ಬೆಂಗಳೂರು : ಉದಯ್ ಎಕ್ಸ್ಪ್ರೆಸ್ ಡಬಲ್ ಡೆಕ್ಕರ್ ರೈಲು ಬೆಂಗಳೂರು-ಕೊಯಮತ್ತೂರು ನಡುವೆ ಸಂಚಾರವನ್ನು ನಡೆಸುತ್ತಿದೆ. ಈ ರೈಲನ್ನು ಪಾಲಕ್ಕಾಡ್ ತನಕ ವಿಸ್ತರಣೆ ಮಾಡಬೇಕು ಎಂಬ ಬೇಡಿಕೆ ಇದೆ. ಭಾರತೀಯ ರೈಲ್ವೆ ಪಾಲಕ್ಕಾಡ್ ತನಕ ರೈಲಿನ ಸಂಚಾರವನ್ನು ನಡೆಸಿ ಸುಮಾರು ಒಂದು ವರ್ಷಗಳು ಕಳೆಯುತ್ತಾ ಬಂದಿದೆ. ಆದರೆ ಉದಯ್ ಎಕ್ಸ್ಪ್ರೆಸ್ ರೈಲು ಪಾಲಕ್ಕಾಡ್ ತನಕ ಸಂಚಾರ ನಡೆಸುವುದಕ್ಕೆ ಇನ್ನೂ ಒಪ್ಪಿಗೆ ಸಿಕ್ಕಿಲ್ಲ.

ಬೆಂಗಳೂರು-ಕೊಯಮತ್ತೂರು ನಡುವಿನ ಉದಯ್ ಎಕ್ಸ್ಪ್ರೆಸ್ ರೈಲನ್ನು ಕೊಯಮತ್ತೂರಿನ ಪೊಲ್ಲಚಿ ಮೂಲಕ ಪಾಲಕ್ಕಾಡ್ ತನಕ ವಿಸ್ತರಣೆ ಮಾಡುವುದು ಬೇಡಿಕೆಯಾಗಿದೆ. ಸದ್ಯ ಪೊಲ್ಲಚಿ-ಬೆಂಗಳೂರು ನಡುವೆ ಯಾವುದೇ ನೇರ ಸಂಪರ್ಕದ ರೈಲುಗಳಿಲ್ಲ. ಆದ್ದರಿಂದ ಬೆಂಗಳೂರು-ಕೊಯಮತ್ತೂರು ರೈಲು ವಿಸ್ತರಣೆಗೆ ಜನರು ಕಾದು ಕುಳಿತಿದ್ದಾರೆ.
ಪ್ರಾಯೋಗಿಕ ಸಂಚಾರ: ಬೆಂಗಳೂರು-ಕೊಯಮತ್ತೂರು ಉದಯ್ ಎಕ್ಸ್ಪ್ರೆಸ್ ರೈಲನ್ನು ಪಾಲಕ್ಕಾಡ್ ತನಕ ವಿಸ್ತರಣೆ ಮಾಡಬೇಕು ಎಂಬ ಬೇಡಿಕೆ ಹಿನ್ನಲೆಯಲ್ಲಿ ಡಬಲ್ ಡೆಕ್ಕರ್ ರೈಲಿನ ಪ್ರಾಯೋಗಿಕ ಸಂಚಾರವನ್ನು ಏಪ್ರಿಲ್ 17, 2024ರಂದು ನಡೆಸಲಾಯಿತು. ಇದರಿಂದಾಗಿ ಸಾವಿರಾರು ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಪ್ರಾಯೋಗಿಕ ಸಂಚಾರ ಮುಗಿದು ವರ್ಷಗಳು ಕಳೆಯುತ್ತಾ ಬಂದರೂ ರೈಲು ಸೇವೆ ಆರಂಭದ ದಿನಾಂಕ ಘೋಷಣೆ ಬಾಕಿ ಇದೆ.
ಪೊಲ್ಲಚಿ ಮತ್ತು ಸುತ್ತಮುತ್ತಲೂ ಹಲವು ಐಟಿ ಕಂಪನಿಗಳಿವೆ. ಆದರೆ ಇಲ್ಲಿಂದ ಐಟಿ ಉದ್ಯಮದ ಪ್ರಮುಖ ನಗರವಾದ ಬೆಂಗಳೂರಿಗೆ ರೈಲು ಸೇವೆ ಇಲ್ಲ. ಆದ್ದರಿಂದ ಭಾರತೀಯ ರೈಲ್ವೆ ಪ್ರಯಾಣಿಕರು, ಐಟಿ ಉದ್ಯೋಗಿಗಳಿಗೆ ನೆರವಾಗುವಂತೆ ಪೊಲ್ಲಚಿ ಮೂಲಕ ರೈಲು ಸೇವೆ ಆರಂಭಿಸಬೇಕು ಎಂದು ಒತ್ತಾಯಿಸಲಾಗುತ್ತಿದೆ.
ವಿಭಾಗೀಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ (ಡಿಆರ್ಯುಸಿಸಿ) ಸಭೆಯಲ್ಲಿ ಉದಯ್ ಎಕ್ಸ್ಪ್ರೆಸ್ ರೈಲು ಪಾಲಕ್ಕಾಡ್ ತನಕ ವಿಸ್ತರಣೆ ಮಾಡುವ ಕುರಿತು ಚರ್ಚೆ ನಡೆಸಲಾಗುತ್ತದೆ. ಬಳಿಕ ಆ ಕುರಿತು ಯಾವುದೇ ತೀರ್ಮಾನವಾಗುತ್ತಿಲ್ಲ. ಇಲಾಖೆ ರೈಲು ಸೇವೆ ವಿಸ್ತರಣೆಗೆ ಇರುವ ತೊಂದರೆಗಳ ಕುರಿತು ಹೇಳುತ್ತಿಲ್ಲ ಎಂದು ಪ್ರಯಾಣಿಕರು ದೂರಿದ್ದಾರೆ. ಮಾರ್ಚ್ 20ರಂದು ನಡೆದ ಡಿಆರ್ಯುಸಿಸಿ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಲಾಗಿತ್ತು. ಆಗ ಪಾಲಕ್ಕಾಡ್ ರೈಲ್ವೆ ವಿಭಾಗದ ಅಧಿಕಾರಿಗಳು ಉದಯ್ ಎಕ್ಸ್ಪ್ರೆಸ್ ಡಬಲ್ ಡೆಕ್ಕರ್ ರೈಲು ಪಾಲಕ್ಕಾಡ್ ತನಕ ವಿಸ್ತರಣೆ ಮಾಡಲು ರೈಲ್ವೆ ಇಲಾಖೆ ಒಪ್ಪಿಗೆ ಬಾಕಿ ಇದೆ ಎಂದು ಹೇಳಿದ್ದಾರೆ. ಪೊಲ್ಲಚಿ ಜಂಕ್ಷನ್ 4 ತಾಲೂಕುಗಳಿಗೆ ಪ್ರಮುಖ ಸ್ಥಳವಾಗಿದೆ. ಅಲ್ಲದೆ ಇಲ್ಲಿ ಹಲವು ಪ್ರವಾಸಿ ತಾಣಗಳಿವೆ.
ಈಗಾಗಲೇ ಪೊಲ್ಲಚಿಗೆ ರೈಲುಗಳ ಸಂಖ್ಯೆ ಕಡಿಮೆ ಇದೆ. ಪ್ರದೇಶದ ಅಭಿವೃದ್ಧಿಗಾಗಿ ರೈಲುಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಬೇಡಿಕೆ ಇಡಲಾಗುತ್ತಿದೆ. ಉದಯ್ ಎಕ್ಸ್ಪ್ರೆಸ್ ರೈಲು ಪಾಲಕ್ಕಾಡ್ ತನಕ ವಿಸ್ತರಣೆ ಮಾಡಲು ಯಾವಾಗ ಒಪ್ಪಿಗೆ ಸಿಗಲಿದೆ? ಎಂದು ಕಾದು ನೋಡಬೇಕಿದೆ. ಈಗಾಗಲೇ ರೈಲ್ವೆ ಇಲಾಖೆ ಬೆಂಗಳೂರು-ಕೊಯಮತ್ತೂರು ನಡುವೆ ವಂದೇ ಭಾರತ್ ರೈಲು ಎಕ್ಸ್ಪ್ರೆಸ್ ರೈಲು ಸೇವೆಯನ್ನು ಆರಂಭಿಸಿದೆ. ಆದ್ದರಿಂದ ಉದಯ್ ಎಕ್ಸ್ಪ್ರೆಸ್ ರೈಲನ್ನು ಪಾಲಕ್ಕಾಡ್ ತನಕ ವಿಸ್ತರಣೆ ಮಾಡಿದರೆ ಅನುಕೂಲವಾಗಲಿದೆ ಎಂದು ಪ್ರಯಾಣಿಕರು ಒತ್ತಾಯಿಸುತ್ತಿದ್ದಾರೆ.