ಬೆಂಗಳೂರು: ಕಾಂಗ್ರೆಸ್ ಪಕ್ಷದ ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಸಹೋದರಿಯ ಸೋಗಿನಲ್ಲಿ ಮಹಿಳೆಯೊಬ್ಬರಿಗೆ 3.25 ಕೋಟಿ ರೂ ವಂಚಿಸಿರುವ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಆರ್.ಆರ್.ನಗರ ಪೊಲೀಸರು, ಸರ್ಚ್ ವಾರೆಂಟ್ ಪಡೆದು ಬುಧವಾರ ಆರೋಪಿ ಐಶ್ವರ್ಯ ಗೌಡ ಮನೆಗೆ ತೆರಳಿ ಪರಿಶೀಲನೆ ನಡೆಸಿದರು.
3.25 ಕೋಟಿ ರೂ. ಹಾಗೂ 430 ಗ್ರಾಂ ಚಿನ್ನಾಭರಣ ವಂಚಿಸಿರುವುದಾಗಿ ಆರೋಪಿಸಿ ಶಿಲ್ಪಾ ಗೌಡ ಎಂಬವರು ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು, ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದು ಐಶ್ವರ್ಯ ಗೌಡ ಮನೆ ಶೋಧಿಸಿದರು. ತಪಾಸಣೆ ವೇಳೆ ಮಹತ್ವದ ದಾಖಲಾತಿಗಳನ್ನು ವಶಕ್ಕೆ ಪಡೆದು, ಗುರುವಾರ ವಿಚಾರಣೆಗೆ ಬರುವಂತೆ ತಿಳಿಸಿರುವುದಾಗಿ ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಆರ್.ಆರ್.ನಗರ ನಿವಾಸಿಯಾಗಿರುವ ಶಿಲ್ಪಾಗೌಡ ಅವರಿಗೆ, ವಂಚನೆ ಎಸಗಿದ ಸ್ಥಳ ತೋರಿಸಬೇಕು, ಸಾಕ್ಷಿದಾರರನ್ನು ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ಇನ್ನೆರಡು ದಿನದೊಳಗೆ ಬಂದು ಹಾಜರುಪಡಿಸಬೇಕೆಂದು ಪೊಲೀಸರು ನೋಟಿಸ್ ನೀಡಿದ್ದಾರೆ.
ವಾರಾಹಿ ಜ್ಯೂವೆಲ್ಲರಿ ಶಾಪ್ ಮಾಲಕಿ ವನಿತಾ ಎಸ್.ಐತಾಳ್ ಎಂಬವರಿಗೆ 9.82 ಕೋಟಿ ರೂ ಮೌಲ್ಯದ 14.660 ಕೆ.ಜಿ ಚಿನ್ನಾಭರಣ ವಂಚಿಸಿರುವ ಪ್ರಕರಣದಲ್ಲಿ ಚಂದ್ರಾ ಲೇಔಟ್ ಪೊಲೀಸರು, ಐಶ್ವರ್ಯ ಗೌಡ ಪತಿ ಕೆ.ಎನ್.ಹರೀಶ್ ಎಂಬವರನ್ನು ಬಂಧಿಸಿದ್ದರು. ಈ ಬಂಧನ ಪ್ರಶ್ನಿಸಿ ಐಶ್ವರ್ಯ ದಂಪತಿ ಹೈಕೋರ್ಟ್ ಮೊರೆ ಹೋಗಿದ್ದರು. ಮಂಗಳವಾರ ವಿಚಾರಣೆ ನಡೆಸಿದ್ದ ನ್ಯಾಯಾಲಯ ಬಂಧನಕ್ಕೆ ಸಕಾರಣವನ್ನು ಲಿಖಿತವಾಗಿ ನೀಡದಿದ್ದಕ್ಕೆ ಆಕ್ಷೇಪಿಸಿ ಮಧ್ಯಂತರ ಜಾಮೀನು ನೀಡಿತ್ತು. ಇದೇ ವೇಳೆ, ಕೂಡಲೇ ಆರೋಪಿತರನ್ನು ಬಿಡುಗಡೆ ಮಾಡುವಂತೆ ಪೊಲೀಸರಿಗೆ ಸೂಚನೆ ನೀಡಿತ್ತು.
ಪ್ರಕರಣದ ಹಿನ್ನೆಲೆ: ಡಿ.ಕೆ.ಸುರೇಶ್ ಸಹೋದರಿಯ ಸೋಗಿನಲ್ಲಿ ಚಿನ್ನ ವ್ಯಾಪಾರ, ಚಿಟ್ ಫಂಡ್ಸ್ ಹಾಗೂ ರಿಯಲ್ ಎಸ್ಟೇಟ್ನಲ್ಲಿ ತೊಡಗಿಸಿಕೊಂಡಿದ್ದೇನೆ, ತಮ್ಮ ವ್ಯವಹಾರದಲ್ಲಿ ಹಣ ಹೂಡಿದರೆ ಹೆಚ್ಚು ಹಣ ಸಂಪಾದಿಸಬಹುದೆಂದು. ಅಲ್ಲದೆ, ತಮ್ಮ ಬಳಿ ಚಿನ್ನ ಖರೀದಿಸಿದರೆ ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ನೀಡುವುದಾಗಿ ಐಶ್ವರ್ಯ ಗೌಡ ಆಮಿಷವೊಡ್ಡಿದ್ದಳು. ಇದನ್ನು ನಂಬಿ 2022ರಿಂದ 2024ರವರೆಗೆ ಹಂತ ಹಂತವಾಗಿ 3.25 ಕೋಟಿ ರೂ.ಯನ್ನು ಪತಿ ಹರೀಶ್ ಸೇರಿ ಇತರರ ಬ್ಯಾಂಕ್ ಖಾತೆಗಳಿಗೆ ಐಶ್ವರ್ಯ ಗೌಡ ವರ್ಗಾಯಿಸಿಕೊಂಡಿದ್ದಳು ಎಂದು ಶಿಲ್ಪಾ ಗೌಡ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದರು. 2023ರ ಜೂನ್ನಲ್ಲಿ ವ್ಯವಹಾರಕ್ಕೆ ತುರ್ತು ಹಣ ಬೇಕೆಂದು 430 ಗ್ರಾಂ ಚಿನ್ನ ಸಹ ಪಡೆದುಕೊಂಡಿದ್ದಳು. ಕೆಲ ದಿನ ಬಳಿಕ ಅನುಮಾನ ಬಂದು ತಾನು ನೀಡಿದ ಹಣ ಹಾಗೂ ಆಭರಣ ವಾಪಸ್ ನೀಡುವಂತೆ ಕೇಳಿದಾಗ ಅವಾಚ್ಯ ಪದಗಳಿಂದ ನಿಂದಿಸಿದ್ದಳು. ತನಗೆ ರಾಜಕಾರಣಿಗಳ ಬೆಂಬಲವಿದ್ದು ನಿನಗೆ ಒಂದು ಗತಿ ಕಾಣಿಸುತ್ತೇನೆ. ನಿನ್ನ ಚಾರಿತ್ರ್ಯದ ಬಗ್ಗೆ ಇಲ್ಲಸಲ್ಲದ ಸುದ್ದಿ ಹಬ್ಬಿಸಿ ಮರ್ಯಾದೆ ಕಳೆಯುವಂತೆ ಮಾಡುತ್ತೇನೆ ಎಂದು ಐಶ್ವರ್ಯ ಬೆದರಿಕೆ ಹಾಕಿದ್ದಳು ಎಂದು ಶಿಲ್ಪಾ ದೂರಿನಲ್ಲಿ ಆರೋಪಿಸಿದ್ದರು.