ಬೆಂಗಳೂರು: ರಾಜ್ಯ ಸರ್ಕಾರವು ಬೆಂಗಳೂರಿನ ಮುಖ್ಯ ಆಯುಕ್ತರನ್ನು ಬದಲಾವಣೆ ಮಾಡಿ ಆದೇಶ ಮಾಡಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರನ್ನು ಬದಲಾವಣೆ ಮಾಡಲಾಗಿದ್ದು. ಹೊಸ ಬಿಬಿಎಂಪಿ ಮುಖ್ಯ ಆಯುಕ್ತರನ್ನಾಗಿ ಮಹೇಶ್ವರ ರಾವ್ ಅವರನ್ನು ನೇಮಕ ಮಾಡಲಾಗಿದೆ. ಮಹೇಶ್ವರ್ ರಾವ್ ಅವರು ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಅವರಿಗೆ ಹೆಚ್ಚುವರಿ ಜವಾಬ್ದಾರಿಯನ್ನು ಕೊಡಲಾಗಿದೆ. ಇನ್ನು ಬಿಬಿಎಂಪಿ ಮುಖ್ಯ ಆಯುಕ್ತರೊಂದಿಗೆ ಬಿಬಿಎಂಪಿ ಆಡಳಿತಾಧಿಕಾರಿಯೂ ಬದಲಾವಣೆಯಾದಂತಾಗಿದೆ.

ಬೆಂಗಳೂರಿನ ಪಾಲಿಕೆ ಮುಖ್ಯ ಆಯುಕ್ತರ ಬದಲಾವಣೆ ಮಾಡಲಾಗಿದೆ. ಇದರೊಂದಿಗೆ ಆಡಳಿತಾಧಿಕಾರಿಯ ಬದಲಾವಣೆಯೂ ಆಗಿದೆ. ಮುಖ್ಯ ಆಯುಕ್ತರಾಗಿರುವ ತುಷಾರ್ ಗಿರಿನಾಥ್ ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ. ಅಲ್ಲದೇ ಬಿಬಿಎಂಪಿ ಆಡಳಿತಾಧಿಕಾರಿ ಹಾಗೂ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ತುಷಾರ್ ಗಿರಿನಾಥ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಬಿಬಿಎಂಪಿಗೆ ಕಳೆದ 5 ವರ್ಷಗಳಿಂದ ಚುನಾವಣೆ ನಡೆದಿಲ್ಲ. ಕಳೆದ 5 ವರ್ಷಗಳಿಂದಲೂ ಬಿಬಿಎಂಪಿ ಮುಖ್ಯ ಆಯುಕ್ತರು ಹಾಗೂ ಆಡಳಿತಾಧಿಕಾರಿಯ ಮೂಲಕ ಆಡಳಿತ ನಡೆಯುತ್ತಿದೆ. ಬೆಂಗಳೂರಿಗೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ಮುಖ್ಯ ಆಯುಕ್ತರು ಹಾಗೂ ಆಡಳಿತಾಧಿಕಾರಿಗಳೇ ತೆಗೆದುಕೊಳ್ಳುತ್ತಿದ್ದಾರೆ. ಇನ್ನು ಬಿಬಿಎಂಪಿಯ ಮುಖ್ಯ ಆಯುಕ್ತರಾಗಿ ತುಷಾರ್ ಗಿರಿನಾಥ್ ಅವರು ಕಳೆದ ಎರಡೂವರೆ ವರ್ಷಗಳಿಂದ ಸೇವೆ ಸಲ್ಲಿಸಿದ್ದಾರೆ. ತುಷಾರ್ ಗಿರಿನಾಥ್ ಅವರಿಗೆ ಬೆಂಗಳೂರಿನ ಸಮಸ್ಯೆಗಳ ಬಗ್ಗೆ ಸ್ಪಷ್ಟತೆ ಇದೆ. ಹೀಗಾಗಿ ಅವರು ಆಡಳಿತಾಧಿಕಾರಿ ಆಗುತ್ತಿರುವುದರಿಂದ ಬೆಂಗಳೂರಿನ ವಿವಿಧ ಸಮಸ್ಯೆಗಳಿಗೆ ಮುಕ್ತಿ ಸಿಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. ಇನ್ನು ತುಷಾರ್ ಅವರು, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್ಎಸ್ಬಿ) ಹಾಗೂ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ)ನ ಮುಖ್ಯಸ್ಥರಾಗಿದ್ದರು.
ಯಾವ ಕಾರಣಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತರ ಬದಲಾವಣೆ ? ಬಿಬಿಎಂಪಿಯ ಆಡಳಿತಾಧಿಕಾರಿ ಉಮಾಶಂಕರ್ ಎಸ್.ಆರ್. ಅವರ ನಿವೃತ್ತಿ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ಹಾಗೂ ಆಡಳಿತಾಧಿಕಾರಿಯ ಬದಲಾವಣೆ ಏಕಕಾಲಕ್ಕೆ ಆಗಿದೆ. ಏಪ್ರಿಲ್ 30 (2025)ಕ್ಕೆ ಬಿಬಿಎಂಪಿ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಉಮಾಶಂಕರ್ ಎಸ್.ಆರ್. ಅವರ ನಿವೃತ್ತಿ ಇದೆ. ಹೀಗಾಗಿ, ಸರ್ಕಾರ ತಕ್ಷಣದಿಂದ ಜಾರಿಗೆ ಬರುವಂತೆ ಆದೇಶವನ್ನು ಮಾಡಿದೆ.