ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಾರ್ಚ್ 7ರಂದು ಬಜೆಟ್ ಮಂಡನೆ ಮಾಡಿದ್ದು. ಬೆಂಗಳೂರಿಗೆ ಭರ್ಜರಿ ಕೊಡುಗೆಯನ್ನೇ ನೀಡಿದ್ದಾರೆ. ಬೆಂಗಳೂರಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಪ್ರಮುಖ ಯೋಜನೆಗಳನ್ನು ಈ ಬಾರಿಯ ಬಜೆಟ್ನಲ್ಲಿ ಘೋಷಣೆ ಮಾಡಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆಗೆ ಕ್ಷಣಗಣನೆ ಪ್ರಾರಂಭವಾಗಿರುವ ಸಂದರ್ಭದಲ್ಲಿಯೇ ಬೆಂಗಳೂರಿಗೆ ಭರ್ಜರಿ ಕೊಡುಗೆಗಳನ್ನು ನೀಡಲಾಗಿದೆ. ಕಾಂಗ್ರೆಸ್ ಸರ್ಕಾರವು ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯನ್ನು ಪರಿಚಯಿಸಿದೆ. ಈ ಬಾರಿ ಬಜೆಟ್ನಲ್ಲಿ ಬ್ರ್ಯಾಂಡ್ ಬೆಂಗಳೂರಿಗೆ ಭರ್ಜರಿ ಕೊಡುಗೆಯನ್ನೇ ನೀಡಲಾಗಿದೆ.
ಹೌದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆ ನಡೆದು ಬರೋಬ್ಬರಿ 5 ವರ್ಷಗಳೇ ಆಗಿವೆ. ಇದೀಗ ಬೆಂಗಳೂರು ಚುನಾವಣೆ ಮಾಡಲೇಬೇಕು ಎನ್ನುವ ವಾತಾವರಣವಿದೆ. ಅಲ್ಲದೆ ನಗರದಲ್ಲಿ ಅಭಿವೃದ್ಧಿಗೆ ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯ ಅಡಿಯಲ್ಲಿ ವಿವಿಧ ಯೋಜನೆಗಳನ್ನು ಘೋಷಣೆ ಮಾಡಿದೆ. ಬ್ರ್ಯಾಂಡ್ ಬೆಂಗಳೂರಿಗೆ ಈ ಬಜೆಟ್ನಲ್ಲಿ 1,800 ಕೋಟಿ ಅನುದಾನ ಮೀಸಲಿರಿಸಲಾಗಿದೆ.
ಅಲ್ಲದೆ ಟನಲ್ ರೋಡ್, ಮೆಟ್ರೋ ಅಭಿವೃದ್ಧಿ ಹಾಗೂ ಬೆಂಗಳೂರಿನ ಹೃದಯಭಾಗ ಎಂದೇ ಪರಿಗಣಿಸಲಾಗುವ ಹಾಗೂ ನಗರ ಸಂಚಾರದ ಕೇಂದ್ರ ಬಿಂದುವಾಗಿರುವ ಮೆಜೆಸ್ಟಿಕ್ ಅಭಿವೃದ್ಧಿಗೆ ಯೋಜನೆ ರೂಪಿಸಿಕೊಳ್ಳಲಾಗುತ್ತಿದೆ. ಅಲ್ಲದೆ ನಗರದಲ್ಲಿ ಕಾನೂನು ಹಾಗೂ ಸುಸವ್ಯವಸ್ಥೆಗೂ ಆದ್ಯತೆ ನೀಡಲಾಗಿದೆ. 3 ಸಾವಿರ ಕೋಟಿ ರೂಪಾಯಿ: ಬೆಂಗಳೂರು ಅಭಿವೃದ್ಧಿಗೆ ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯ ಅಡಿಯಲ್ಲಿ ಒಟ್ಟು 21 ಯೋಜನೆಗಳಿಗೆ ಅನುದಾನ ಘೋಷಣೆ ಮಾಡಲಾಗಿದೆ. ಬೆಂಗಳೂರಿನ ಹವಾಮಾನ ವೈಪರೀತ್ಯ ಹಾಗೂ ಎಸ್ಟಿಪಿ ಮತ್ತು ಒಳಚರಂಡಿ ವ್ಯವಸ್ಥೆಗಾಗಿ ಬರೋಬ್ಬರಿ 3000 ಸಾವಿರ ಕೋಟಿ ರೂಪಾಯಿಯನ್ನು ಘೋಷಣೆ ಮಾಡಲಾಗಿದೆ.