿಧಿಸಿ, ವನ್ಯಜೀವಿಗಳಿಗೆ ತೊಂದರೆ ಕೊಡದಂತೆ ಮುಚ್ಚಳಿಕೆ ಬರೆಸಿಕೊಂಡಿದೆ. ನಂಜನಗೂಡಿನ ಬಸವರಾಜು ಎಂಬವರಿಗೆ 25 ಸಾವಿರ ರೂಪಾಯಿ ದಂಡ ಹಾಕಲಾಗಿದೆ.
ಆಹಾರ ಅರಸಿ ರಸ್ತೆಗಿಳಿದಿದ್ದ ಕಾಡಾನೆ ಲಾರಿಯಿಂದ ಕ್ಯಾರೆಟ್ ಚೀಲ ಕಿತ್ತು ತಿನ್ನುತ್ತಿದ್ದಾಗ ಬಸವರಾಜು ಕಾರಿನಿಂದ ಇಳಿದು ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದರು. ಈ ವೇಳೆ, ರೊಚ್ಚಿಗೆದ್ದ ಕಾಡಾನೆ ಬಸವರಾಜು ಅವರನ್ನು ಅಟ್ಟಾಡಿಸಿ ತುಳಿಯಲು ಯತ್ನಿಸಿತ್ತು. ಅದೃಷ್ಟವಶಾತ್, ಕೊಂಚದರಲ್ಲೇ ಪಾರಾಗಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ಲಾಗಿತ್ತು.
ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಬಂಡೀಪುರ ಅರಣ್ಯ ಇಲಾಖೆ ಬಸವರಾಜು ಅವರ ವಿಳಾಸವನ್ನು ಪತ್ತೆ ಹಚ್ಚಿ ಕರೆತಂದು ಮುಚ್ಚಳಿಕೆ ಬರೆಸಿಕೊಂಡು, ದಂಡ ವಿಧಿಸಿ ಬಿಸಿ ಮುಟ್ಟಿಸಿದ್ದಾರೆ
ಕಾಡಾನೆ ದಾಳಿಗೆ ಒಳಗಾಗಿದ್ದ ಬಸವರಾಜು ಅವರಿಗೆ ಸಣ್ಣಪುಟ್ಟ ತರಚಿದ ಗಾಯಗಳಾಗಿದ್ದು ಆನೆ ತುಳಿತದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ತಮಿಳುನಾಡಿನ ಊಟಿ ಕಡೆಯಿಂದ ಗುಂಡ್ಲುಪೇಟೆಯತ್ತ ಬರುವಾಗ ಬಿಳಿ ಬಣ್ಣದ ಶರ್ಟ್ ಧರಿಸಿದ್ದ ಬಸವರಾಜು, ರಸ್ತೆಬದಿ ಕಾಡಾನೆ ನಿಂತಿದ್ದನ್ನು ಕಂಡು ಫೋಟೋ ತೆಗೆಯಲು ಕೆಳಕ್ಕಿಳಿದಿದ್ದರು. ಅಷ್ಟರಲ್ಲಿ, ಆನೆಯ ಮುಂದೆ ಕಾರೊಂದು ಮೂವ್ ಆದಾಗ ರೊಚ್ಚಿಗೆದ್ದ ಆನೆ, ಕಾರಿನ ಮೇಲೆ ದಾಳಿ ಮಾಡಲು ಮುಂದಾಗಿ ಅಲ್ಲೇ ಫೋಟೋ ತೆಗೆಯಲು ಕೆಳಗಿಳಿದಿದ್ದ ವ್ಯಕ್ತಿಯನ್ನು ಅಟ್ಟಾಡಿಸಿತ್ತು.