ಬೆಂಗಳೂರು || ಬೆಂಗಳೂರು ನಗರಕ್ಕೆ ಬಂಪರ್ ಕೊಡುಗೆ ಕೊಟ್ಟ ಕೇಂದ್ರ ಸರ್ಕಾರ..

ಬೆಂಗಳೂರು || ಬೆಂಗಳೂರು ನಗರಕ್ಕೆ ಬಂಪರ್ ಕೊಡುಗೆ ಕೊಟ್ಟ ಕೇಂದ್ರ ಸರ್ಕಾರ..

ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿಗೆ ಕೇಂದ್ರ ಸರ್ಕಾರ ಬಂಪರ್ ಕೊಡುಗೆಯನ್ನು ನೀಡಿದೆ. ‘ಪಿಎಂ ಇ-ಡ್ರೈವ್’ ಯೋಜನೆಯಡಿ ನಗರಕ್ಕೆ 7,000 ಎಲೆಕ್ಟ್ರಿಕ್ ಬಸ್ಗಳನ್ನು ನೀಡಲು ಒಪ್ಪಿಗೆ ನೀಡಲಾಗಿದೆ. ಮಹಾನಗರಗಳ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಈ ಮಹತ್ವದ ಯೋಜನೆಯನ್ನು ಜಾರಿಗೊಳಿಸುತ್ತಿದೆ. ಈ ಯೋಜನೆಯಡಿ ಬಸ್ಗಳನ್ನು ನೀಡುವಂತೆ ಹೈದರಾಬಾದ್ ಮತ್ತು ಬೆಂಗಳೂರು ನಗರಗಳು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಕೆ ಮಾಡಿದ್ದವು.

2024ರ ಅಕ್ಟೋಬರ್ನಲ್ಲಿ ಕೇಂದ್ರ ಸರ್ಕಾರ ದೇಶದಲ್ಲಿ ವಿದ್ಯುತ್ ಚಾಲಿತ ವಾಹನಗಳಿಗೆ ಉತ್ತೇಜನ ನೀಡಲು ರೂಪಿಸಿರುವ ‘ಪಿಎಂ ಇ-ಡ್ರೈವ್’ ಯೋಜನೆಗೆ ಚಾಲನೆ ನೀಡಿತು. ಕೇಂದ್ರ ಬೃಹತ್ ಕೈಗಾರಿಕಾ ಖಾತೆ ಈ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ಈಗ ಬೆಂಗಳೂರು ನಗರಕ್ಕೆ ಈ ಯೋಜನೆಯ ಅಡಿ ಇ-ಬಸ್ಗಳನ್ನು ನೀಡಲಾಗುತ್ತಿದೆ.

‘ಪಿಎಂ ಇ-ಡ್ರೈವ್’ ಯೋಜನೆಯ ಅಡಿ ಬೆಂಗಳೂರು ನಗರಕ್ಕೆ 7,000 ಮತ್ತು ಹೈದರಾಬಾದ್ ನಗರಕ್ಕೆ 2,800 ಎಲೆಕ್ಟ್ರಿಕ್ ಬಸ್ಗಳನ್ನು ನೀಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಆದರೆ ಈ ಕುರಿತು ಕರ್ನಾಟಕದ ಸಾರಿಗೆ ಇಲಾಖೆಗೆ ಅಧಿಕೃತ ಆದೇಶ ಬಂದಿಲ್ಲ.

ಬಿಎಂಟಿಸಿ ಮೂಲಕ ಖರೀದಿ: ‘ಪಿಎಂ ಇ-ಡ್ರೈವ್’ ಯೋಜನೆಯಡಿ ಬಸ್ ಖರೀದಿ ಮಾಡಲು ಕೇಂದ್ರ ಸಹಕಾರ ನೀಡಲಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಈ ಅನುದಾನದಲ್ಲಿ ಬಸ್ಗಳನ್ನು ಖರೀದಿ ಮಾಡಲಿದೆ. ಬಸ್ಗಳನ್ನು ಜಿಸಿಸಿ ಮಾದರಿ ಒಪ್ಪಂದದ ಮೂಲಕ ಖರೀದಿ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಚಿವ ಸಂಪುಟ ಸಭೆಯಲ್ಲಿ ಪಿಎಂ ಇ-ಡ್ರೈವ್ ಯೋಜನೆಗೆ ಅನುಮೋದನೆ ನೀಡಲಾಗಿತ್ತು. ರೂ.10,900 ಕೋಟಿಗಳ ಆರ್ಥಿಕ ವೆಚ್ಚದೊಂದಿಗೆ ಅಕ್ಟೋಬರ್ 1, 2024ರಿಂದ ಮಾರ್ಚ್ 31, 2026ರ ತನಕ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಈ ಯೋಜನೆಯ ಪ್ರಾಥಮಿಕ ಉದ್ದೇಶ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸುವುದು. ಚಾರ್ಜಿಂಗ್ ಮೂಲಸೌಕರ್ಯವನ್ನು ಸ್ಥಾಪಿಸುವುದು ಮತ್ತು ದೇಶದಲ್ಲಿ ದೃಢವಾದ ಇವಿ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವುದು.

ಯೋಜನೆಯಡಿ ಕೇಂದ್ರ ಸರ್ಕಾರ 40 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಉತ್ತಮ ಪಡಿಸಲು ಅನುದಾನ ನೀಡಲಿದೆ. ಇದಕ್ಕಾಗಿ ಪಿಎಂ ಇ-ಡ್ರೈವ್ ಯೋಜನೆಯಡಿ ಎಲೆಕ್ಟ್ರಿಕ್ ಬಸ್ ಖರೀದಿಗೆ ಸಹಕಾರ ಸಿಗಲಿದೆ. ಈ ಯೋಜನೆಯಡಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸಲಾಗುತ್ತದೆ. ಎಲೆಕ್ಟ್ರಿಕ್ ವಾಹನ ಖರೀದಿಗಳಿಗೆ ಮುಂಗಡ ಪ್ರೋತ್ಸಾಹ ನೀಡಲಾಗುತ್ತದೆ ಮತ್ತು ಚಾರ್ಜಿಂಗ್ ಮೂಲಸೌಕರ್ಯಗಳ ಅಭಿವೃದ್ಧಿಯನ್ನು ಉತ್ತೇಜಿಸಲಾಗುತ್ತದೆ. ಭವಿಷ್ಯದಲ್ಲಿ ಸಾರಿಗೆ-ಸಂಬಂಧಿತ ಪರಿಸರ ಪರಿಣಾಮಗಳನ್ನು ಕಡಿಮೆ ಮಾಡಲು ಮತ್ತು ಗಾಳಿಯ ಗುಣಮಟ್ಟವನ್ನು ಸುಧಾರಿಸಲು ಯೋಜನೆ ಸಹಕಾರಿಯಾಗಿದೆ. ಆತ್ಮನಿರ್ಭರ ಭಾರತದ ಅಡಿ ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಎಲೆಕ್ಟ್ರಿಕ್ ವಾಹನ ಪೂರೈಕೆ ಬಲಗೊಳಿಸಲು ಹಂತ ಹಂತದ ಉತ್ಪಾದನಾ ಕಾರ್ಯಕ್ರಮವನ್ನು ಇದು ಒಳಗೊಂಡಿದೆ.

ಬೆಂಗಳೂರು ನಗರದಲ್ಲಿ ಈಗಾಗಲೇ ಬಿಎಂಟಿಸಿಯ ಎಲೆಕ್ಟ್ರಿಕ್ ಬಸ್ಗಳು ಸಂಚಾರವನ್ನು ನಡೆಸುತ್ತಿವೆ. ಕರ್ನಾಟಕದಲ್ಲಿ ಅತಿ ಹೆಚ್ಚು ಎಲೆಕ್ಟ್ರಿಕ್ ವಾಹನಗಳನ್ನು ಹೊಂದಿರುವ ನಗರ ಬೆಂಗಳೂರು, ಎಲೆಕ್ಟ್ರಿಕ್ ವಾಹನ ಬಳಕೆ ಉತ್ತೇಜಿಸಲು ಬೆಸ್ಕಾಂ ಸಾರ್ವಜನಿಕ ಸ್ಥಳಗಳಲ್ಲಿ ಚಾರ್ಜಿಂಗ್ ಪಾಯಿಂಟ್ ಸ್ಥಾಪನೆ ಮಾಡಲು ಸಹ ಮುಂದಾಗಿದೆ.

Leave a Reply

Your email address will not be published. Required fields are marked *