ಬೆಂಗಳೂರು: ಬೆಂಗಳೂರು ನಗರದ ಹೊರ ವಲಯದಲ್ಲಿ ಆಸ್ತಿ ಕೊಳ್ಳುವ ಸಾಮಾನ್ಯ ಜನರ ಕನಸು ಸದ್ಯಕ್ಕೆ ನನಸಾಗುವುದಿಲ್ಲ. ಬೆಂಗಳೂರು 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ವಿವಿಧ ಯೋಜನೆಗಳ ಘೋಷಣೆಯ ಪರಿಣಾಮ ಆಸ್ತಿಗಳ ಮೇಲೆ ಬೀರಿದೆ. ನಗರದ ಸುತ್ತಮುತ್ತಲಿನ ಆಸ್ತಿ, ಭೂಮಿಯ ದರಗಳು ಭಾರೀ ಏರಿಕೆ ಕಂಡಿವೆ. ದೊಡ್ಡಬಳ್ಳಾಪುರ, ನೆಲಮಂಗಲ ಸೇರಿ ನಗರದ ಸುತ್ತಲೂ ಒಮ್ಮೆಲೆ ಭೂಮಿಯ ಬೆಲೆ ಏರಿಕೆಯಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಬೆಂಗಳೂರು 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲಿ ನಿರ್ಮಾಣವಾಗಲಿದೆ? ಎಂಬುದು ಸದ್ಯಕ್ಕೆ ಅಂತಿಮವಾಗಿಲ್ಲ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹಲವು ಸ್ಥಳಗಳನ್ನು ಸರ್ಕಾರ ಗುರುತಿಸಿದೆ. ಆದರೆ ಸ್ಥಳವನ್ನು ಅಂತಿಮಗೊಳಿಸಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡುವ ಕಾರ್ಯ ಇನ್ನೂ ಬಾಕಿ ಇದೆ.
ಆದರೆ ಬೆಂಗಳೂರು 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಸ್ಕೈಡೆಕ್, ಫೆರಿಫೆರಲ್ ರಿಂಗ್ ರೋಡ್, ವಿವಿಧ ಕಾರ್ಖನೆಗಳು ಸೇರಿದಂತೆ ಬೆಂಗಳೂರು ಗ್ರಾಮಾಂತರಕ್ಕೆ ವಿವಿಧ ಯೋಜನೆಗಳನ್ನು ಘೋಷಣೆ ಮಾಡಲಾಗುತ್ತಿದೆ. ಆದ್ದರಿಂದ ಭೂಮಿ, ಆಸ್ತಿಗಳ ಬೆಲೆಗಳಲ್ಲಿ ಭಾರೀ ಏರಿಕೆಯಾಗಿದೆ.
ದೊಡ್ಡಬಳ್ಳಾಪುರದಲ್ಲೂ ಏರಿಕೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ದೊಡ್ಡಬಳ್ಳಾಪುರ ಪ್ರಮುಖ ಕೇಂದ್ರವಾಗಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸುಮಾರು 40 ಕಿ. ಮೀ. ದೂರದಲ್ಲಿ ಈ ಪ್ರದೇಶವಿದೆ. ದೇವನಹಳ್ಳಿ ಬ್ಯುಸಿನೆಸ್ ಪಾರ್ಕ್, ಫೆರಿಫೆರಲ್ ರಿಂಗ್ ರೋಡ್, ಏರ್ಪೋರ್ಟ್ಗೆ ಮೆಟ್ರೋ ಸೌಲಭ್ಯ ಮುಂತಾದ ಯೋಜನೆಗಳ ಕಾರಣ ದೊಡ್ಡಬಳ್ಳಾಪುರ-ಚಿಕ್ಕಬಳ್ಳಾಪುರ ರಸ್ತೆ ಹೂಡಿಕೆದಾರರನ್ನು ಸೆಳೆಯುತ್ತಿದೆ. ಆದ್ದರಿಂದ ಆಸ್ತಿ ಮೌಲ್ಯವೂ ಹೆಚ್ಚಾಗುತ್ತಿದೆ.
ವರದಿಗಳ ಪ್ರಕಾರ ದೊಡ್ಡಬಳ್ಳಾಪುರದಲ್ಲಿ ಭೂಮಿಯ ಮೌಲ್ಯ 1.5ರಷ್ಟು ಏರಿಕೆ ಕಂಡಿದೆ. ದೇಶದ ವಿವಿಧ ಮಹಾನಗಳ ಸುತ್ತಲಿನ ಆಸ್ತಿ ಮೌಲ್ಯ ಹೇಗೆ ಏರಿಕೆಯಾಗಿದೆ? ಎಂದು ವರದಿಯೊಂದನ್ನು ತಯಾರು ಮಾಡಲಾಗಿದ್ದು, ಅದರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆಸ್ತಿ ಮೌಲ್ಯವನ್ನು ಉಲ್ಲೇಖಿಸಲಾಗಿದೆ. ಪ್ರಸ್ತಾವಿತ ಬೆಂಗಳೂರಿನ 2ನೇ ವಿಮಾನ ನಿಲ್ದಾಣವನ್ನು ನೆಲಮಂಗಲದಲ್ಲಿ ನಿರ್ಮಾಣ ಮಾಡಲು ಸ್ಥಳೀಯ ರೈತರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇರುವ ಕಾರಣ ದೊಡ್ಡಬಳ್ಳಾಪುರ ಸುತ್ತಮುತ್ತ ವಿಮಾನ ನಿಲ್ದಾಣ ನಿರ್ಮಾಣವಾಗುವುದಿಲ್ಲ. ಆದರೆ ಬೇರೆ ಬೇರೆ ಯೋಜನೆಗಳ ಕಾರಣಕ್ಕೆ ಆಸ್ತಿ ಮೌಲ್ಯದಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಈ ವರ್ಷ ಆಸ್ತಿ ಮೌಲ್ಯ ಹೆಚ್ಚಳ ಕಂಡುಬಂದಿರುವ ಪಟ್ಟಿಯಲ್ಲಿ ಕೊಪೋಲಿ ಮೊದಲ ಸ್ಥಾನದಲ್ಲಿದೆ. ಹೊಸದಾಗಿ ಬರಲಿರುವ ನವಿ ಮುಂಬೈ ವಿಮಾನ ನಿಲ್ದಾಣದಿಂದ ಸುಮಾರು 45 ನಿಮಿಷ ದೂರದಲ್ಲಿರುವ ಪ್ರದೇಶವಿದು. ಮುಂದಿನ 5 ವರ್ಷಗಳ ಕಾಲ ಈ ಪ್ರದೇಶದಲ್ಲಿ ಆಸ್ತಿ ಮೌಲ್ಯ ಅಧಿಕವಾಗಿರಲಿದೆ ಎಂದು ವರದಿ ಅಂದಾಜಿಸಿದೆ.
ಗುಜರಾತ್ ಮತ್ತು ಹರ್ಯಾಣದ ಎರಡು ಪ್ರದೇಶಗಳು ಸಹ ಟಾಪ್ 5 ಪಟ್ಟಿಯಲ್ಲಿವೆ. ಗುಜರಾತ್ನಲ್ಲಿ ಟಾಟಾ ನ್ಯಾನೋ ಮತ್ತು ಹರ್ಯಾಣದಲ್ಲಿ ಮಾರುತಿ ಸುಝುಕಿ ಘಟಕಗಳು ಬರುವ ಪ್ರದೇಶಗಳಲ್ಲಿ ಹೂಡಿಕೆ ಹೆಚ್ಚಲಿದ್ದು, ಆಸ್ತಿ ಮೌಲ್ಯವೂ ಹೆಚ್ಚಾಗಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ವಿಸ್ತರಣೆ, ವಿಮಾನ ನಿಲ್ದಾಣದ ಸುತ್ತಮುತ್ತಲಿನ ಅನೇಕ ಹೊಸ ಯೋಜನೆಗಳ ಕಾರಣ ಬೆಂಗಳೂರಿನಲ್ಲಿ ಆಸ್ತಿ ಮೌಲ್ಯ ಹೆಚ್ಚಳವಾಗಿದೆ ಎಂದು ವರದಿ ಅಂದಾಜಿಸಿದೆ. ಆಸ್ತಿ ಮೌಲ್ಯ ಹೆಚ್ಚುತ್ತಿರುವ ಪ್ರದೇಶಗಳಲ್ಲಿ ಬೆಂಗಳೂರಿನ ದೇವನಹಳ್ಳಿ, ಚಿಕ್ಕಬಳ್ಳಾಪುರ ರಸ್ತೆ, ಹೆಬ್ಬಾಳ, ಯಲಹಂಕವನ್ನು ವರದಿ ಪಟ್ಟಿ ಮಾಡಿದೆ.