ಬೆಂಗಳೂರು : ಎರಡನೇ ವಿಮಾನ ನಿಲ್ದಾಣದ ಸ್ಥಳದ ವಿಚಾರವು ಹಲವು ಕಾರಣಗಳಿಂದ ಕಗ್ಗಂಟಾಗಿ ಉಳಿದಿತ್ತು. ಬೆಂಗಳೂರಿಗೆ ಎರಡನೇ ಏರ್ಪೋರ್ಟ್ ಯಾವ ಜಾಗದಲ್ಲಿ ನಿರ್ಮಾಣವಾಗಲಿದೆ ಎಂಬ ಬಗ್ಗೆಯೂ ನಿಖರ ಮಾಹಿತಿ ಇರಲಿಲ್ಲ. ಮತ್ತೊಂದೆಡೆ ಎಚ್ಎಎಲ್ ಏರ್ಪೋರ್ಟ್ ಪುನರಾರಂಭದ ಬಗ್ಗೆ ಚರ್ಚೆ ನಡೆಯುತ್ತಿದೆ. ಇದೀಗ ಎರಡನೇ ಏರ್ಪೋರ್ಟ್ ಬಗ್ಗೆಯೂ ಮಹತ್ವದ ಮಾಹಿತಿ ಲಭ್ಯವಾಗಿದೆ. ಯಾವ ಜಾಗದಲ್ಲಿ ಈ ಹೊಸ ಏರ್ಪೋರ್ಟ್ ತಲೆ ಎತ್ತಲಿದೆ. ಇದಕ್ಕೆ ಏನೆಲ್ಲ ತಯಾರಿ ನಡೆದಿದೆ ಎಂಬುದರ ಕುರಿತು ಅಪ್ಡೇಟ್ಸ್ ಇಲ್ಲಿದೆ
ಈಗಾಗಲೇ ಬೆಂಗಳೂರಿನ ದೇವನಹಳ್ಳಿ ಬಳಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ಎರಡು ಟರ್ಮಿನಲ್ಗಳ ಮೂಲಕ ಕಾರ್ಯಾಚರಣೆ ನಡೆಸುತ್ತಿದೆ. ಆದರೂ ಈ ಏರ್ಪೋರ್ಟ್ನ ಮೇಲಿನ ಒತ್ತಡ ತಗ್ಗಿಸಲು ಬೆಂಗಳೂರಿಗೆ ಎರಡನೇ ಏರ್ಪೋರ್ಟ್ ಬೇಕು ಎಂದು ರಾಜ್ಯ ಸರ್ಕಾರ ತರಾತುರಿಯಲ್ಲಿದೆ. ಹೀಗಾಗಿ ಕಳೆದ ಒಂದು ವರ್ಷದಿಂದಲೂ ಈ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇದ್ದವು. ಬೆಂಗಳೂರಿಗೆ ಸಮೀಪವೇ ಈ ಏರ್ಪೋರ್ಟ್ ನಿರ್ಮಾಣವಾಗಬೇಕು ಎಂದು ಉದ್ದೇಶಿಸಲಾಗಿತ್ತು. ಆದರೆ ಯಾವ ಜಾಗದಲ್ಲಿ ಏರ್ಪೋರ್ಟ್ ಬರುತ್ತೆ? ಎಂದು ಅಂತಿಮ ನಿರ್ಧಾರಕ್ಕೆ ಬಂದಿರಲಿಲ್ಲ. ಇದೀಗ ಎರಡನೇ ಏರ್ಪೋರ್ಟ್ಗಾಗಿ ಮೂರು ಸ್ಥಳಗಳನ್ನು ನಿಗದಿಪಡಿಸಲಾಗಿದೆ. ಅವು ಯಾವುವು? ಎಂದೂ ಅಧಿಕೃತ ಮಾಹಿತಿ ಹೊರಬಿದ್ದಿದೆ.
ಬೆಂಗಳೂರಿನ 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ ಕೇಂದ್ರ ಸರ್ಕಾರಕ್ಕೆ 3 ಸ್ಥಳಗಳನ್ನು ಪ್ರಸ್ತಾಪಿಸಲಾಗಿದೆ. ಹಾರೋಹಳ್ಳಿ ಬಳಿಯ ಕನಕಪುರ ರಸ್ತೆಯಲ್ಲಿ ಎರಡು ಜಾಗ ಹಾಗೂ ನೆಲಮಂಗಲ ಬಳಿಯ ಕುಣಿಗಲ್ ರಸ್ತೆಯಲ್ಲಿ ಒಂದು ಜಾಗವನ್ನು ಅಂತಿಮಗೊಳಿಸಲಾಗಿದೆ. ಈ ಬಗ್ಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಅನುಮೋದನೆಗಾಗಿ ಪ್ರಸ್ತಾವನೆಯನ್ನೂ ಕಳುಹಿಸಲಾಗಿದೆ ಎಂದು ಸಚಿವ ಎಂಬಿ ಪಾಟೀಲ್ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಕರ್ನಾಟಕದ ಮೂಲಸೌಕರ್ಯವನ್ನು ಬಲಪಡಿಸುವ ಮತ್ತು ಬೆಂಗಳೂರಿನ ಜಾಗತಿಕ ಸಂಪರ್ಕವನ್ನು ಭವಿಷ್ಯಕ್ಕೆ ಉತ್ತಮಪಡಿಸುವ ನಿಟ್ಟಿನಲ್ಲಿ ಇದು ನಿರ್ಣಾಯಕ ಹೆಜ್ಜೆಯಾಗಿದೆ ಎಂದು ಎಂಬಿ ಪಾಟೀಲ್ ಹೇಳಿದ್ದಾರೆ.
ಬೆಂಗಳೂರು-ರಾಮನಗರ ಗಡಿಯಲ್ಲಿ ಎರಡು ಸ್ಥಳ ಫಿಕ್ಸ್! ನಿಗದಿ ಪಡಿಸಿರುವ ಎರಡು ಸ್ಥಳಗಳು ದಕ್ಷಿಣ ಬೆಂಗಳೂರಿನ ಕನಕಪುರ ರಸ್ತೆಯುದ್ದಕ್ಕೂ ಇವೆ. ಇದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ತದ್ದಿರುದ್ಧ ದಿಕ್ಕಿನಲ್ಲಿದೆ. ಈ ಎರಡರ ಪೈಕಿ ಒಂದು ಸ್ಥಳವು ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಗೆ ಬಂದರೆ, ಮತ್ತೊಂದು ರಾಮನಗರ ಜಿಲ್ಲೆಯ ವ್ಯಾಪ್ತಿಗೆ ಬರುತ್ತದೆ. ಹಾರೋಹಳ್ಳಿ ಬಳಿ ಗುರುತಿಸಿರುವ ಒಂದು ಸ್ಥಳವು ನಮ್ಮ ಮೆಟ್ರೋ ಹಸಿರು ಮಾರ್ಗದ ನಿಲ್ದಾಣದಿಂದ 10 ಕಿಲೋಮೀಟರ್ ದೂರದಲ್ಲಿದೆ ಎಂದು ಹೇಳಲಾಗುತ್ತಿದೆ.
ಕನಕಪುರ ರಸ್ತೆಯಲ್ಲಿರುವ ಗುರುತಿಸಲಾದ ಎರಡು ಸ್ಥಳಗಳ ಭೂಮಿಯ ವಿಸ್ತೀರ್ಣವು ಕ್ರಮವಾಗಿ 4,800 ಮತ್ತು 5,000 ಎಕರೆ ಎನ್ನಲಾಗಿದೆ. ಮೂರನೇ ಸ್ಥಳವು ನೆಲಮಂಗಲದ ಕುಣಿಗಲ್ ರಸ್ತೆಯಲ್ಲಿ ಗುರುತಿಸಲಾಗಿದೆ. ಇಲ್ಲಿ ಏರ್ಪೋರ್ಟ್ಗಾಗಿ 5,200 ಎಕರೆ ಭೂಮಿಯನ್ನು ಗುರುತಿಸಲಾಗಿದೆ. ಈ ಮೂರರಲ್ಲಿ ಒಂದು ಸ್ಥಳ ಫಿಕ್ಸ್ ಆಗುವುದು ಗ್ಯಾರಂಟಿ ಎನ್ನಲಾಗಿದೆ. ರಾಜ್ಯ ಸರ್ಕಾರವು ಈಗಾಗಲೇ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಪತ್ರ ಕಳುಹಿಸಿದೆ. ಅಂತಿಮಗೊಳಿಸುವ ಸ್ಥಳದಲ್ಲಿ ಕನಿಷ್ಠ 4,500 ಎಕರೆ ಭೂಮಿಯನ್ನು ಏರ್ಪೋರ್ಟ್ಗಾಗಿ ಒದಗಿಸಲು ಸಿದ್ಧವಿರುವುದಾಗಿ ರಾಜ್ಯ ಸರ್ಕಾರ ಹೇಳಿದೆ. ಗುರುತಿಸಲಾಗಿರುವ ಈ ಮೂರು ಸ್ಥಳಗಳು ಬೆಂಗಳೂರು ನಗರ ಕೇಂದ್ರಭಾಗದಿಂದ 50 ಕಿ.ಮೀ ವ್ಯಾಪ್ತಿಯಲ್ಲೇ ಇವೆ. ಅಲ್ಲದೆ ಇವು ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ ರಸ್ತೆಗಳಿಗೆ ಅತ್ಯುತ್ತಮ ಪ್ರವೇಶವನ್ನು ಹೊಂದಿವೆ ಎಂದು ರಾಜ್ಯ ಸರ್ಕಾರ ಸಚಿವಾಲಯಕ್ಕೆ ತಿಳಿಸಿದೆ. ನಗರದ 50 ಕಿ.ಮೀ ವ್ಯಾಪ್ತಿಯಲ್ಲಿ ನಿರ್ಮಿಸಲಾದ ಯಾವುದೇ ವಿಮಾನ ನಿಲ್ದಾಣವು ಆರ್ಥಿಕವಾಗಿ ಲಾಭದಾಯಕವಾಗಿರುತ್ತದೆ ಎಂದು ಸಚಿವಾಲಯ ಕೂಡ ಅಭಿಪ್ರಾಯಪಟ್ಟಿದೆ. ಶೀಘ್ರವೇ ಸಚಿವಾಲಯವು ಅಧಿಕಾರಿಗಳನ್ನು ಈ ಮೂರು ಸ್ಥಳಗಳ ಪರಿಶೀಲನೆಗೆ ಕಳುಹಿಸಿ ಕೊಡಲಿದೆ.