ತುಮಕೂರು / ಬೆಂಗಳೂರು : ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿ ಹಲವು ಸಂಪುಟ ಸಚಿವರು ದೆಹಲಿಯಲ್ಲಿ 3 ದಿನ ಬೀಡು ಬಿಟ್ಟು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿ ಕೈ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ರಾಜ್ಯದ ವಿದ್ಯಮಾನಗಳ ಬಗ್ಗೆ ಚರ್ಚಿಸಿದರೆ, ದೆಹಲಿಗೆ ತೆರಳದೆ ರಾಜ್ಯದಲ್ಲೆ ಉಳಿದಿದ್ದ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಭಾನುವಾರ ಬೆಂಗಳೂರಿನಲ್ಲಿ ಎಐಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿ ಮಹತ್ವದ ಮಾತುಕತೆನಡೆಸಿದರು.

ಹನಿ ಟ್ರ್ಯಾಪ್ ಒಳಮೀಸಲಾತಿ, ಬಿಜೆಪಿ ಕಾರ್ಯಕರ್ತನ ಆತ್ಮಹತ್ಯೆ, ಬಿಜೆಪಿ ಜನಾಕ್ರೋಶ ಯಾತ್ರೆ ಮತ್ತಿತರೆ ವಿಚಾರಗಳ ಕುರಿತು ಖರ್ಗೆ ಅವರಿಗೆ ಪರಮೇಶ್ವರ್ ಮಾಹಿತಿ ನೀಡಿದ್ದಾರೆ.
ನಾಲ್ಕು ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಸಚಿವರು ದೆಹಲಿಯಲ್ಲಿ ವರಿಷ್ಠರೊಂದಿಗೆ ಪ್ರತ್ಯೇಕವಾಗಿ ಚರ್ಚೆ ನಡೆಸಿದ್ದರು. ಆದರೆ ಸಚಿವ ಡಾ.ಜಿ. ಪರಮೇಶ್ವರ್ ಬೆಂಗಳೂರಿನಲ್ಲೇ ಉಳಿದಿದ್ದರು. ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ ಅವರನ್ನು ಡಾ.ಜಿ. ಪರಮೇಶ್ವರ್ ಅವರು ಖರ್ಗೆ ಅವರ ನಿವಾಸದಲ್ಲಿ ಭೇಟಿ ಮಾಡಿ ಸುಮಾರು ಹೊತ್ತು ಚರ್ಚೆ ನಡೆಸಿರುವುದು ಕುತೂಹಲ ಮೂಡಿಸಿದೆ.
ರಾಜಕೀಯ ಮಾತನಾಡಿಲ್ಲ: ಖರ್ಗೆ ಅವರ ಭೇಟಿ ನಂತರ ಖರ್ಗೆ ಅವರ ನಿವಾಸದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಡಾ.ಜಿ. ಪರಮೇಶ್ವರ್, ನಾವು ಖರ್ಗೆ ಅವರು, ಒಂದೇ ಕುಟುಂಬವಿದ್ದAತೆ. ಅವರು ಬೆಂಗಳೂರಿಗೆ ಬಂದಾಗಲೆಲ್ಲಾ ನಾನು ಭೇಟಿ ಮಾಡುತ್ತೇನೆ. ಅವರು ನನ್ನ ಹಿರಿಯಣ್ಣ ಇದ್ದಂತೆ. ಅವರ ಆರೋಗ್ಯ ವಿಚಾರಿಸಿದ್ದೇನೆ ಅಷ್ಟೆ. ಈ ಭೇಟಿಯಲ್ಲಿ ನಾನು ಯಾವುದೇ ರಾಜಕೀಯ ಮಾತನಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ನಾನು ಖರ್ಗೆ ಮನೆ ಒಳಗೆ ಹೋದ ಮೇಲೆ ಮಕ್ಕಳು, ಮರಿ ಎಲ್ಲರನ್ನು ಮಾತನಾಡಿಸುತ್ತಾ ಕೂರುತ್ತೇನೆ. ಪ್ರಿಯಾಂಕ ಖರ್ಗೆ ಅವರನ್ನು ಸಣ್ಣವರಿದ್ದಾಗಿನಿಂದಲೇ ನೋಡುತ್ತಾ ಬಂದಿದ್ದೇನೆ. ಖರ್ಗೆ ಅವರ ಅಳಿಯ ರಾಧಾಕೃಷ್ಣ ಅವರದು ನನ್ನದು 45 ವರ್ಷಗಳ ಗೆಳೆತನ. ಹಾಗಾಗಿ ನಾನು ಹೆಚ್ಚು ಹೊತ್ತು ಅವರ ಮನೆಯಲ್ಲಿರುತ್ತೇನೆ. ಏನೆ ಇರಲಿ ನಾನು ರಾಜಕೀಯ ವಿಚಾರವನ್ನಂತೂ ಚರ್ಚೆ ಮಾಡಿಲ್ಲ ಎಂದು ಪುನರುಚ್ಛರಿಸಿದರು.
ನಾನು ಬರುತ್ತೇನೆ.: ರಾಜಕೀಯ ಬೆಳವಣಿಗೆಗಳ ಬಗ್ಗೆ ಎಐಸಿಸಿ ಅಧ್ಯಕ್ಷರಿಗೆ ಮಾಹಿತಿ ನೀಡಿದ್ದೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅವರು ಮಾಹಿತಿ ಕೇಳಿಲ್ಲ, ನಾನು ಕೊಟ್ಟಿಲ್ಲ. ಎಐಸಿಸಿ ಅಧ್ಯಕ್ಷ ಆದವರಿಗೆ ಅವರದೇ ಆದ ಮಾಹಿತಿ ಪಡೆಯಲು ಚಾನಲ್ಗಳು ಇರುತ್ತವೆ. ನಾನು ಮಾಹಿತಿ ಕೊಡುವ ಅವಶ್ಯಕತೆ ಇಲ್ಲ ಎಂದರು. ನಿಮ್ಮ ಬೆಂಬಲಿಗರು ನಾಯಕತ್ವ ಬದಲಾವಣೆ ಆದಾಗ ನಮ್ಮ ಸಾಹೇಬರ ಹೆಸರೇ ಇರುತ್ತದೆ ಎಂದೆಲ್ಲಾ ಹೇಳುತ್ತಿದ್ದಾರಲ್ಲಾ ಎಂದಾಗ, ಅವರು ಯಾವುದೇ ಪ್ರತಿಕ್ರಿಯೆ ಕೊಡದೆ, ನಾನು ಬರುತ್ತೇನೆ ಎಂದು ಮುಗಳ್ನಕ್ಕು ಹೊರಟರು.
ಏ.14ರಂದು ಅಂಬೇಡ್ಕರ್ ಪುತ್ಥಳಿ ಅನಾವರಣ
ಖರ್ಗೆ ಭೇಟಿ ಬಳಿಕ ತುಮಕೂರಿಗೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಡಾ.ಜಿ.ಪರಮೇಶ್ವರ್ ಅವರು ಮಹಾನಗರಪಾಲಿಕೆ ಆವರಣದ ಕೃಷ್ಣರಾಜೇಂದ್ರ ಪುರಭವನ ಮುಂಭಾಗ ಏ.14ರಂದು ಅನಾವರಣಗೊಳ್ಳಲಿರುವ 12 ಅಡಿ ಎತ್ತರದ ಕಂಚಿನ ಪ್ರತಿಮೆ ಉದ್ಘಾಟನೆಯ ಸಿದ್ಧತೆಯನ್ನು ಪರಿಶೀಲಿಸಿದರು. ಸದರಿ ಪುತ್ಥಳಿ ಕೆಳಗಡೆ ಸಂವಿಧಾನದ ಪೂರ್ವ ಪೀಠಿಕೆಯನ್ನು ಅಳವಡಿಸುವ ಕಾರ್ಯ ನಡೆಯುತ್ತಿದ್ದು, ಪುತ್ಥಳಿ ಸ್ಥಾಪನೆಗೆ ಪರಮೇಶ್ವರ ಅವರ ಒಡೆತನ ಸಿದ್ಧಾರ್ಥ ಶಿಕ್ಷಣ ಸಂಸ್ಥೆ 25 ಲಕ್ಷ ದೇಣಿಗೆ ನೀಡಿದೆ. ಈ ವೇಳೆ ಡಿಸಿ ಶುಭಕಲ್ಯಾಣ್, ಎಸ್ಪಿ ಕೆ.ವಿ.ಅಶೋಕ್, ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜಾ ಉಪಸ್ಥಿತರಿದ್ದರು.