ಬೆಂಗಳೂರು: ನಿತ್ಯ ಲಕ್ಷಗಟ್ಟಲೇ ಪ್ರಯಾಣಿಕರಿಗೆ ವಿಮಾನಯಾನ ಸೇವೆ ಕಲ್ಪಿಸಿರುವ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (KIA) ಟರ್ಮಿನಲ್ 2 ಅತ್ಯಾಕರ್ಷಕ ವಿಶೇಷತೆಗಳಿಂದ ಭಾರೀ ಸುದ್ದಿಯಾಗಿತ್ತು. ಬಿದಿರುವ, ಲೈಟಿಂಗ್, ಹೊಸ ಮಾದರಿಯಲ್ಲಿ ನಿರ್ಮಾಣಗೊಂಡ BLR Airport T2 ಇದೀಗ ಮತ್ತೊಂದು ವಿಚಾರಕ್ಕೆ ಜನರನ್ನು ಸೆಳೆಯುತ್ತದೆ. ಈ ಟಿ2 ನಲ್ಲಿ ‘ಹಸಿರು ಪ್ರಕೃತಿ ವಾತಾವರಣ, ಹುಣಸೆ ತೋಪು’ ಪ್ರಕೃತಿ ಸೊಬಗು ಸೃಷ್ಟಿಸಿ ‘ನಿತ್ಯೋತ್ಸವ’ ಆಚರಿಸಲಾಗುತ್ತದೆ.
ಇತ್ತೀಚೆಗೆ ವರ್ಟಿಕಲ್ ಗಾರ್ಡನ್ಗೆ ಸಾಕ್ಷಿಯಾಗಿದ್ದ ಬೆಂಗಳೂರು ಏರ್ಪೋರ್ಟ್ ಟರ್ಮಿನಲ್ 2ನಲ್ಲಿ ”ಮೂರು ಮುಖ್ಯ ದ್ವಾರಗಳ ಮೇಲ್ಚಾವಣಿಗಳು (ವೆಸ್ಟಿಬುಲ್) ಕರ್ನಾಟಕದ ಸೊಂಪಾದ ಕಾಡುಗಳ ವಿಹಂಗಮ ಛಾಯಾಚಿತ್ರಗಳನ್ನು ಹೊಂದಿವೆ.” ಈ ಕುರಿತು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (KIA) ವಿಡಿಯೋವೊಂದನ್ನು ಹಂಚಿಕೊಂಡಿದೆ.
ಟಿ-2ನಲ್ಲಿ ಇವುಗಳನ್ನು ಖ್ಯಾತ ಕವಿ ಕೆ.ಎಸ್ ನಿಸಾರ್ ಅಹಮದ್ ಅವರ ‘ನಿತ್ಯೋತ್ಸವ’ಕವನದಿಂದ ಪ್ರೇರಿತವಾಗಿ ಸೆರೆಹಿಡಿಯಲಾಗಿದೆ. ಈ ಛಾಯಾಚಿತ್ರಗಳು ಟರ್ಮಿನಲ್ 2 ನ್ನು ಪ್ರವೇಶಿಸುವ ಪ್ರಯಾಣಿಕರಿಗೆ ಹಸಿರು ಪರಿಸರದಲ್ಲಿ ತಲ್ಲೀನವಾದ ಅನುಭವವನ್ನು ಒದಗಿಸುತ್ತವೆ. ಇಲ್ಲಿಗೆ ಬರುವ ಪ್ರಯಾಣಿಕರಿಗೆ ವಿಶೇಷ ಅನುಭವ ನೀಡುತ್ತದೆ. ಹಚ್ಚಹಸಿರಿನ ಮಧ್ಯೆ ಇದ್ದೇವೆ ಎಂದು ಭಾಸವಾಗುವಂತಿದೆ.
ಪ್ರಶಾಂತವಾದ ಹಸರಿನಲ್ಲಿ ನಿಮ್ಮನ್ನು ನೀವು ಕಳೆದು ಹೋಗಬಹುದು. ಹುಣಸೆ ತೋಪಿನ ವಾತಾವರಣ ಆನಂದಿಸಬಹುದು. ಬಿದಿರಿನ ಸೊಂಪಾದ ಮೇಲ್ಛಾವಣಿ ಸೌಂದರ್ಯದಲ್ಲಿ ಕಳೆದು ಹೋಗಬಹದು. ಇಂಥದ್ದೊಂದು ‘ನಿತ್ಯೋತ್ಸವ’ದ ಸಂಭ್ರಮ ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣದ ಟರ್ಮಿನಲ್-2ನಲ್ಲಿ ಕಟ್ಟಿಕೊಡಲಾಗಿದೆ. ಟರ್ಮಿನಲ್ 2 ರಲ್ಲಿರುವ ಮೂರು ಮುಖ್ಯ ದ್ವಾರಗಳ ಮೇಲ್ಚಾವಣಿಗಳು (ವೆಸ್ಟಿಬುಲ್) ಕರ್ನಾಟಕದ ಸೊಂಪಾದ ಕಾಡುಗಳ ವಿಹಂಗಮ ಛಾಯಾಚಿತ್ರಗಳನ್ನು ಹೊಂದಿವೆ. ನಿತ್ಯೋತ್ಸವ- ನಲ್ಲೂರು ಹುಣಸೆ ತೋಪಿನ ಛಾಯಾಗ್ರಾಹಣ ವಿವೇಕ್ ಮ್ಯಾಥ್ಯೂ ಅವರದ್ದು.
ನಿತ್ಯೋತ್ಸವ- ಬಿದಿರು ತೋಪು ಛಾಯಾಗ್ರಾಹಣ ಗಣೇಶ್ ಶಂಕರ್ ಅವರದ್ದು, ನಿತ್ಯೋತ್ಸವ- ರಾಮನಗರ ಅರಣ್ಯದ ಹಿಂದೆ ಛಾಯಾಗ್ರಾಹಕ ದಿನೇಶ್ ಮನೀರ್ ಅವರ ಶ್ರಮವಿದೆ. ವಿಹಂಗಮ-ಶಾಸ್ತ್ರಜ್ಞ ಅಮಿತ್ ಪಾಸ್ರಿಚಾ, ಸಂಯೋಜಕ-ಟೈಗರ್ ಟೈಗರ್ ಗ್ರಾಫಿಕ್ಸ್ ಮಾಡಿಕೊಟ್ಟಿದ್ದಾರೆ. ವರ್ಟಿಕಲ್ ಗಾರ್ಡನ್ ನಿತ್ಯ ಲಕ್ಷಾಂತರ ಜನರು ಓಡಾಡುವ ಈ ಬೆಂಗಳೂರು ಏರ್ಪೋರ್ಟ್ನಲ್ಲಿ ಇತ್ತೀಚೆಗೆ ಫ್ರೆಂಚ್ ದೇಶದ ರಾಷ್ಟ್ರೀಯ ವೈಜ್ಞಾನಿಕ ಸಂಶೋಧನಾ ಕೇಂದ್ರದಲ್ಲಿ ಗುರುತಿಸಿಕೊಂಡ ಸಸ್ಯಶಾಸ್ತ್ರಜ್ಞ ಪ್ಯಾಟ್ರಿಕ್ ಬ್ಲಾಂಕ್ ಅವರ ಸಹಕಾರದಲ್ಲಿ ವರ್ಟಿಕಲ್ ಗಾರ್ಡನ್ ನಿರ್ಮಿಸಲಾಗಿದೆ. ಹಚ್ಚ ಹಸಿರಿನ ಗೋಡೆ ನಿರ್ಮಿಸಲಾಗಿತ್ತು. ‘ಟೈಗರ್ ವಿಂಗ್ಸ್’ ಶಿರ್ಷಿಕೆಯಡಿ ಕಳೆದ ವರ್ಷ 2024 ನವೆಂಬರ್ನಲ್ಲಿ ವರ್ಟಿಕಲ್ ಗಾರ್ಡನ್ ನಿರ್ಮಿಸಲಾಗಿತ್ತು. ಅದರ ಬೆನ್ನಲ್ಲೆ ಇದೀಗ ಹಸಿರಿನ ವಾತಾವರಣ ನಿರ್ಮಿಸಲಾಗಿದೆ.
ಟರ್ಮಿನಲ್ 2 ಕುರಿತು.. ಟರ್ಮಿನಲ್ 2 ನಲ್ಲಿ ಈವೆಂಟ್ ಸ್ಪೇಸ್, ನಿಕೋಬಾರ್ ಲಾಂಜ್, ಎಂಟರ್ಟೈನ್ಮೆಂಟ್ ಏರಿಯಾಗಳು ಇವೆ. ಪ್ರಯಾಣಿಕರಿಗೆ ಇಷ್ಟದ ರೀತಿಯಲ್ಲಿ ವಿನ್ಯಾಸ ಮಾಡಲಾಗಿದೆ. ಟಿ2 ವಿಶೇಷ ರೀತಿಯಲ್ಲಿ ನಿರ್ಮಿಸಲಾಗಿದೆ. ಸಂಪೂರ್ಣವಾಗಿ ಬಿದಿರಿನಿಂದ ನಿರ್ಮಿಸಲಾಗಿದೆ. ಒಳಗೆ ಹಸಿರಿನಿಂದ ಸಿಂಗರಿಸಲಾಗಿದೆ. ಲೈಟಿಂಗ್ಸ್ಗಳು ಕಣ್ಮನೆ ಸಳೆಯುತ್ತವೆ. ಚೆಕ್ಇನ್ ಕೌಂಟರ್ ಕೂಡ ಬಿದಿರಿನಲ್ಲಿದೆ. ವಿಶಾಲ ಟರ್ಮಿನಲ್ 2ನಿಂದ ದೇಶಿಯ, ಅಂತಾರಾಷ್ಟ್ರೀಯ ವಿಮಾನಗಳ ಕಾರ್ಯಾಚರಣೆ ನಡೆಸುತ್ತಿವೆ. ಪ್ರಯಾಣಿಕರು ಇಲ್ಲಿನ ಸೊಬಗನ್ನು ಆನಂದಿಸುತ್ತಿದ್ದಾರೆ. ಅದಕ್ಕೀಗ ಹಸಿರು ಪರಿಸರ ಮೇಲ್ಚಾವಣೆ ಛಾಯಾಚಿತ್ರ ಸಿದ್ಧಪಡಿಸಲಾಗಿದೆ.