ಬೆಂಗಳೂರು: ಗೂಡ್ಸ್ ವಾಹನದ ಚಕ್ರಕ್ಕೆ ಸಿಲುಕಿ ಐದು ವರ್ಷದ ಬಾಲಕ ಮೃತಪಟ್ಟ ದಾರುಣ ಘಟನೆ ಅ.11 ಸಂಜೆ 6 ಗಂಟೆ ಸುಮಾರಿಗೆ ಕೆ.ಜಿ.ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಗೋವಿಂದಪುರ ರಸ್ತೆಯಲ್ಲಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಬಿಹೆಚ್ಇಎಲ್’ನ ಬಾಪೂಜಿನಗರದ ನಿವಾಸಿ ತನ್ವೀರ್ ಪಾಷಾ ಎಂಬುವವರ ಪುತ್ರ ತಾಹೀರ್ ಪಾಷಾ (5) ಮೃತ ದುರ್ದೈವಿ.
ದಸರಾ ರಜೆ ಹಿನ್ನೆಲೆಯಲ್ಲಿ ಮೃತ ಬಾಲಕ ಅಜ್ಜಿ ಮನೆಗೆ ಹೋಗಿದ್ದ. ಸ್ನೇಹಿತರೊಂದಿಗೆ ಆಟವಾಡಿದ ಬಳಿಕ ಸಂಜೆ ಮನೆಗೆ ವಾಪಸ್ಸಾಗುತ್ತಿದ್ದ. ಈ ವೇಳೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಸ್ಕೂಟರ್’ನ ಹ್ಯಾಂಡಲ್ ಬಾರ್ ಭುಜಕ್ಕೆ ತಾಕಿದ್ದು, ಆಯತಪ್ಪಿ ರಸ್ತೆಗ ಬಿದ್ದಿದ್ದಾನೆ. ಇದೇ ವೇಲೆ ಹಿಂದಿನಿಂದ ಬರುತ್ತಿದ್ದ ಗೂಡ್ಸ್ ವಾಹನದ ಚಕ್ರಗಳು ಬಾಲಕನ ತಲೆ ಮೇಲೆ ಹರಿದಿದೆ.
ಕೂಡಲೇ ಸ್ಥಳೀಯರು ಹಾಗೂ ಕುಟುಂಬಸ್ಥರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಅಷ್ಟರಲ್ಲಾಗಲೇ ಬಾಲಕ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ