ಬೆಂಗಳೂರು: ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಳ ಆಯ್ಕೆ ಕಸರತ್ತು ಬಹುತೇಕ ಕೊನೆ ಹಂತ ತಲುಪಿದ್ದು ಈಗ ಗುರುತಿಸಿರುವ ಸ್ಥಳಗಳಲ್ಲಿ ಯಾವುದು ಅಂತಿಮವಾಗುತ್ತದೆ ಎನ್ನುವ ಕುತೂಹಲವಿದೆ. ಡಾಬಸ್ಪೇಟೆ, ನೆಲಮಂಗಲ, ಬಿಡದಿ ಮತ್ತು ಹಾರೋಹಳ್ಳಿಯಲ್ಲಿ ಸ್ಥಳ ಗುರುತಿಸಲಾಗಿದೆ. ಹಲವು ರೀತಿಯಲ್ಲಿ ಸ್ಥಳ ಆಯ್ಕೆ ಲೆಕ್ಕಾಚಾರ ನಡೆಯುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಸ್ಥಳ ಘೋಷಿಸುವ ಸಾಧ್ಯತೆ ಇದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಒತ್ತಡ ಹೆಚ್ಚಾಗುತ್ತಿದ್ದು, ಬೆಂಗಳೂರು ಬೆಳವಣಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಎರಡನೇ ವಿಮಾನ ನಿಲ್ದಾಣಕ್ಕೆ ಕರ್ನಾಟಕ ಸರ್ಕಾರ ಯೋಜನೆ ರೂಪಿಸಿದೆ. ಕರ್ನಾಟಕದ ಸ್ಥಳ ಗುರುತಿಸುವ ಮುನ್ನವೇ ತಮಿಳುನಾಡು ಸರ್ಕಾರ ಹೊಸೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿತು.
ಬೆಂಗಳೂರಿನ ಅಭಿವೃದ್ಧಿಯನ್ನು ಸಮರ್ಥವಾಗಿ ಬಳಸಿಕೊಂಡು ಹೂಡಿಕೆಯನ್ನು ಆಕರ್ಷಿಸಲು ಪಕ್ಕದ ರಾಜ್ಯ ಆಸಕ್ತಿ ತೋರಿಸುತ್ತಿದೆ. ಹೊಸೂರಿನಲ್ಲಿ ವಿಮಾನ ನಿಲ್ದಾಣ ಬಂದರೆ ಕೆಂಪೇಗೌಡ ವಿಮಾನ ನಿಲ್ದಾಣದ ಮೇಲಿನ ಒತ್ತಡ ಕಡಿಮೆಯಾಗಲಿದೆಯಾದರೂ, ಬೆಂಗಳೂರಿಗೆ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಗತ್ಯವಿದೆ. ಸ್ಥಳ ಆಯ್ಕೆಯಲ್ಲಿ ರಾಜಕೀಯ ಬೇಡ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದ್ದರೂ ಅಂತಿಮವಾಗಿ ಸ್ಥಳ ನಿಗದಿ ಮಾಡಲು ಅಭಿವೃದ್ಧಿಯೊಂದನ್ನೇ ಮಾನದಂಡವನ್ನಾಗಿಸಿಕೊಳ್ಳಬೇಕಿದೆ. ಇಡೀ ಬೆಂಗಳೂರು ಮತ್ತು ಅಕ್ಕಪಕ್ಕದ ಜಿಲ್ಲೆಗಳ ಅಭಿವೃದ್ಧಿಯನ್ನು ಕೂಡ ಪರಿಗಣಿಸಬೇಕಾಗುತ್ತದೆ. ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಿಸುವ ಯೋಜನೆ ಇರುವ ಕಾರಣ ಹಾರೋಹಳ್ಳಿ, ಬಿಡದಿಯಲ್ಲಿ ಗುರುತಿಸಿರುವ ಸ್ಥಳಗಳನ್ನು ಆಯ್ಕೆ ಮಾಡದೇ ಇರುವುದೇ ಒಳ್ಳೆಯದು ಎಂದು ಹಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ನೆಲಮಂಗಲ ಮತ್ತು ಡಾಬಸ್ಪೇಟೆ ಬಳಿ ಗುರುತಿಸಿರುವ ಸ್ಥಳಗಳೇ ಸೂಕ್ತವಾಗಿದ್ದು ಸರ್ಕಾರ ಇವುಗಳನ್ನು ಪರಿಗಣಿಸಬೇಕು ಎನ್ನುವ ಕೂಗು ಕೂಡ ಕೇಳಿ ಬರುತ್ತಿದೆ. ಆದರೆ ಹಾರೋಹಳ್ಳಿ, ಬಿಡದಿಯಲ್ಲಿ ಗುರುತಿಸಿದ ಸ್ಥಳದಲ್ಲಿ ಒಂದನ್ನು ಆಯ್ಕೆ ಮಾಡಬೇಕು ಎನ್ನುವ ಒತ್ತಡ ಸರ್ಕಾರದ ಮೇಲಿದೆ ಎನ್ನುವ ಸುದ್ದಿ ಕೇಳಿಬಂದಿದೆ. ಎರಡನೇ ವಿಮಾನ ನಿಲ್ದಾಣ ಸ್ಥಳ ಆಯ್ಕೆ ಭವಿಷ್ಯದ ದೃಷ್ಟಿಯಿಂದ ಬೆಂಗಳೂರು ಬೆಳವಣಿಗೆಗೆ ಮುಖ್ಯವಾಗಿದೆ. ಸೂಕ್ತ ಸಾರಿಗೆ ವ್ಯವಸ್ಥೆ, ಹೆಚ್ಚಿನ ಸರ್ಕಾರಿ ಭೂಮಿ ಲಭ್ಯತೆ ಸೇರಿದಂತೆ ಹಲವು ಅಂಶಗಳನ್ನು ಪರಿಗಣಿಸಿ ತೀರ್ಮಾನ ಮಾಡಬೇಕಾಗಿದೆ.
ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಈಗಾಗಲೇ ಯಾವುದೇ ಒತ್ತಡಕ್ಕೆ ಮಣಿಯುವ ಪ್ರಶ್ನೆಯೇ ಇಲ್ಲ, ಎಲ್ಲಾ ರೀತಿಯಲ್ಲಿಯೂ ಪರಿಶೀಲನೆ ಮಾಡಿಯೇ ಸ್ಥಳ ಆಯ್ಕೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಸರ್ಕಾರ ಅಧಿಕೃತವಾಗಿ ಸ್ಥಳ ಘೋಷಣೆ ಮಾಡುವ ಸಾಧ್ಯತೆ ಇದ್ದು. ಸ್ಥಳ ಆಯ್ಕೆಗೆ ಸ್ವಹಿತಾಸಕ್ತಿಯ ಬದಲು ಅಭಿವೃದ್ಧಿಯೇ ಮಾನದಂಡವಾಗಲಿ ಎಂದು ಸಾರ್ವಜನಿಕರು ಆಶಿಸಿದ್ದಾರೆ.