ಬೆಂಗಳೂರು: ಪ್ರತಿ ವರ್ಷವೂ ಜನವರಿ ಬಂತೆಂದರೆ ಬೆಂಗಳೂರಿಗರಿಗೆ ಒಂದು ರೀತಿಯ ಹಬ್ಬ ಎಂದರೆ ತಪ್ಪಾಗದು. ತೋಟಗಾರಿಕೆ ಇಲಾಖೆಯು ಲಾಲ್ಬಾಗ್ ಉದ್ಯಾನವನದಲ್ಲಿ ಆಯೋಜಿಸುವ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ ಕಣ್ತುಂಬಿಕೊಳ್ಳಲು ಕಾತುರದಿಂದ ಕಾದಿರುತ್ತಾರೆ. ಅದರಂತೆ ಈ ಬಾರಿ ಫ್ಲವರ್ ಶೋಗೆ ದಿನಗಣನೆ ಶುರುವಾಗಿದೆ.
ಕಣ್ತುಂಬಿಕೊಳ್ಳಲು ಕಾತುರದಿಂದ ಕಾದಿರುತ್ತಾರೆ. ಅದರಂತೆ ಈ ಬಾರಿ ಫ್ಲವರ್ ಶೋಗೆ ದಿನಗಣನೆ ಶುರುವಾಗಿದೆ. ಎಂದಿನಂತೆ ಗಣರಾಜ್ಯೋತ್ಸವದ ಅಂಗವಾಗಿ ಲಾಲ್ಬಾಗ್ನಲ್ಲಿ ಒಂದು ವಿಷಯವಾಗಿ ಫ್ಲವರ್ ಶೋ ಆಯೋಜಿಸಲಾಗುತ್ತದೆ. ಪ್ರತಿದಿನವೂ ಲಕ್ಷಾಂತರ ಮಂದಿ ಇಲ್ಲಿಗೆ ಭೇಟಿ ನೀಡಿ ಪುಷ್ಪಗಳ ಸೊಬಗನ್ನು ಕಣ್ತುಂಬಿಕೊಳ್ಳುತ್ತಾರೆ. ಇದಕ್ಕೆ ಪ್ರವೇಶ ಶುಲ್ಕ ಕೂಡ ಇರಲಿದ್ದು, ಇದರಿಂದ ಕೋಟಿಗಟ್ಟಲೆ ಆದಾಯ ಕೂಡ ತೋಟಗಾರಿಕೆ ಇಲಾಖೆಗೆ ಹರಿದುಬರುತ್ತದೆ.
ಅದರಂತೆ ಈ ಬಾರಿಯೂ ಲಾಲ್ಬಾಗ್ನಲ್ಲಿ ಫ್ಲವರ್ ಶೋಗೆ ಭರ್ಜರಿ ತಯಾರಿ ನಡೆಯುತ್ತಿದೆ. ಎರಡು ಮೂರು ತಿಂಗಳಿಗೂ ಮುನ್ನವೇ ಇಲ್ಲಿ ಪ್ರದರ್ಶನಕ್ಕೆ ತಯಾರಿ ಆರಂಭಿಸಲಾಗುತ್ತದೆ. ಈ ಬಾರಿ ಮಹರ್ಷಿ ವಾಲ್ಮೀಕಿ ಅವರ ವಿಷಯಾಧಾರಿತವಾಗಿ ಫ್ಲವರ್ ಶೋ ಆಯೋಜಿಸಲು ತೋಟಗಾರಿಕೆ ಇಲಾಖೆ ಮುಂದಾಗಿದೆ.
ಈ ಬಾರಿಯ ಲಾಲ್ಬಾಗ್ ಫಲಪುಷ್ಪ ಪ್ರದರ್ಶನದಲ್ಲಿ ಮಹರ್ಷಿ ವಾಲ್ಮೀಕಿ ಅವರ ವಿಷಯಾಧಾರಿತ ಹೂವಿನ ಪ್ರತಿಕೃತಿ ಕಣ್ಮನ ಸೆಳೆಯಲಿದೆ. ಜನವರಿ 16ರಿಂದ 26ರವರೆಗೆ ಲಾಲ್ಬಾಗ್ನಲ್ಲಿ ಫಲಪುಷ್ಪ ಪ್ರದರ್ಶನ ನಡೆಯಲಿದೆ ಎಂದು ಇಲಾಖೆ ಮಾಹಿತಿ ಹಂಚಿಕೊಂಡಿದೆ. ಮಹಾಕಾವ್ಯ ರಾಮಾಯಣವನ್ನು ರಚಿಸಿದ ಮಹರ್ಷಿ ವಾಲ್ಮೀಕಿ ಅವರ ವಿಷಯವಾಗಿ ಪುಷ್ಪ ಪ್ರದರ್ಶನ ನಡೆಯಲಿದ್ದು, ವಾಲ್ಮೀಕಿ ಅವರ ಜೀವನ ಚಿತ್ರಣ ಪುಷ್ಪಗಳಲ್ಲಿ ಅರಳಲಿದೆ. ಈ ಸಂಬಂಧ ಈಗಾಗಲೇ ತೋಟಗಾರಿಕೆ ಇಲಾಖೆಯು ತಜ್ಞರ ಅಭಿಪ್ರಾಯ ಪಡೆದು ಮುಂದಡಿ ಇಟ್ಟಿದೆ.
ವಾಲ್ಮೀಕಿ ಅವರ ಜೀವನ ಚಿತ್ರಣದ ಜೊತೆಗೆ ರಾಮಾಯಣ ಬಗ್ಗೆಯೂ ಪುಷ್ಪಗಳಲ್ಲಿ ಮಾಹಿತಿ ಪಸರಿಸಲು ವಿಶೇಷ ಕಾಳಜಿ ವಹಿಸಿದೆ. ವಾಲ್ಮೀಕಿ ಅವರು ರಾಮಾಯಣ ರಚಿಸುವುದು, ಹಾಗೂ ಅವರ ಜೀವನದ ಕುರಿತಾಗಿ ಪ್ರತಿಮೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಈ ಫ್ಲವರ್ ಶೋಗಾಗಿ ವಿಶೇಷ ಹಾಗೂ ವಿಭಿನ್ನವಾದ ಹೂವುಗಳನ್ನು ಬಳಸಲು ಮುಂದಾಗಿದೆ. ಶೀತ ಪ್ರದೇಶಗಳಲ್ಲಿ ಕಂಡುಬರುವ ಹೂವುಗಳು ಈ ಬಾರಿ ಪ್ರದರ್ಶನದಲ್ಲಿ ಇರಲಿವೆ. ತೋಟಗಾರಿಕೆ ಇಲಾಖೆಯ ನರ್ಸರಿಗಳು ಮಾತ್ರವಲ್ಲದೆ ದೇಶ ಹಾಗೂ ವಿದೇಶದಿಂದಲೂ ವಿಶೇಷವಾದ ಹೂವುಗಳನ್ನು ಈ ಪ್ರದರ್ಶನಕ್ಕಾಗಿ ತರಿಸಿಕೊಳ್ಳಲಾಗುತ್ತಿದೆ. ಫಲಪುಷ್ಪ ಪ್ರದರ್ಶನದಲ್ಲಿ ಬರೋಬ್ಬರಿ 25 ಲಕ್ಷ ಹೂಗಳನ್ನು ಬಳಸಲಾಗುತ್ತಿದ್ದು, ಹೂ ಕುಂಡದಲ್ಲಿ ಬೆಳೆಯುವ ಪುಷ್ಪಗಳು, ಲಾಲ್ಬಾಗ್ನಲ್ಲೇ ಬೆಳೆಯುವ 15 ಲಕ್ಷ ಹೂವುಗಳು, 10 ಲಕ್ಷ ಗುಲಾಬಿ, ಸೇವಂತಿಗೆ ಹೂಗಳು ಹಾಗೂ ಬಗೆಬಗೆಯ ಪುಷ್ಪಗಳನ್ನು ಬಳಕೆ ಮಾಡುವುದಾಗಿ ತಿಳಿಸಿದೆ.
ತೋಟಗಾರಿಕೆ ಇಲಾಖೆಯು ಲಾಲ್ಬಾಗ್ ಫಲಪುಷ್ಪ ಪ್ರದರ್ಶನಕ್ಕಾಗಿ ತಮಿಳುನಾಡು, ಆಂಧ್ರಪ್ರದೇಶ, ಕೇರಳ ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಿಂದಲೂ ವಿಶೇಷ ಹೂವುಗಳನ್ನು ತರಿಸಿಕೊಳ್ಳುತ್ತಿದೆ. ಕಳೆದ ಆಗಸ್ಟ್ನಲ್ಲಿ ಆಯೋಜಿಸಿದ್ದ ಫ್ಲವರ್ ಶೋನಲ್ಲಿ ತೋಟಗಾರಿಕೆ ಇಲಾಖೆಯು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಷಯವಾಗಿ ವಿಶೇಷ ಪುಷ್ಪ ಪ್ರದರ್ಶನ ಆಯೋಜಿಸಿತ್ತು.