ಬೆಂಗಳೂರು: ಒಂದೆಡೆ ಕನ್ನಡಿಗರೆಲ್ಲ ಪರಭಾಷಿಕರಿಗೆ ಇಲ್ಲಿಗೆ ವಲಸೆ ಬರಬೇಡಿ, ಬೆಂಗಳೂರು ತುಂಬಿಕೊಂಡಿರುವುದು ಎಂದು ಬೀದಿಗಿಳಿದು ಹೋರಾಟ ಮಾಡುತ್ತಿದ್ದರೆ, ಸದ್ಯ ಕನ್ನಡ ನೆಲ್ಲದಲ್ಲೇ ಕನ್ನಡಿಗರನ್ನೇ ಇಲ್ಲಿಗೆ ಬರಬೇಡಿ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೇರೆ ಊರಿನಿಂದ ಬಂದು ಬದುಕು ಕಟ್ಟಿಕೊಂಡಿರೋ ಪರಭಾಷಿಕರ ದರ್ಪಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಕರ್ನಾಟಕದಲ್ಲಿ ಕನ್ನಡಿಗರಿಗೇ ನಿಷೇಧ ಹೇರುವ ದುರ್ಗತಿ ಬಂದಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಇಷ್ಟಕ್ಕೂ ಆಗಿದ್ದೇನು ಗೊತ್ತಾ?
ಬೆಂಗಳೂರಲ್ಲಿ ಇಲ್ಲಿವರೆಗೆ ಬ್ಯಾಚುಲರ್ಗಳಿಗೆ ಮನೆ ಕೊಡಲ್ಲ, ಮಾಂಸಾಹಾರ ತಿನ್ನೋರಿಗೆ ಮನೆ ಕೊಡಲ್ಲ ಎಂದು ಹೇಳುವುದನ್ನ ಸಾಮಾನ್ಯವಾಗಿ ಕೇಳಿರುತ್ತೀವಿ. ಇದೀಗ ಕನ್ನಡಿಗರಿಗೆ ಮನೆ ಕೊಡಲ್ಲ ಎಂದು ಹೇಳುವ ಮಟ್ಟಿಗೆ ಅಗೌರವದ ವಾತಾವರಣ ಕನ್ನಡ ನೆಲದಲ್ಲೇ ಕಂಡುಬಂದಿದೆ. ಹೊರ ರಾಜ್ಯದಿಂದ ಬಂದು ವ್ಯವಹಾರ ಮಾಡಿಕೊಂಡಿರುವ ಬಿಲ್ಡರ್ವೊಬ್ಬ ನೇರವಾಗಿ ಕನ್ನಡಿಗರಿಗೆ ಫ್ಲ್ಯಾಟ್ ಕೊಡಲ್ಲ, ಹಿಂದಿ ಅಥವಾ ತೆಲುಗು ಅವರಾದ್ರೆ ಕೊಡ್ತೀವಿ ಎಂದು ಮುಖಕ್ಕೆ ಹೊಡೆದಿರುವಂತೆ ಹೇಳಿರುವುದು ಬೆಳಕಿಗೆ ಬಂದಿದೆ.
ಪರಭಾಷಿಕರಿಗೆ ರೆಡ್ ಕಾರ್ಪೆಟ್ ಹಾಕಿ ಬರಮಾಡಿಕೊಂಡಿರೋ ಬೆಂಗಳೂರಿನಲ್ಲೇ ಇಂತಹ ಘಟನೆ ನಡೆದಿರುವುದು ವಿಪರ್ಯಾಸ ಎನ್ನುತ್ತಿದ್ದಾರೆ ಕನ್ನಡಿಗರು. ಇಷ್ಟಕ್ಕೂ ಈ ಘಟನೆ ನಡೆದಿರುವುದು ಬೆಂಗಳೂರು ಸಮೀಪದ ಹೊಸಕೋಟೆಯಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ಎನ್ನಲಾಗಿದೆ. ಈ ಅಪಾರ್ಟ್ಮೆಂಟ್ನ ಬಿಲ್ಡರ್ ಆಂಧ್ರ ಮೂಲದವನು ಎನ್ನಲಾಗಿದ್ದು, ಕನ್ನಡ ಮಾತನಾಡುವವರಿಗೆ ಇಲ್ಲಿ ಫ್ಲ್ಯಾಟ್ ಕೊಡಲ್ಲ ಎಂದು ಕನ್ನಡಿಗನಿಗೆ ಹೇಳಿದ್ದಾನೆ. ಇಲ್ಲಿನ ಚಿಂತಾಮಣಿ ರಸ್ತೆಯಲ್ಲಿರುವ ಅಪಾರ್ಟ್ಮೆಂಟ್ನಲ್ಲಿರುವ ಫ್ಲ್ಯಾಟ್ ಅನ್ನು ಮುಂಗಡ ಹಣ ಕೊಟ್ಟು ಬುಕಿಂಗ್ ಮಾಡಲಾಗಿತ್ತು. ತಿಂಗಳ ನಂತರ ಇದರ ಅಗ್ರಿಮೆಂಟ್ ಮಾಡಲು ಬಿಲ್ಡರ್ ಒಪ್ಪುತ್ತಿಲ್ಲ, ಇದಕ್ಕೆ ಕಾರಣ ನಾನು ಕನ್ನಡವನು ಎಂಬುದು ಅಂತಾ ನೊಂದ ವ್ಯಕ್ತಿ ಸೋಶಿಯಲ್ ಮೀಡಿಯಾದಲ್ಲಿ ಘಟನೆ ಬಿಚ್ಚಿಟ್ಟಿದ್ದಾರೆ.
ಸುಬ್ಬಾರೆಡ್ಡಿ ಎಂಬ ಬಿಲ್ಡರ್ ಈ ರೀತಿ ಕನ್ನಡಿಗನ ಮೇಲೆ ದರ್ಪದಿಂದ ಮಾತನಾಡಿದ್ದು, ಇಲ್ಲಿರುವ ಫ್ಲ್ಯಾಟ್ಗಳನ್ನು ಕೇವಲ ತೆಲುಗು ಹಾಗೂ ಹಿಂದಿ ಭಾಷೆಯವರಿಗೆ ಮಾತ್ರ ಸೇಲ್ ಮಾಡ್ತೀನಿ. ಕನ್ನಡಿಗರಿಗೆ ಫ್ಲ್ಯಾಟ್ ಕೊಡಲ್ಲ ಎಂದೇ ಹೇಳಿದ್ದಾನಂತೆ. ಭಾಸ್ಕರ್ ಎಂಬ ಕನ್ನಡಿಗನಿಗೆ ಬಿಲ್ಡರ್ ಈ ರೀತಿ ಸೊಕ್ಕಾಗಿ ಮಾತನಾಡಿದ್ದಾನೆ ಎನ್ನಲಾಗಿದೆ.
ಅಲ್ಲದೆ ಭಾಸ್ಕರ್ ಅವರನ್ನು ಬಿಲ್ಡರ್ ಮೊದಲಿಗೆ ಆಂಧ್ರದವನು ಎಂದು ಭಾವಿಸಿ ಫ್ಲ್ಯಾಟ್ ಖರೀದಿಸಲು ಅವಕಾಶ ನೀಡಿದ್ದರು. ಬಳಿಕ ಕನ್ನಡಿಗ ಎಂದು ಗೊತ್ತಾದ ಬಳಿಕ ಫ್ಲ್ಯಾಟ್ ಕೊಡಲ್ಲ ಎಂದು ಉಲ್ಟಾ ಹೊಡೆದಿದ್ದಾನೆ ಎಂದು ಹೇಳಲಾಗುತ್ತಿದೆ. ಇದರಿಂದ ನೊಂದ ಭಾಸ್ಕರ್ ಸೋಶಿಯಲ್ ಮೀಡಿಯಾದಲ್ಲಿ ಕನ್ನಡ ಸಂಘಟನೆಗಳಿಗೆ ಮನವಿ ಮಾಡಿ ಈ ವಿಚಾರ ತಿಳಿಸಿದ್ದಾರೆ. ಕರ್ನಾಟಕದಲ್ಲಿ ಕನ್ನಡಿಗರಿಗೇ ಮನೆ ಕೊಡಲ್ಲ ಎಂದು ನಿಷೇಧ ಹೇರುವ ಸ್ಥಿತಿ ಬಂದಿದೆ ಎಂದು ಹಲವರು ಈ ಘಟನೆ ಬಗ್ಗೆ ಗರಂ ಆಗಿದ್ದಾರೆ. ಈ ವಲಸಿಗ ಬಿಲ್ಡರ್ನಿಂದ ನನಗೆ ಆದ ಅನ್ಯಾಯದ ವಿರುದ್ಧ ನಾನು ಹೋರಾಡುತ್ತೇನೆ. ಕನ್ನಡಿಗರೆಲ್ಲ ನನ್ನೊಂದಿಗೆ ಜೊತೆಯಾಗಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಸದ್ಯ ಬೆಂಗಳೂರಿನಲ್ಲಿ ಆಂಧ್ರ ಮೂಲದ ಬಿಲ್ಡರ್ಗಳ ಹಾವಳಿ ಹೆಚ್ಚಾಗಿದ್ದು, ಇಲ್ಲಿ ತಮ್ಮ ಅಧಿಪತ್ಯ ಸಾಧಿಸಲು ಹೊರಟಿದ್ದಾರೆ. ವಲಸಿಗರು ತುಂಬಿಕೊಂಡು ತಮ್ಮವರ ಹಿತ ಕಾಯುತ್ತಿದ್ದಾರೆ. ಕನ್ನಡಿಗರಿಗೆ ಒಂದಿಲ್ಲೊಂದು ವಿಚಾರದಲ್ಲಿ ಅನ್ಯಾಯವಾಗ್ತಿದ್ರೂ ರಾಜ್ಯ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ. ಇಂತಹ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿರೋದಕ್ಕೆ ನಮ್ಮನ್ನು ನಾವೇ ದೂಷಿಸಿಕೊಳ್ಳಬೇಕು ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಇಲ್ಲಿ ಕನ್ನಡ ಮಾತನಾಡುವವರಿಗೆ ಫ್ಲ್ಯಾಟ್ ಕೊಡಲ್ಲ. ಬೇರೆ ಭಾಷೆಯವರಿಗೆ ಮಾತ್ರ ವಾಸಕ್ಕೆ ಅವಕಾಶ ಕೊಡ್ತೀವಿ ಅನ್ನೋದಾದ್ರೆ ಮುಂದೆ ಕನ್ನಡಿಗರನ್ನು ಸ್ವಂತ ನೆಲದಲ್ಲಿ ಬದುಕಲು ಬಿಡದೆ ಅತಂತ್ರರನ್ನಾಗಿ ಮಾಡುವ ಸೂಚನೆ ಇದು. ಇದಕ್ಕೆ ಕೂಡಲೇ ಕಡಿವಾಣ ಹಾಕಿ ಎಂದು ಆಗ್ರಹಿಸುತ್ತಿದ್ದಾರೆ. “ಮಲಯಾಳಿ, ತೆಲುಗು, ತಮಿಳರು ಬೇಸಾಯದ ನೆಲವನ್ನು ಪರ ರಾಜ್ಯದವರಿಗೆ ಮಾರಲ್ಲ. ಕರ್ನಾಟಕದಲ್ಲಿ ಪರ ರಾಜ್ಯದವರು ಕನ್ನಡಿಗರಿಗೆ ಮನೆ ಮಾರಲ್ಲ, ಕರ್ನಾಟಕದಲ್ಲೇ ಕನ್ನಡಿಗರಿಗೆ ಈ ಪರಿಸ್ಥಿತಿ ಬಂದಿರೋದು ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಬಿಜೆಪಿ ಪಕ್ಷಗಳ ವಲಸೆ ಪ್ರಚೋದನೆ ನೀತಿಗಳಿಂದ” ಎಂದು ಎಕ್ಸ್ ಬಳಕೆದಾರರೊಬ್ಬರು ಈ ಘಟನೆ ಉಲ್ಲೇಖಿಸಿದ್ದಾರೆ. “ಕರ್ನಾಟಕದಲ್ಲಿ ಕನ್ನಡಿಗರನ್ನೇ ಅಲ್ಪಸಂಖ್ಯಾತರನ್ನಾಗಿ ಮಾಡುತ್ತಿವೆ ಈ ಪಕ್ಷಗಳು” ಎಂದು ದೂರಿದ್ದಾರೆ.