ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಬೆಂಗಳೂರು ಉಪನಗರ ರೈಲು ಯೋಜನೆ (ಬಿಎಸ್‌ಆರ್‌ಪಿ) ಕಾರ್ಯಗತಗೊಳಿಸಲಾಗುತ್ತಿದೆ. 148 ಕಿ. ಮೀ. ಉದ್ದದ ಈ ಯೋಜನೆಯು 4 ಕಾರಿಡಾರ್‌ಗಳನ್ನು ಒಳಗೊಂಡಿದೆ. ಕರ್ನಾಟಕ ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ ನಿಯಮಿತ (ಕೆ-ರೈಡ್) ಮೂಲಕ ರಾಜ್ಯ ಸರ್ಕಾರ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ.
ಈ ಉಪ ನಗರ ರೈಲು ಯೋಜನೆಯನ್ನು ವಿಸ್ತರಣೆ ಮಾಡಲಾಗುತ್ತದೆಯೇ? ಎಂಬುದು ಪ್ರಶ್ನೆಯಾಗಿದೆ. ಈ ಕುರಿತು ಸರ್ಕಾರ ಉತ್ತರವನ್ನು ನೀಡಿದೆ. ಈ ಯೋಜನೆ ವಿಸ್ತರಣೆ ಮಾಡುವ ಕುರಿತು ಕಾರ್ಯಾಸಾಧ್ಯತಾ ಅಧ್ಯಯನ ಕೈಗೊಳ್ಳಲು ನೈಋತ್ಯ ರೈಲ್ವೆಗೆ ಮನವಿಯನ್ನು ಸಹ ಸಲ್ಲಿಕೆ ಮಾಡಲಾಗಿದೆ
ಉಪ ನಗರ ರೈಲು ಯೋಜನೆಯನ್ನು ಬೆಂಗಳೂರು ಸುತ್ತಮುತ್ತಲಿನ ವರ್ತುಲ ರೈಲ್ವೆ ಹಳಿಗೆ ಸಂಪರ್ಕಿಸುವ ಯೋಜನೆ ಹಾಕಿಕೊಳ್ಳಲಾಗಿದೆಯೇ?. ಬೆಂಗಳೂರು ಹತ್ತಿರವಿರುವ ತುಮಕೂರು, ಮಾಗಡಿ, ಗೌರಿಬಿದನೂರು, ಕೋಲಾರ ಮತ್ತಿತರ ನಗರಗಳಿಗೆ ಈ ಉಪ ನಗರ ರೈಲ್ವೆ ಯೋಜನೆಯನ್ನು ವಿಸ್ತರಣೆ ಮಾಡಲಾಗುವುದೇ? ಎಂದು ಸರ್ಕಾರವನ್ನು ಪ್ರಶ್ನಿಸಲಾಗಿತ್ತು
ಸಬ್ ಅರ್ಬನ್ ರೈಲು ಯೋಜನೆ ವಿಸ್ತರಣೆ?; ಸರ್ಕಾರ ಈ ಕುರಿತು ಉತ್ತರ ನೀಡಿದ್ದು, ಹೌದು, ಹಂತ-2ರಲ್ಲಿ ನೈಋತ್ಯ ರೈಲ್ವೆಯು ಪ್ರಸ್ತಾಪಿಸಿರುವ Circular ರೈಲ್ವೆಗೆ ಬಿಎಸ್ಆರ್‌ಪಿ ಅನ್ನು ಸಂಪರ್ಕಿಸುವ ಪ್ರಸ್ತಾವನೆಯು ಇನ್ನೂ ಪ್ರಾಥಮಿಕ ಹಂತದಲ್ಲಿದೆ. ಇದಕ್ಕಾಗಿ ಕೆ-ರೈಡ್‌ನಿಂದ ಕಾರ್ಯಸಾಧ್ಯತೆಯ ಅಧ್ಯಯನವನ್ನು ಕೈಗೊಳ್ಳಲು ನೈಋತ್ಯ ರೈಲ್ವೆ ಇವರನ್ನು ದಿನಾಂಕ 23/09/2024ರಂದು ಅನುಮೋದನೆ ಕೋರಿದೆ ಎಂದು ಹೇಳಿದೆ.
ಅಲ್ಲದೇ ಸರ್ಕಾರ ಪ್ರಸ್ತಾಪಿತ 148.17 ಕಿ. ಮೀ. ನೆಟ್‌ವರ್ಕ್ ಅನ್ನು ಬೆಂಗಳೂರು ನಗರದ ಪ್ರಮುಖ ನಗರ ಪ್ರದೇಶಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಬೆಂಗಳೂರು ನಗರದ ಉಪನಗರ ಮತ್ತು satellite town ಪ್ರಯಾಣಿಸುವ ಪ್ರಯಾಣಿಕರಿಗೆ ಉತ್ತಮ ಸಂಪರ್ಕವನ್ನು ಒದಗಿಸುವ ಸಲುವಾಗಿ ಚಿಕ್ಕಬಳ್ಳಾಪುರ, ಮೈಸೂರು, ಕೋಲಾರ, ಗೌರಿಬಿದನೂರು, ಹೊಸೂರು, ತುಮಕೂರು, ಬಂಗಾರಪೇಟೆ ಮತ್ತು ಮಾಗಡಿಗಳಂತಹ ಪ್ರದೇಶಗಳನ್ನು ಸಂಪರ್ಕಿಸುವುದು ಬಿಎಸ್‌ಆರ್‌ಪಿಯ ಮುಖ್ಯ ಗುರಿಯಾಗಿದೆ ಎಂದು ತಿಳಿಸಿದೆ.
ಹಂತ-1ರ ವಿಸ್ತರಣೆಯಾದ ಚಿಕ್ಕಬಳ್ಳಾಪುರ, ಕುಣಿಗಲ್, ದಾಬಸ್‌ಪೇಟೆ, ಹೆಜ್ಜಾಲ, ಆನೇಕಲ್ ರಸ್ತೆ, ವಡೇರಹಳ್ಳಿಗೆ ಸಂಪರ್ಕ ಕಲ್ಪಿಸುವ ಹಂತ-2ರ (146 ಕಿ. ಮೀ.) ಕಾರ್ಯಸಾಧ್ಯತಾ ಅಧ್ಯಯನವನ್ನು ಕೈಗೊಳ್ಳಲು ಕೆ-ರೈಡ್‌ನಿಂದ ದಿನಾಂಕ 23/09/24ರಂದು ಪರಿಷ್ಕೃತ ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು, ರೈಲ್ವೆಯಿಂದ ಅನುಮೋದನೆ ನಿರೀಕ್ಷಿಸಲಾಗಿದೆ ಎಂದು ಸರ್ಕಾರ ವಿವರಣೆ ನೀಡಿದೆ.
ಬಿಎಸ್‌ಆರ್‌ಪಿ ಹಂತ-2ರಲ್ಲಿ ಕಾರಿಡಾರ್ -1 ದೇವನಹಳ್ಳಿ-ಚಿಕ್ಕಬಳ್ಳಾಪುರ ಸುಮಾರು 18 ಕಿ. ಮೀ. ಕಾರಿಡಾರ್ -2 ಚಿಕ್ಕಬಣಾವರ-ಕುಣಿಗಲ್ 50 ಕಿ. ಮೀ., ಚಿಕ್ಕಬಣಾವರ-ದಾಬಸ್‌ಪೇಟೆ 36 ಕಿ. ಮೀ. ಕಾರಿಡಾರ್ -3 ಕೆಂಗೇರಿ-ಹೆಜ್ಜಾಲ 11 ಕಿ. ಮೀ. ಮತ್ತು ಕಾರಿಡಾರ್-4ರಲ್ಲಿ ಹೀಗಲಿಗೆ-ಆನೇಕಲ್ ರಸ್ತೆ 11 ಕಿ. ಮೀ. ಮತ್ತು ರಾಜನಕುಂಟೆ-ವಡೇರಹಳ್ಳಿ 20 ಕಿ. ಮೀ. ಮಾರ್ಗ ಬರಲಿದೆ ಎಂದು ಅಂದಾಜಿಸಲಾಗಿದೆ.
ಸದ್ಯ ಬಿಎಸ್‌ಆರ್‌ಪಿ ಯೋಜನೆಯಲ್ಲಿ ಮಲ್ಲಿಗೆ (24.8 ಕಿ. ಮೀ) ಕಾರಿಡಾರ್. ಕನಕ (46.2 ಕಿ. ಮೀ) ಕಾರಿಡಾರ್, ಸಂಪಿಗೆ (41 ಕಿ. ಮೀ.) ಕಾರಿಡಾರ್, ಪಾರಿಜಾತ (35.52 ಕಿ. ಮೀ.) ಮಾರ್ಗವಿದೆ. ಮಲ್ಲಿಗೆ ಕಾರಿಡಾರ್‌ನ ಕೆಲಸ ಭರದಿಂದ ಸಾಗುತ್ತಿದೆ. ಮೊದಲು ಈ ಮಾರ್ಗವೇ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಅಂದಾಜಿಸಲಾಗಿದೆ.
ಸದ್ಯದ ಮಾಹಿತಿ ಪ್ರಕಾರ 2027ರಲ್ಲಿ ಬಿಎಸ್‌ಆರ್‌ಪಿಯ ಎರಡು ಮಾರ್ಗದಲ್ಲಿ ಮೊದಲ ಹಂತದ ರೈಲುಗಳ ಸಂಚಾರ ಆರಂಭವಾಗಲಿದೆ. ಮೂರು ಬೋಗಿಯ ರೈಲು ಪ್ರತಿ 10 ನಿಮಿಷಕ್ಕೊಮ್ಮೆ ಸಂಚಾರವನ್ನು ನಡೆಸಲಿದೆ. ಈಗಾಗಲೇ ಸಬ್ ಅರ್ಬನ್ ರೈಲು ಯೋಜನೆಗೆ 306 ರೈಲು ಬೋಗಿ ಖರೀದಿ ಮಾಡಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.




